ಸಾರಾಂಶ
ಧಾರವಾಡ: ಇಲ್ಲಿಯ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ (ಎಎಸ್‌ಪಿ) ನಾರಾಯಣ ಭರಮನಿ ಅವರು ತಮ್ಮ ಸ್ವಯಂ ನಿವೃತ್ತಿ ಘೋಷಣೆ ನಿರ್ಧಾರದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ.
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ನಾರಾಯಣ ಭರಮನಿ ಅವರು, ತಾವು ನೀಡಿದ ಸ್ವಯಂ ನಿವೃತ್ತಿ ಪತ್ರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಗುರುವಾರ ಸೇವೆಗೆ ಮತ್ತೆ ಹಾಜರಾಗಿದ್ದು, ಮಾಧ್ಯಮಗಳಿಗಳೊಂದಿಗೆ ಮಾತನಾಡಿದ್ದಾರೆ.ತಾವು ಶಿಸ್ತಿನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಂದು ತಮಗೆ ಆದ ನೋವಿನ ಭಾವನೆಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಕುರಿತು ಈಗಾಗಲೇ ಮೇಲಾಧಿಕಾರಿಗಳು, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಮಾತನಾಡಿದ್ದಾರೆ. ಈಗ ನಾನು ದೈನಂದಿನ ಕೆಲಸಕ್ಕೆ ಹಾಜರಾಗಿರುವೆ. ಸ್ವಯಂ ನಿವೃತ್ತಿಯ ಪತ್ರದ ಅಂಗೀಕಾರದ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಏನಾಗಿತ್ತು?: ಕಳೆದ ಜೂನ್ 12 ರಂದು ಮೇಲಾಧಿಕಾರಿಗಳಿಗೆ ತಾವು ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದಾಗಿ ಭರಮನಿ ಪತ್ರ ಬರೆದಿದ್ದರು. ಅವರ ಈ ನಿರ್ಧಾರಕ್ಕೆ ಕಾರಣವಾಗಿದ್ದು ಕೆಲ ತಿಂಗಳ ಹಿಂದೆ ಬೆಳಗಾವಿಯ ಗ್ಯಾರಂಟಿ ಸಮಾವೇಶದಲ್ಲಿ ನಡೆದಿದ್ದ ಕಹಿ ಘಟನೆ. ಗೃಹ ಇಲಾಖೆಗೆ ಭರಮನಿ ಅವರು ಬರೆದಿರುವ ಪತ್ರದಲ್ಲೂ ಇದೇ ಅಂಶವನ್ನು ಕಾಣಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವಾಗ ಬಿಜೆಪಿ ಕಾರ್ಯಕರ್ತೆಯರು ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಇದರಿಂದ ಸಿಡಿಮಿಡಿಗೊಂಡಿದ್ದ ಸಿದ್ದರಾಮಯ್ಯನವರು ವೇದಿಕೆಯಲ್ಲಿಯೇ ಎಸ್ಪಿ ಯಾರು ಎಂದು ಕೂಗಿದ್ದರು. ಕರ್ತವ್ಯದ ಮೇಲೆ ಬೆಳಗಾವಿಗೆ ಹೋಗಿದ್ದ ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ, ಮುಖ್ಯಮಂತ್ರಿ ಬಳಿ ಹೋಗಿದ್ದರು. ಆಗ ಮುಖ್ಯಮಂತ್ರಿಗಳು ಸಿಟ್ಟಿನಿಂದ ಬೈಯ್ದು, ಭರಮನಿ ಮೇಲೆ ಕೈ ಎತ್ತಿದ್ದರು.ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ಭರಮನಿ ಜೂನ್ 12ರಂದು ತಮ್ಮ ಇಲಾಖೆಗೆ ಸ್ವಯಂ ನಿವೃತ್ತಿ ತೆಗೆದುಕೊಳ್ಳುವುದಾಗಿ ಪತ್ರ ಬರೆದಿದ್ದಾರೆ. ಈ ವಿಚಾರ ಹೊರ ಬೀಳುತ್ತಿದ್ದಂತೆಯೇ ಭರಮನಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರು. ಗುರುವಾರ ತಾವು ದೈನಂದಿನ ಕೆಲಸಕ್ಕೆ ಹಾಜರಾಗುತ್ತಿದ್ದು, ಸ್ವಯಂ ನಿವೃತ್ತಿ ವಿಷಯ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳಿದ್ದು, ಸರ್ಕಾರ ಅವರ ಸ್ವಯಂ ನಿವೃತ್ತಿಯನ್ನು ಸ್ವೀಕಾರ ಮಾಡಿಲ್ಲ ಎನ್ನಲಾಗಿದೆ.