ಸಾರಾಂಶ
ಬೆಂಗಳೂರು : ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರನ್ನು ಎರಡನೇ ಬಾರಿ ವಿಶೇಷ ತನಿಖಾ ದಳವು (ಎಸ್ಐಟಿ) ಶುಕ್ರವಾರ ಸುದೀರ್ಘ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದೆ.
ನೋಟಿಸ್ ಹಿನ್ನೆಲೆಯಲ್ಲಿ ಸಿಐಡಿ ಕೇಂದ್ರ ಕಚೇರಿಯಲ್ಲಿ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ದದ್ದಲ್ ಹಾಜರಾಗಿದ್ದರು. ಬಳಿಕ ಸುಮಾರು 4 ತಾಸುಗಳಿಗೂ ಅಧಿಕ ಹೊತ್ತು ದದ್ದಲ್‌ರಿಗೆ ಪ್ರಶ್ನೆಗಳನ್ನು ಕೇಳಿ ಎಸ್‌ಐಟಿ ಬೆವರಿಳಿಸಿದೆ. ಈ ವೇಳೆ ತಾವು ತಪ್ಪು ಮಾಡಿಲ್ಲ. ನನ್ನ ಗಮನಕ್ಕೆ ಬಾರದೆ ಈ ಅಕ್ರಮ ನಡೆದಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ದದ್ದಲ್ ಅವರ ಸಮರ್ಥನೆಯನ್ನು ಸಂಪೂರ್ಣವಾಗಿ ಒಪ್ಪದ ಅಧಿಕಾರಿಗಳು, ಮತ್ತೆ ಅಗತ್ಯವಿದ್ದರೆ ವಿಚಾರಣೆಗೆ ಬರುವಂತೆ ಸೂಚಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಇದೇ ಪ್ರಕರಣದಲ್ಲಿ ಮಂಗಳವಾರ ಸಹ ಬಸನಗೌಡ ದದ್ದಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಈ ಅಕ್ರಮದಲ್ಲಿ ದದ್ದಲ್ ಅವರಿಗೆ ಜಾರಿ ನಿರ್ದೇಶನಾಲಯದ ತನಿಖೆ ಬಿಸಿ ಸಹ ತಟ್ಟಿದೆ.
ಮೊದಲ ದಿನ ಎಸ್‌ಐಟಿ ವಿಚಾರಣೆ ಮುಗಿದ ಮರುದಿನವೇ ಬಸನಗೌಡ ದದ್ದಲ್ ಹಾಗೂ ಆಪ್ತ ಸಹಾಯಕರ ಮನೆಗಳ ಮೇಲೆ ಇ.ಡಿ. ದಾಳಿ ನಡೆಸಿತ್ತು. ಸತತ ಎರಡು ದಿನಗಳು ಇ.ಡಿ. ದಾಳಿಗೊಳಗಾಗಿದ್ದ ಅವರು ಶುಕ್ರವಾರ ಮತ್ತೆ ಎಸ್‌ಐಟಿ ಮುಂದೆ ಹಾಜರಾಗಿದ್ದರು. ಒಂದೆಡೆ ಎಸ್‌ಐಟಿ, ಮತ್ತೊಂದೆಡೆ ಇ.ಡಿ. ಅಧಿಕಾರಿಗಳ ಪ್ರಶ್ನೆಗಳಿಗೆ ದದ್ದಲ್ ತತ್ತರಿಸಿದ್ದಾರೆ ಎನ್ನಲಾಗಿದೆ.
ಎಸ್‌ಐಟಿ ಅಧಿಕಾರಿಗಳ ಮುಂದೆ ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮುನ್ನವೇ ಈ ಅವ್ಯವಹಾರದ ಶುರುವಾಗಿದೆ. ನನಗೆ ಸಂಪೂರ್ಣ ಮಾಹಿತಿ ಇಲ್ಲ. ನನಗೆ ತಿಳಿಯದೆ ಅಧಿಕಾರಿಗಳು ಈ ಅಕ್ರಮ ನಡೆಸಿದ್ದಾರೆ ಎಂದು ಬಸನಗೌಡ ದದ್ದಲ್ ಅಲವತ್ತುಕೊಂಡಿರುವುದಾಗಿ ತಿಳಿದು ಬಂದಿದೆ.