ಕನ್ನಡಪ್ರಭ ವಾರ್ತೆ ವಿಜಯಪುರ
ನಾವೇನೂ ಮಾತನಾಡಿಲ್ಲ. ರಾಜಕೀಯವೂ ಮಾತನಾಡಿಲ್ಲ. ಯಾವುದೇ ರೀತಿಯ ಒಪ್ಪಂದವೂ ಆಗಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದರು.ಇತ್ತೀಚೆಗೆ ಹುಬ್ಬಳ್ಳಿ ಬಳಿ ಛಬ್ಬಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಮುಖಾಮುಖಿ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪತ್ರಕರ್ತರು ಪಕ್ಷಾತೀತರಾಗಿರುತ್ತಾರೆ. ಅವರ ಮನೆಯಲ್ಲಿ ರಾಜಕಾರಣ ಮಾತನಾಡಲು ಬರುವುದಿಲ್ಲ. ಒಪ್ಪಂದ ಮಾತನಾಡಲು ಆಗುವುದಿಲ್ಲ. ಸುಮ್ನೇ ಆರಾಮಾ... ಆರಾಮ ಎಂದು ಎಷ್ಟೇ ಮಾತನಾಡಿದ್ದೇವೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದರು.ವಿಜಯೆಂದ್ರ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ. ಯಾರ ಜೊತೆಗೂ ನಾವೇನು ರಾಜಕೀಯ ಮಾತನಾಡಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಳಿಕವೇ ಮುಂದಿನ ಮಾತುಕತೆ. ನಮ್ಮ ನಡುವೆ ಏನೂ ಇಲ್ಲ ಎಂದು ವಿಜಯೇಂದ್ರ ಎಷ್ಟೇ ಪ್ರಚಾರ ಮಾಡಿದರೂ ನನಗೇನು ಸಮಸ್ಯೆಯಿಲ್ಲ. ನಾನು ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮಾಡಲು ಹೋಗುತ್ತಿದ್ದೇನೆ. ದೆಹಲಿಯಲ್ಲಿ ಯಾವುದೇ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲ್ಲ. ಕಬ್ಬು ಹೋರಾಟಗಾರರ ಬಗ್ಗೆ ಸಚಿವರ ಜೊತೆಗೆ ಮಾತನಾಡುತ್ತೇನೆ. ಬಿಜೆಪಿಗೆ ವಾಪಸ್ ಬಗ್ಗೆ ಯಾವುದೇ ನಾಯಕರ ಜೊತೆ ಭೇಟಿ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.ಮಾಜಿ ಸಚಿವ ಮುರುಗೇಶ ನಿರಾಣಿ ಅವರೊಂದಿಗೆ 2 ಗಂಟೆ ಯತ್ನಾಳ ಚರ್ಚೆ ನಡೆಸಿದ್ದಾರೆಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕಳೆದ 30 ರಿಂದ 35 ವರ್ಷಗಳಿಂದ ನಾರಾಯಣಸಾ ಭಾಂಡಗೆ ಅವರ ಮನೆಗೆ ದಸರಾ ಸಂದರ್ಭದಲ್ಲಿ ಊಟಕ್ಕೆ ಹೋಗುವುದು ಸಹಜ. ಆಯುಧ ಪೂಜೆ ದಿವಸ ಮನೆಯಲ್ಲಿ ದೇವಿಯ ಪ್ರಸಾದ ವ್ಯವಸ್ಥೆ ಮಾಡಿಸಿರುತ್ತಾರೆ. ನಾನು ಪ್ರಸಾದಕ್ಕಾಗಿ ಹೋಗಿದ್ದೆ. ಆಕಸ್ಮಿಕವಾಗಿ ಅಲ್ಲಿಗೆ ನಿರಾಣಿಯವರೂ ಬಂದರು. ಅವರು ಊಟ ಮಾಡಿದ್ದಾರೆ. ನಾನು ಊಟ ಮಾಡಿದ್ದೇನೆ. ನಂತರ ನನ್ನ ಪಾಡಿಗೆ ನಾನು ಬಂದೆ. ಅವರ ಪಾಡಿಗೆ ಅವರು ಹೋದರು. ನನ್ನ ವಾಹನದಲ್ಲಿ ನಾನು ಬಂದೆ. ಅವರ ವಾಹನದಲ್ಲಿ ಅವರು ಹೋದರು. ಎರಡು ಗಂಟೆ ಚರ್ಚೆಯಾಗಿಲ್ಲ. ನಾನು ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಂಡಿಲ್ಲ, ಮಾತುಕತೆ, ಚರ್ಚೆ, ಸಂಧಾನ ಏನೂ ಆಗಿಲ್ಲ ಎಂದರು.
