ನಾನು ತಪ್ಪು ಮಾಡಿಲ್ಲ, ಮಾಡಲ್ಲ, ಮಾಡುವುದೂ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Sep 14 2024, 01:47 AM IST

ಸಾರಾಂಶ

ಬಿಜೆಪಿ-ಜೆಡಿಎಸ್‌ನವರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ಈಗಲು ಮಾಡಲ್ಲ, ಮುಂದೆ ಮಾಡುವುದೂ ಇಲ್ಲ. ಈ ದೇಶದ ಕಾನೂನಿನ ಮೇಲೆ ಗೌರವ ಇದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಅಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

-ನನಗೆ ನ್ಯಾಯ ಸಿಗುವ ವಿಶ್ವಾಸವಿದೆ: ಸಿದ್ದರಾಮಯ್ಯ -ನನ್ನ 40 ವರ್ಷದ ರಾಜಕೀಯ ಜೀವನ ತೆರೆದ ಪುಸ್ತಕ

-ಯಾರು ಬೇಕಾದರು ನೋಡಬಹುದುಕನ್ನಡಪ್ರಭ ವಾರ್ತೆ ಮಾಗಡಿ

ಬಿಜೆಪಿ-ಜೆಡಿಎಸ್‌ನವರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ಈಗಲು ಮಾಡಲ್ಲ, ಮುಂದೆ ಮಾಡುವುದೂ ಇಲ್ಲ. ಈ ದೇಶದ ಕಾನೂನಿನ ಮೇಲೆ ಗೌರವ ಇದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹೊಸಪೇಟೆ ಸರ್ಕಲ್‌ನಲ್ಲಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ನೆರವೇರಿಸಿದ ಅವರು, ನಾನು ರಾಜಕೀಯಕ್ಕೆ ಬಂದು 40 ವರ್ಷಗಳಾಗಿದ್ದು, ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಯಾರು ಬೇಕಾದರು ನೋಡಬಹುದು. ಈ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ವಿಶ್ವಾಸವಿದೆ. ಯಾರು ಏನೇ ಹೇಳಿದರೂ ನನ್ನ ಕೆಲಸ ಮಾಡಿಯೇ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮಾಡಬಾರದ ಕೆಲಸ ಮಾಡಿದ್ದಾರೆ. 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುವಂತೆ ನಾನು ಹೇಳಿದ್ದೆನಾ? ಕೋವಿಡ್ ನಲ್ಲಿ ಹಣ ಲೂಟಿ ಮಾಡುವಂತೆ ನಾವ್ ಹೇಳಿದ್ವಾ. ಇವರು ನಮ್ಮ ಬಗ್ಗೆಯೇ ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಹೇಳಿದವರಿಗೂ ನೀವು ಚಪ್ಪಾಳೆ ತಟ್ಟುತ್ತೀರಿ. ದಯಮಾಡಿ ಆ ಕೆಲಸ ಮಾಡಬೇಡಿ ಎಂದು ಕೈ ಮುಗಿದು ಕೇಳಿಕೊಂಡರು.

ಸುಳ್ಳು ಹೇಳುವವರನ್ನು ನಂಬಬೇಡಿ. ನಾವು ಜನರ ಒಳತಿಗಾಗಿ ಕೆಲಸ ಮಾಡುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ, ಉಚಿತ ಅಕ್ಕಿ ವಿತರಣೆ, ಉಚಿತ ವಿದ್ಯುತ್ ಪೂರೈಸುವ ಮೂಲಕ ಅಂಬೇಡ್ಕರ್ ಆಶಯದಂತೆ ಕೆಲಸ ಮಾಡುತ್ತಿದ್ದೇವೆ. ಅಷ್ಟಕ್ಕೂ ಸ್ವಾತಂತ್ರ್ಯ ಹೋರಾಟ ಮಾಡುವಾಗ ಬಿಜೆಪಿಯವರು ಎಲ್ಲಿದ್ದರು. ಬ್ರಿಟಿಷ್ ನವರ ಜೊತೆ ಶಾಮೀಲಾಗಿದ್ದರು. ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.

ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲವೆಂದು ಆರೋಪ ಮಾಡುತ್ತಿದ್ದಾರೆ. 56 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕೊಡುತ್ತಿದ್ದೇವೆ. ಒಂದು ಕುಟುಂಬಕ್ಕೆ ತಿಂಗಳಿಗೆ 4ರಿಂದ 5ಸಾವಿರ ಹಣ ಸಿಗುತ್ತಿದೆ. ಹಣ ಇಲ್ಲದೆ ಹೋಗಿದ್ದರೆ ಮಾಗಡಿ ಅಭಿವೃದ್ಧಿ ಕಾರ್ಯಗಳಿಗೆ 124 ಕೋಟಿ ಎಲ್ಲಿಂದ ಬಂತು. ನಮ್ಮ ಪಕ್ಷದ ಕಾರ್ಯಕರ್ತರು ಮಾತನಾಡುವುದು ಸ್ವಲ್ಪ ಕಡಿಮೆ. ಆದರೆ, ಬಿಜೆಪಿಯವರು ನೋಡಿ ಸುಳ್ಳನ್ನೇ ಎಲ್ಲಾ ಕಡೆ ಹೇಳಿಕೊಂಡು ಬರುತ್ತಾರೆ. ನಿಮಗೆ ಸತ್ಯ ಹೇಳೋಕೆ ಏಕೆ ಭಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎನ್ .ರಾಜಣ್ಣ, ಜಮೀರ್ ಅಹಮದ್ ಖಾನ್, ರಾಮಲಿಂಗಾರೆಡ್ಡಿ, ಮಧು ಬಂಗಾರಪ್ಪ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಲಕೃಷ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಇಕ್ಬಾಲ್ ಹುಸೇನ್, ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ರಾಮೋಜಿ ಗೌಡ, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಪಿ.ರಾಜಕುಮಾರ್, ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಎಂ.ಮಂಜುನಾಥ್, ರಾಜ್ಯ ಸಹಕಾರ ಮಹಾ ಮಂಡಳಿ ನಿಗಮದ ನಿರ್ದೇಶಕ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಎನ್. ಅಶೋಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ.ರಾಜು, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಪಿ.ನಾಗರಾಜ್, ಕೆ. ರಾಜಣ್ಣ (ಕೆಇಬಿ), ರಾಮನಗರ ಜಿಲ್ಲಾ ಸಹಕಾರ ಒಕ್ಕೂಟ ನಿಗಮದ ಅಧ್ಯಕ್ಷ ಎಂ.ಕೆ. ಧನಂಜಯ, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕಾರ್, ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ, ತಹಸೀಲ್ದಾರ್ ಶರತ್ ಕುಮಾರ್ ಇತರರು ಪಾಲ್ಗೊಂಡಿದ್ದರು.