ಮೇಲುಕೋಟೆ ಕ್ಷೇತ್ರದ ಶೈಕ್ಷಣಿಕ ಪರಿಸರದ ಅಭಿವೃದ್ಧಿಗಾಗಿ ತೊಡಗಿಸಿಕೊಂಡು ಮೇಲುಕೋಟೆ ಸೇರಿ ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಪ್ರತಿ ಮೂರು ಕಿ ಮೀಗೆ ಸರ್ಕಾರಿ ಪ್ರೌಢಶಾಲೆಗಳು ಹೋಬಳಿಗೆರಡು ವಸತಿ ಶಾಲೆಗಳು ಮತ್ತು ಆಧುನಿಕ ವ್ಯವಸ್ಥೆ ಇರುವ ವಸತಿನಿಲಗಳನ್ನು ಮಂಜೂರು ಮಾಡಿಸಿದ್ದೇನೆ. ಇದರಿಂದ ಸಾವಿರಾರು ಮಕ್ಕಳಿಗೆ ಅನುಕೂಲವಾಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಅಮೆರಿಕ ದೇಶದ ಶಾಲಾ ಶೈಕ್ಷಣಿಕ ಪರಿಸರ ನಮ್ಮಲ್ಲೂ ಸೃಷ್ಟಿಯಾಗಬೇಕಾದ ಅಗತ್ಯವಿದೆ. ಹೀಗಾಗಿ ಮೇಲುಕೋಟೆ ಕ್ಷೇತ್ರದ ಮಕ್ಕಳನ್ನು ಅಮೆರಿಕಾಗೆ ಕರೆದುಕೊಂಡು ಹೋಗಿ ಅಲ್ಲಿನ ಶಿಕ್ಷಣವನ್ನು ಪರಿಚಯಿಸುವ ಯೋಜನೆ ರೂಪಿಸಿದ್ದೇನೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.ಪಾಂಡವಪುರ ವಿದ್ಯಾಪ್ರಚಾರ ಸಂಘದ ವಿಜಯ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ವಿದ್ಯಾರ್ಥಿಗಳ ಸಮುದಾಯ ಜೀವನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದವರೆದ ಅಮೆರಿಕಾ ದೇಶ ಶೈಕ್ಷಣಿಕ ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತುನೀಡಿದೆ. ಅಲ್ಲಿನ ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳ ತಂಡವನ್ನು ಚಿನಕುರಳಿಗೂ ಕರೆತರಲಾಗುತ್ತಿದೆ ಎಂದರು.

ಮೇಲುಕೋಟೆ ಕ್ಷೇತ್ರದ ಶೈಕ್ಷಣಿಕ ಪರಿಸರದ ಅಭಿವೃದ್ಧಿಗಾಗಿ ತೊಡಗಿಸಿಕೊಂಡು ಮೇಲುಕೋಟೆ ಸೇರಿ ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಪ್ರತಿ ಮೂರು ಕಿ ಮೀಗೆ ಸರ್ಕಾರಿ ಪ್ರೌಢಶಾಲೆಗಳು ಹೋಬಳಿಗೆರಡು ವಸತಿ ಶಾಲೆಗಳು ಮತ್ತು ಆಧುನಿಕ ವ್ಯವಸ್ಥೆ ಇರುವ ವಸತಿನಿಲಗಳನ್ನು ಮಂಜೂರು ಮಾಡಿಸಿದ್ದೇನೆ. ಇದರಿಂದ ಸಾವಿರಾರು ಮಕ್ಕಳಿಗೆ ಅನುಕೂಲವಾಗಿದೆ ಎಂದರು.

ಜಾಗತಿಕ ಮಟ್ಟದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಕಾರಣದಿಂದ ಚಿನಕುರುಳಿಯಲ್ಲಿ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪಾಂಡವಪುರ ವಿದ್ಯಾಪ್ರಚಾರ ಸಂಘದ ಶಿಕ್ಷಣ ಸಂಸ್ಥೆ ಸ್ವಾತಂತ್ರ ಪೂರ್ವದಲ್ಲಿ ಪ್ರಾರಂಭವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಯಾಗಿ 80 ವರ್ಷ ಪೂರೈಸಿ ಮುನ್ನಡೆದಿದೆ ಎಂದರು.

ವಿದ್ಯಾಪ್ರಚಾರ ಸಂಘದ ಅಧ್ಯಕ್ಷನಾಗಿ ನಾನು, ಗೌರವ ಕಾರ್ಯದರ್ಶಿ ಬಸವರಾಜು ಮತ್ತು ಸಂಘದ ಎಲ್ಲರ ಸಹಕಾರದಲ್ಲಿ ಹಲವಾರು ಶೈಕ್ಷಣಿಕ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮೇಲುಕೋಟೆಯಲ್ಲಿ ಸಮುದಾಯ ಜೀವನ ಶಿಬಿರ ಹಮ್ಮಿಕೊಂಡಿರುವ ಕಾಲೇಜಿನ ವಿದ್ಯಾರ್ಥಿಗಳು ಜನಜೀವನದ ಬಗ್ಗೆ ತಿಳಿದುಕೊಂಡು ಸಾಮಾನ್ಯರೊಂದಿಗೆ ಬೆರೆತು ಶಿಬಿರದ ಉದ್ದೇಶವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಬಿರ ಉದ್ಘಾಟಿಸಿದ ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ ಶಿವಚಿತ್ತಪ್ಪ ಮಾತನಾಡಿ, ಜಾತಿ, ಮತ, ಧರ್ಮಗಳ ಬೇದವಿಲ್ಲದೆ ಎಲ್ಲರೂ ದೇಶದ ಪ್ರಗತಿಗೆ ಮುಂದಾಗಬೇಕು ಎಂಬ ಆಶಯದಿಂದ ಶಿಬಿರ ಆಯೋಜಿಸಿದೆ ಎಂದರು.

ಪಠ್ಯ ಚಟುವಟಿಕೆಯಂತೆ ಸಮುದಾಯ ಜೀವಿನ ಶಿಬಿರ ಸಹ ಒಂದು ಭಾಗವಾಗಿದೆ. ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಶಿಬಿರ ನಡೆಯುತ್ತಿದೆ. ಜೀವನ ಮೌಲ್ಯಗಳನ್ನು ತಿಳಿಸಿಕೊಳ್ಳಲು ಸಹಕಾರಿಯಾಗಿ ಪ್ರತಿ ವಿದ್ಯಾರ್ಥಿ ಭಾಗವಹಿಸುವುದು ಕಡ್ಡಾಯವಾಗಿದೆ. ಬಿ.ಇಡಿ ಶಿಕ್ಷಣಾರ್ಥಿಗಳು ಜೀವನ ಮೌಲ್ಯಗಳನ್ನು ಅರಿತು ಅಳವಡಿಸಿಕೊಂಡು ಮುಂದೆ ಶಿಕ್ಷಕರ ವೃತ್ತಿಜೀವನದಲ್ಲಿ ಮಕ್ಕಳಿಗೂ ಮಾರ್ಗದರ್ಶನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ಯಾ ಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು, ಸೆನೆಟ್ ಸದಸ್ಯ ನಾಗರಾಜೇಗೌಡ, ಶಿಭಿರಾಧಿಕಾರಿ ಡಾ.ಎನ್.ಕೆ. ವೆಂಕಟೇಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಜಿ.ಕೆ ಕುಮಾರ್, ಹರಿಧರ ಉಪನ್ಯಾಸಕರಾದ ಆಶಾ, ಭಾರತಿ ಮಧುಸೂಧನ್ ಉಪಸ್ಥಿತರಿದ್ದರು.

ನವರಾತ್ರಿ-ನೃತ್ಯ ಸಂಗೀತೋತ್ಸವಕ್ಕೂ ಮೆರಗು

ಶಿಬಿರದಲ್ಲಿ ಪಾಲ್ಗೊಂಡ 200ಕ್ಕೂ ಹೆಚ್ಚು ಬಿಇಡಿ ವಿದ್ಯಾರ್ಥಿಗಳು ವಿದ್ಯಾಪ್ರಚಾರ ಸಂಘದ ಅಧ್ಯಕ್ಷ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಗೌರವ ಕಾರ್ಯದರ್ಶಿ ಬಸವರಾಜು ಸೂಚನೆಯಂತೆ ಶನಿವಾರ ರಾತ್ರಿ ಚೆಲುವನಾರಾಯಣಸ್ವಾಮಿ ನವರಾತ್ರಿ ಸಂಗೀತ ನೃತ್ಯೋತ್ಸವದಲ್ಲಿ ಭಾಗಿಯಾಗಿ ಶಿಬಿರಾಧಿಕಾರಿ ಪ್ರೊ.ಎನ್.ಕೆ ವೆಂಕಟೇಗೌಡ ಮಾರ್ಗದರ್ಶನದಲ್ಲಿ ಶಿವನೃತ್ಯ, ಭರತನಾಟ್ಯ, ಎಲ್ಲಮ್ಮದೇವಿ ಸಮೂಹ ನೃತ್ಯ ಚಾಮುಂಡಿ ನೃತ್ಯ ಸೇರಿದಂತೆ 20ಕ್ಕೂ ಹೆಚ್ಚು ನೃತ್ಯಗಳು, ರಾಮಾನುಜರನ್ನು ಕುರಿತ ಕಿರುನಾಟಕ, ಶ್ರೀಕೃಷ್ಣ ಸಂಧಾನ, ರೈತರ ಬದುಕಿನ ಚಿತ್ರಣಗಳನ್ನು ಆಕರ್ಷಕವಾಗಿ ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೊಂಡರು. ಇದಕ್ಕೂ ಮುನ್ನ ಮಾಜಿ ಸಚಿವ ಸಿಎಸ್ಪಿ ಆಹ್ವಾನದ ಮೇರೆಗೆ ಚಿನಕುರಳಿಗೆ ತೆರಳಿ ಶಾಲೆ ಪರಿಸರ ವೀಕ್ಷಿಸಿ ಭೂರಿಬೋಜನ ಸವಿದ ಶಿಬಿರಾರ್ಥಿಗಳು ಶೈಕ್ಷಣಿಕ ಪರಿಸರದ ಮಾಹಿತಿ ಪಡೆದುಕೊಂಡರು.