ರಸ್ತೆ ಅಭಿವೃದ್ಧಿಗೆ ನಾನೇ ಗೆದ್ದು ಬರಬೇಕಾಯಿತು: ಸಚಿವ ಚಲುವರಾಯಸ್ವಾಮಿ

| Published : Aug 17 2025, 01:38 AM IST

ರಸ್ತೆ ಅಭಿವೃದ್ಧಿಗೆ ನಾನೇ ಗೆದ್ದು ಬರಬೇಕಾಯಿತು: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಕೂಟಗಳ ಬಸದಿ ಮತ್ತು ಜೈನಮಠವಿರುವ ಕಂಬಹಳ್ಳಿಗೆ ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ರಸ್ತೆ ಮಾಡಿಸಿಕೊಟ್ಟು, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮೊರಾರ್ಜಿ ವಸತಿ ಶಾಲೆ ಮಂಜೂರು ಮಾಡಿಸಿಕೊಟ್ಟಿದ್ದೆ. ಆದರೆ, 10 ವರ್ಷ ಕಳೆದರೂ ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಳೆದ 7 ವರ್ಷದ ಹಿಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದಾಗ ಕಂಬದಹಳ್ಳಿಯಲ್ಲಿ ಗುಂಡಿಬಿದ್ದಿದ್ದ ರಸ್ತೆಗೆ ಕನಿಷ್ಠ ಮಣ್ಣು ಹಾಕಿಸಲು ಆಗಿರಲಿಲ್ಲ. ಈಗ ರಸ್ತೆ ಅಭಿವೃದ್ಧಿ ಪಡಿಸಲು ಮತ್ತೆ ನಾನೇ ಗೆದ್ದು ಬರಬೇಕಾಯಿತು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಕಂಬದಹಳ್ಳಿಯಲ್ಲಿ 1.5ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪಂಚಕೂಟಗಳ ಬಸದಿ ಮತ್ತು ಜೈನಮಠವಿರುವ ಕಂಬಹಳ್ಳಿಗೆ ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ರಸ್ತೆ ಮಾಡಿಸಿಕೊಟ್ಟು, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮೊರಾರ್ಜಿ ವಸತಿ ಶಾಲೆ ಮಂಜೂರು ಮಾಡಿಸಿಕೊಟ್ಟಿದ್ದೆ. ಆದರೆ, 10 ವರ್ಷ ಕಳೆದರೂ ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ ಎಂದರು.

2018ರ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಬಹಳ ಕಷ್ಟಪಟ್ಟು ಯಶಸ್ವಿಯಾದ ನೀವು ನಂತರದಲ್ಲಿ ಆಯ್ಕೆಯಾದವರನ್ನು ರಸ್ತೆ ಮಾಡಿಸಿಕೊಡಿ ಎಂದು ಕೇಳಲಿಲ್ಲವೇಕೆ. ಶಾಸಕರಾಗಿ ಆಯ್ಕೆಯಾಗುವುದು ಕಾಲಹರಣ ಮಾಡಲಿಕ್ಕೋಸ್ಕರವಲ್ಲ. ಅಧಿಕಾರ ಇರಲಿ ಇಲ್ಲದಿರಲಿ ಆಡಳಿತ ಪಕ್ಷದ ಶಾಸಕನಾಗಿರಲಿ ಅಥವಾ ವಿಪಕ್ಷದ ಶಾಸಕನಾಗಿರಲಿ ಕ್ಷೇತ್ರದಲ್ಲಿ ಕೆಲಸ ಮಾಡುವ ಇಚ್ಚಾಶಕ್ತಿ ಇರಬೇಕು. ಗ್ರಾಮದಲ್ಲಿ ನೆನೆಗುದಿಗೆ ಬಿದ್ದಿರುವ ಮೊರಾರ್ಜಿ ವಸತಿ ಶಾಲಾ ಕಟ್ಟಡ ನಿರ್ಮಾಣಕ್ಕೆ 20ಕೋಟಿ ರು. ಮಂಜೂರು ಮಾಡಿಸಿದ್ದೇನೆ ಎಂದರು.

2013ರಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಿಂಡಿಗನವಿಲೆ ಹೋಬಳಿಯ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಮಂಜೂರಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಈ ಕೆಲಸ ಪೂರ್ಣಗೊಳಿಸುತ್ತಾರಂತೆ ಎಂದು ನನ್ನನ್ನು ಸೋಲಿಸಲಾಯಿತು. ತಾಲೂಕಿನಲ್ಲಿ ಜೆಡಿಎಸ್ ಪಕ್ಷದವರೇ ಶಾಸಕರಾಗಿ ಆಯ್ಕೆಯಾದರೂ ಕೂಡ 5 ವರ್ಷ ಕಳೆದರೂ ಬಿಂಡಿಗನವಿಲೆ ಕೆರೆಗೆ ನೀರು ತರಲು ಆಗಲಿಲ್ಲ ಎಂದರು.

ನೆನೆಗುದಿಗೆ ಬಿದ್ದಿದ್ದ ಆ ಯೋಜನೆಗೆ ಗಿಡುವಿನಹೊಸಹಳ್ಳಿ ಸಮೀಪ ಇಂದು ಭೂಮಿ ಪೂಜೆ ನೆರವೇರಿಸಿದ್ದೇನೆ. 2026ರ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಂಡು ಈ ಭಾಗದ ಎಲ್ಲಾ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿದು ಬರಲಿದೆ. ಈಗಲಾದರೂ ನಿಮಗೆ ದೇವರು ಒಳ್ಳೆ ಬುದ್ಧಿ ಕೊಟ್ಟು ಕೆಲಸ ಮಾಡುವವರಿಗೆ ಸಹಾಯ ಮಾಡುವ ಮನಸ್ಸು ಕೊಡಲಿ. ಯಾವುದೋ ವ್ಯಾಮೋಹ ಭ್ರಮೆ ಬಿಟ್ಟು ಚುನಾವಣೆ ಬಂದಾಗ ಕೆಲಸ ಮಾಡುವವರ ಪರ ನಿಲ್ಲಬೇಕು ಎಂದರು.

ಇದೇ ವೇಳೆ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಕಂಬದಹಳ್ಳಿ ಜೈನಮಠದ ಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಶಾಲು ಹೊದಿಸಿ ಆಶೀರ್ವದಿಸಿದರು. ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಲೋಕೋಪಯೋಗಿ ಇಲಾಖೆ ಎಇಇ ನಿಂಗರಾಜು, ಎಇ ಪರಮೇಶ್, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ರಾಜೇಗೌಡ, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ, ಮುಖಂಡರಾದ ಎನ್.ಟಿ.ಕೃಷ್ಣಮೂರ್ತಿ, ಆರ್.ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.