ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ತವರು ಗ್ರಾಮದ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಸಾಧ್ಯವಾದಷ್ಟು ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭರವಸೆ ನೀಡಿದರು.ಸಮೀಪದ ಗುರುದೇವರಹಳ್ಳಿ ಕಾಲೋನಿಯ (ಜಿ.ಮಾದೇಗೌಡ ನಗರ) ಶ್ರೀವಿನಾಯಕ ದೇವಾಲಯದ ಕಾಂಪೌಂಡ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿರು. ನಾನು ರಾಜಕೀಯಕ್ಕೆ ಬಂದಾಗಿನಿಂದ ನನಗೆ ಅಧಿಕಾರ ಲಭಿಸದೆ ಇದ್ದರೂ ನನ್ನ ಗ್ರಾಮ ವ್ಯಾಪ್ತಿಯ ಗ್ರಾಪಂ ನಮ್ಮ ಬೆಂಬಲಿಗರಿಗೆ ಸಿಕ್ಕಿದೆ ಎಂದರು.
ನನಗೆ ಅಧಿಕಾರ ಇಲ್ಲದೆ ತವರು ಗ್ರಾಮ ಅಭಿವೃದ್ಧಿ ಪಡಿಸಲು ಸಾಧ್ಯವಾಗಿರಲಿಲ್ಲ. ಆದರೂ ಕಳೆದ 20 ವರ್ಷಗಳಿಂದ ಗ್ರಾಮದ ಡೈರಿ, ಸೊಸೈಟಿ ಮತ್ತು ಗ್ರಾಮ ಪಂಚಾಯ್ತಿಯಲ್ಲಿ ನನ್ನ ಬೆಂಬಲಿಗರೆ ಬಹುಮತ ಪಡೆದು ಅಧಿಕಾರ ಉಳಿಸಿ ಕೊಂಡಿದ್ದು ನೀವು ನನ್ನ ಮೇಲೆ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.ಈ ವೇಳೆ ಛತ್ರದ ಹೊಸಹಳ್ಳಿ ರಸ್ತೆಯಲ್ಲಿ ಸರ್ಕಾರಿ ಶಾಲೆಯು ಆರೋಗ್ಯ ಇಲಾಖೆ ವಸತಿ ನಿಲಯದಲ್ಲಿ ನಡೆಯುತ್ತಿದೆ. ಅದನ್ನು ಖಾಲಿ ಮಾಡುವಂತೆ ಆರೋಗ್ಯ ಇಲಾಖೆಯವರು ಒತ್ತಡ ಹಾಕುತ್ತಿದ್ದಾರೆ. ಅಲ್ಲಿರುವ ಮಕ್ಕಳಿಗೆ ತೊಂದರೆ ಆಗುತಿರುವುದರಿಂದ ಶಾಲಾ ಕಟ್ಟಡ ನಿರ್ಮಿಸಿ ಕೊಡುವಂತೆ ಮಧು ಮಾದೇಗೌಡರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಶಿಕ್ಷಣ ಸಚಿವರ ಗಮನಕ್ಕೆ ತಂದು ಕಾಲೋನಿಯಲ್ಲಿ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ತಾಪಂ ಮಾಜಿ ಸದಸ್ಯ ಭರತೇಶ್, ಅಣ್ಣೂರು ಸೋಸೈಟಿ ಮಾಜಿ ಅಧ್ಯಕ್ಷ ಆರ್.ಸಿದ್ದಪ್ಪ, ಚಿಕ್ಕರಸಿನಕೆರೆ ಗ್ರಾಪಂ ಅಧ್ಯಕ್ಷೆ ಕಮಲಮ್ಮ ಬೋರೇಗೌಡ, ಸದಸ್ಯರಾದ ಕುಮಾರ್, ಮಾಜಿ ಸದಸ್ಯರಾದ ಪುಟ್ಟೇಗೌಡ, ಗುರುದೇವರಹಳ್ಳಿ ಕಾಲೋನಿ ಡೇರಿ ಅಧ್ಯಕ್ಷೆ ನಂದಿನಿ ಕೃಷ್ಣ, ಮುಖಂಡರಾದ ಜವರಾಯಿಗೌಡ, ಉಮೇಶ್, ಬೋರೇಗೌಡ, ಮಧು, ಸ್ವಾಮಿ, ಕೃಷ್ಣ, ಬೋರೇಗೌಡ, ರಾಮಚಂದ್ರು ಸೇರಿದಂತೆ ಮತ್ತಿತರಿದ್ದರು.
ಮೇ 10, 11ರಂದು ರಾಜ್ಯ ಮಟ್ಟದ ಅಧ್ಯಯನ ಶಿಬಿರ: ಬಿ.ರಾಜಶೇಖರಮೂರ್ತಿಕನ್ನಡಪ್ರಭ ವಾರ್ತೆ ಮಂಡ್ಯ
ದಲಿತ ಹಕ್ಕುಗಳ ಸಮಿತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಮೇ 10 ಮತ್ತು 11ರಂದು ಜಾತಿ ಅಶ್ಪೃಶ್ಯತೆ ಆಚರಣೆ ವಿರುದ್ಧ ಹಾಗೂ ದಲಿತರ ಸಾಮಾಜಿಕ ಆರ್ಥಿಕ, ರಾಜಕೀಯ ಅಭಿವೃದ್ಧಿ ಕುರಿತು ರಾಜ್ಯ ಮಟ್ಟದ ಅಭಿವೃದ್ಧಿ ಶಿಬಿರ ಆಯೋಜಿಸಲಾಗಿದೆ ಎಂದು ಸಮಿತಿ ರಾಜ್ಯಾಧ್ಯಕ್ಷ ಬಿ.ರಾಜಶೇಖರಮೂರ್ತಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಬಿರವನ್ನು ಸಮಾಜ ವಿಜ್ಞಾನಿ ಜಿ.ಎನ್.ನಾಗರಾಜು ಉದ್ಘಾಟಿಸುವರು. ಜಾತಿ, ಹುಟ್ಟು, ವಿಕಾಸ, ವಿನಾಶ ಕುರಿತು ವಿಷಯ ಮಂಡಿಸುವರು. ದಲಿತರ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿ ಕುರಿತು ಬಿ. ರಾಜಶೇಖರ ಮೂರ್ತಿ ಉಪನ್ಯಾಸ ನೀಡುವರು. ಶಿಬಿರದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳನ್ನು ಪ್ರತಿನಿಧಿಸುವ 200 ಮಂದಿ ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.ಮೇ 11ರಂದು ದಲಿತರ ವಿಮೋಚನೆಯ ಹಾಡಿಗಳ ಕುರಿತು ಯು.ಬಸವರಾಜು, ಡಿಎಚ್‌ಎಸ್ ಸಂಘಟನೆ ಕುರಿತು ಗೋಪಾಲಕೃಷ್ಣ ಹರಳಹಳ್ಳಿ ಮತ್ತು ಡಿಎಚ್‌ಎಸ್ ಸಂಘಟನೆಯ ಕಾರ್ಯ ಯಯೋಜನೆ ಕುರಿತು ಎಸ್. ರಾಜಣ್ಣ ಉಪನ್ಯಾಸ ನೀಡುವರು ಎಂದರು.
ಸರ್ಕಾರಗಳು ದಲಿತ ಸಮುದಾಯಗಳ ಬಡವರನ್ನು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮೇಲೆತ್ತುವಂತಹ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ, ದಲಿತರ ಸ್ಥಿತಿ-ಗತಿಗಳಲ್ಲಿ ಬದಲಾವಣೆಗಳು ಆಗಿಲ್ಲ ಎಂಬುದನ್ನು 2017ರ ರತ್ನಪ್ರಭ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿನ ಅಂಕಿ-ಅಂಶಗಳು ಸಾಕ್ಷೀಕರಿಸುತ್ತವೆ ಎಂದರು.ಪರಿಶಿಷ್ಟ ಜಾತಿಯಲ್ಲಿ ಕೃಷಿ ಕಾರ್ಮಿಕರಾಗಿ ಶೇ.41.8, ಕೃಷಿಯೇತರ ಕಾರ್ಮಿಕರಾಗಿ 39.8 ಮಂದಿ ಇದ್ದರೆ, 81.6ರಷ್ಟು ದಿನಗೂಲಿಗಳಾಗಿಯೇ ಉಳಿದುಕೊಂಡಿದ್ದಾರೆ. ಅದೇ ರೀತಿ ಪರಿಶಿಷ್ಟ ಪಂಗಡದಲ್ಲೂ ಶೇ.42.7ರಷ್ಟು ಕೃಷಿ ಕೂಲಿಕಾರರು ಮತ್ತು ಶೇ.29.7ರಷ್ಟು ಕೃಷಿಯೇತರ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಇಂತಹ ಬಡತನದಲ್ಲಿರುವ ದಲಿತರನ್ನು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮೇಲೆತ್ತಲು ಮೀಸಲಾತಿ ದೊರಕಿಸಿದ್ದರೂ ಬಹುಪಾಲು ರೈತರು ಶೋಚನೀಯ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ ಎಂದು ರತ್ನಪ್ರಭ ವರದಿ ತಿಳಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿ.ಕುಮಾರಿ, ಅಂಬೂಜಿ, ಗಿರಿಜಮ್ಮ ಸೇರಿದಂತೆ ಇತರರು ಇದ್ದರು.