ಸಾರಾಂಶ
ರೈತರ ಬಗ್ಗೆ ಹಗುರುವಾಗಿ ನಾನು ಮಾತನಾಡಿಲ್ಲ, ನನ್ನ ಹೇಳಿಕೆ ಸಂಪೂರ್ಣ ಹಾಕದೆ ಮಾಧ್ಯಮಗಳು ತಿರುಚಿರುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ನ್ಯಾಯಾಲಯದ ತೀರ್ಪು ಬರುವ ತನಕ ಕ್ಷಮೆ ಕೇಳುವ ಪ್ರಶ್ನೆ ಬರುವುದಿಲ್ಲ ಎಂದು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಎಸ್ ಪಾಟೀಲ್ ರೈತರಿಗೆ ಸ್ಪಷ್ಪಪಡಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವರು ಆಗಮಿಸಿದಾಗ ರೈತ ಮುಖಂಡರು ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಾ ಹಾಗಾಗಿ ರೈತರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದಾಗ ಮಾತನಾಡಿದ ಸಚಿವರು ನಾನು ಅಂದಿನ ಸಭೆಯಲ್ಲಿ ಹೇಳಿದ್ದನ್ನು ಮಾಧ್ಯಮಗಳು ತಿರುಚಿವೆ ಎಂದರು.ನ್ಯಾಯಾಲಯದ ತೀರ್ಪು ಬರುವ ತನಕ ಕಾಯಬೇಕಿದೆ. ತೀರ್ಪು ಬಂದ ಬಳಿಕ ನಾನು ರೈತರ ಕ್ಷಮೆ ಕೋರುತ್ತೇನೆ ಆದರೆ ಮಾಧ್ಯಮದವರ ಕ್ಷಮೆ ಕೇಳುವುದಿಲ್ಲ ಎಂದು ಪುನರುಚ್ಚರಿಸಿದರು. ವೈಜ್ಞಾನಿಕ ಕೃಷಿಯನ್ನು ರೈತರು ಅಳವಡಿಸಿಕೊಂಡರೆ ಹೆಚ್ಚಿನ ಆದಾಯ ಬಂದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತ ಬರಲಿಲ್ಲ. ಪರಿಹಾರ ಕೊಡಬೇಕಾಗಲ್ಲ ಎಂದು ಹೇಳಿದ್ದೇ ಆದರೆ ನನ್ನ ಹೇಳಿಕೆ ಕೆಲ ಭಾಗವನ್ನು ತುಂಡರಿಸಿ ಹಾಕಿದ್ದಾರೆ ಅಷ್ಟೆ ಎಂದರು.
ಮನವಿ ಸಲ್ಲಿಕೆ:ಸಕ್ಕರೆ ಸಚಿವ ಶಿವಾನಂದ ಪಾಟೀಲರಿಗೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ರೈತರಿಗೆ ಕಳೆದ ವರ್ಷದ ಕಬ್ಬು ಬಾಕಿ ಹಣ ಸೇರಿದಂತೆ ನಾನಾ ಬೇಡಿಕೆ ಈಡೇರಿಸಬೇಕು ಎಂದು ಮನವಿ ಸಲ್ಲಿಸಿದರು.