ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆಯ ಕಬ್ಬು ಕಟಾವು ಮುಂಗಡ ಹಣದಲ್ಲಿ ನಾನು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಪಲಾಯನವಾದಿಯೂ ಅಲ್ಲ ಎಂದು ಕಾರ್ಖಾನೆಯ ನೌಕರ ಡಿ.ಎನ್.ಚಂದ್ರಶೇಖರ್ ಸ್ಪಷ್ಟನೆ ನೀಡಿದರು.ಮುಂಗಡ ಹಣವನ್ನು ನೀಡುವ ಮೊದಲು ಕಬ್ಬು ಕಟಾವು ಮೇಸ್ತ್ರಿಗಳನ್ನು ಕಂಪನಿಗೆ ಕರೆದು ಮೇಲಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಅಲ್ಲಿ ತೆಗೆದುಕೊಂಡ ನಿರ್ಣಯದಂತೆ ಮುಂಗಡ ಹಣದ ಭದ್ರತೆಗೆ ಎಲ್ಲಾ ದಾಖಲಾತಿಗಳನ್ನು ಮೇಸ್ತ್ರಿಗಳಿಂದ ಪಡೆಯಲಾಗಿರುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಅನುಮೋದನೆಗೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರಿಗೆ ನೀಡಲಾಗುತ್ತದೆ. ಮುಖ್ಯ ಹಣಕಾಸು ಅಧಿಕಾರಿ ಪರಿಶೀಲನೆ ನಡೆಸಿದ ಬಳಿಕ ಹಣಕಾಸು ವಿಭಾಗದಿಂದ ಮೇಸ್ತ್ರಿಗಳ ಖಾತೆಗೆ ಹಣ ನೇರವಾಗಿ ಜಮೆ ಮಾಡಲಾಗುತ್ತದೆ. ನಾನು ಯಾವ ಕಾರಣದಿಂದಲೂ ಹಣವನ್ನು ಪಡೆದಿರುವುದಿಲ್ಲ. ಬಾಕಿ ಹಣಕ್ಕೆ ಜವಾಬ್ದಾರನೂ ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಕಟಾವು ಮೇಸ್ತ್ರಿಗಳಿಗೆ ೩,೨೮,೭೫,೦೦೦ ರು. ಮುಂಗಡ ಹಣವನ್ನು ಕಾರ್ಖಾನೆ ವತಿಯಿಂದ ನೀಡಲಾಗಿದೆ. ಈ ಮೊತ್ತದಲ್ಲಿ ೨,೫೮,೨೩,೭೭೬ ರು. ಹಣವನ್ನು ಕಬ್ಬು ಕಟಾವು ಮೇಸ್ತ್ರಿಗಳಿಂದ ವಸೂಲಿ ಮಾಡಲಾಗಿದೆ. ಉಳಿದ ೭೦,೫೧,೨೨೪ ರು. ಮೇಸ್ತ್ರಿಗಳಿಂದ ಕಂಪನಿಗೆ ಬಾಕಿ ಇದೆ. ಇದಕ್ಕೆ ಕಾರಣವೇನೆಂದರೆ ಕಬ್ಬು ಕಟಾವು ಮೇಸ್ತ್ರಿಗಳಿಗೆ ನಿರಂತರವಾಗಿ ಕೆಎಲಸ ನೀಡಲು ಸಾಧ್ಯವಾಗಿರುವುದಿಲ್ಲ. ಕಂಪನಿಯ ಯಂತ್ರೋಪಕರಣಗಳ ತಾಂತ್ರಿಕ ದೋಷದಿಂದ ನಿರಂತರವಾಗಿ ಕಬ್ಬನ್ನು ನುರಿಸಿರುವುದಿಲ್ಲ. ಒಂದು ದಿನಕ್ಕೆ ಕಾರ್ಖಾನೆಯಲ್ಲಿ ೫ ಸಾವಿರ ಟನ್ ಕಬ್ಬು ನುರಿಸಬೇಕಿದ್ದರೂ ದಿನವೊಂದಕ್ಕೆ ಸರಾಸರಿ ೧೮೦೦ ಟನ್ ಕಬ್ಬನ್ನು ಮಾತ್ರ ನುರಿಸಲಾಗಿರುತ್ತದೆ. ಇದರಿಂದ ಕಂಪನಿಗೆ ಆರ್ಥಿಕ ನಷ್ಟ ಉಂಟಾಗಿರುತ್ತದೆ ಎಂದು ಹೇಳಿದರು.
ಮೇಸ್ತ್ರಿಗಳಿಂದ ಪಡೆದಿರುವ ದಾಖಲೆಗಳಿಂದ ಹಣ ವಸೂಲಾತಿಗಾಗಿ ಕಾರ್ಖಾನೆಯ ಆಡಳಿತ ಮಂಡಳಿ ತೀರ್ಮಾನದಂತೆ ಮಂಡ್ಯ ಘನ ನ್ಯಾಯಾಲಯದಲ್ಲಿ ೪೨ ಪ್ರಕರಣಗಳನ್ನು ದಾಖಲು ಮಾಡಿದ್ದು, ಅದರಲ್ಲಿ ೨೧ ಸ್ಥಳೀಯರು ಹಾಗೂ ೨೧ ಬಳ್ಳಾರಿ ಮೂಲದ ಮೇಸ್ತ್ರಿಗಳಾಗಿದ್ದಾರೆ ಎಂದರು.ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿಯಾಗಿ ಕಂಪನಿಯ ನಿಯಮಾನುಸಾರ ಬಾಕಿ ವಸೂಲಾತಿಗಾಗಿ ಎಲ್ಲಾ ಕಾನೂನು ಕ್ರಮಗಳನ್ನು ಅನುಸರಿಸಿದ್ದೇನೆ. ನಾನು ಯಾವ ತಪ್ಪನ್ನೂ ಮಾಡದೆ ಸುಳ್ಳು ಆರೋಪಕ್ಕೆ ಒಳಗಾಗಿದ್ದೇನೆ. ನಾನು ಭ್ರಷ್ಟಾಚಾರ ನಡೆಸಿದ್ದರೆ ನನ್ನ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದು. ಈ ವಿಚಾರದಲ್ಲಿ ತನಿಖೆ ಎದುರಿಸುವುದಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು.
ನಾನು ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ೧೪ ಮಂದಿ ಕ್ಷೇತ್ರ ಸಹಾಯಕರನ್ನು ಕೆಲಸದಿಂದ ಕೆಲಸದಿಂದ ತೆಗೆದುಹಾಕಿದ್ದು ಅವರು ನನ್ನ ಮೇಲಿನ ದ್ವೇಷದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಂದೆಯೂ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.