ಪ್ರಿನ್ಸೆಸ್ ರಸ್ತೆಯ ಮುಂದಿನ ಭಾಗಕ್ಕೆ ಸಿದ್ದರಾಮಯ್ಯ ಹೆಸರಿಡಲು ಕೋರಿದ್ದೇನೆ: ಕೆ.ಹರೀಶ್ ಗೌಡ

| Published : Jan 07 2025, 12:15 AM IST

ಪ್ರಿನ್ಸೆಸ್ ರಸ್ತೆಯ ಮುಂದಿನ ಭಾಗಕ್ಕೆ ಸಿದ್ದರಾಮಯ್ಯ ಹೆಸರಿಡಲು ಕೋರಿದ್ದೇನೆ: ಕೆ.ಹರೀಶ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ರಾಜಮನೆತನದ ಬಗ್ಗೆ ಅಪಾರ ಗೌರವ ಇದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಬಗ್ಗೆಯೂ ಹೆಚ್ಚು ಗೌರವ ಭಾವನೆ ಹೊಂದಿದ್ದೇನೆ. ರಾಜಮನೆತನದವರ ಹೆಸರು ಬದಲಿಸಬೇಕು ಎಂಬ ಉದ್ದೇಶ ನನಗೆ ಇಲ್ಲ. ಆ ಕ್ಷೇತ್ರದ ಶಾಸಕನಾಗಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಬಂದಿದ್ದೇನೆ.

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಲ್.ಬಿ ರಸ್ತೆಯಿಂದ ಒಂಟಿಕೊಪ್ಪಲ್ ದೇವಸ್ಥಾನದವರೆಗಿನ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂಬ ಹೆಸರು ಇರುವುದು ಸತ್ಯ. ಆದರೆ ಒಂಟಿಕೊಪ್ಪಲ್ ದೇವಸ್ಥಾನದಿಂದ ಮುಂದಕ್ಕೆ ಯಾವ ಹೆಸರೂ ಇಲ್ಲ. ನಾವು ಸಿದ್ದರಾಮಯ್ಯ ಅವರ ಹೆಸರನ್ನು ಆ ರಸ್ತೆಗೆ ಹಿಡುವಂತೆ ಮನವಿ ಮಾಡಿರುವುದಾಗಿ ಶಾಸಕ ಕೆ. ಹರೀಶ್ ಗೌಡ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ರಾಜಮನೆತನದ ಬಗ್ಗೆ ಅಪಾರ ಗೌರವ ಇದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಬಗ್ಗೆಯೂ ಹೆಚ್ಚು ಗೌರವ ಭಾವನೆ ಹೊಂದಿದ್ದೇನೆ. ರಾಜಮನೆತನದವರ ಹೆಸರು ಬದಲಿಸಬೇಕು ಎಂಬ ಉದ್ದೇಶ ನನಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆ ಕ್ಷೇತ್ರದ ಶಾಸಕನಾಗಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಬಂದಿದ್ದೇನೆ. ಅಲ್ಲಿಗೆ ಯಾರೋ ಕೆಲವರು ಸ್ಟಿಕ್ಕರ್ ಅಂಟಿಸಿ ಅವಮಾನ ಮಾಡುವುದು ಬೇಡ. ನಾನೇ ಪ್ರಿನ್ಸೆಸ್ ರಸ್ತೆ ಎಂದು ಬೋರ್ಡ್ ಹಾಕಿಸುತ್ತೇನೆ. ಜತೆಗೆ ಆ ರಸ್ತೆಯ ಸೂಕ್ತ ಸ್ಥಳದಲ್ಲಿ ಕೆಂಪನಂಜಮ್ಮಣ್ಣಿ ಅವರ ಪ್ರತಿಮೆಯನ್ನೂ ಹಾಕಿಸುತ್ತೇನೆ. ಈ ಹೆಸರಿನ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಅವರು ಕೋರಿದರು.

ನನಗೆ ಲಭ್ಯವಿರುವ ದಾಖಲೆಗಳ ಪ್ರಕಾರ ಜೆ.ಎಲ್.ಬಿ. ರಸ್ತೆಯಿಂದ ಒಂಟಿಕೊಪ್ಪಲ್ ದೇವಸ್ಥಾನದವರೆಗೆ ಮಾತ್ರವೇ ಪ್ರಿನ್ಸೆಸ್ ರಸ್ತೆ ಎಂದು ಹಲವು ದಾಖಲೆಗಳಲ್ಲಿ ನಮೂದಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಕೆ.ಆರ್.ಎಸ್ ರಸ್ತೆ ಎಂದು ಬಾಯಿ ಮಾತಿನಲ್ಲಿ ಕರೆಯುತ್ತಿದ್ದೇವೆ. ಆ ರಸ್ತೆಯಲ್ಲಿ ಜಿಲ್ಲಾಸ್ಪತ್ರೆ, ಜಯದೇವ ಆಸ್ಪತ್ರೆ, ಕಿದ್ವಾಯಿ ಘಟಕ, ಚರಕ ಆಯುರ್ವೇದ ಆಸ್ಪತ್ರೆ ಸೇರಿದಂತೆ ಅನೇಕಾರು ಆಸ್ಪತ್ರೆಗಳನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಿರ್ಮಿಸಿರುವುದರಿಂದ ಆ ಮಾರ್ಗಕ್ಕೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡುವುದು ಸೂಕ್ತ ಎನಿಸಿದ ಕಾರಣಕ್ಕೆ 2024ರ ನ. 12ರಂದು ಜಿಲ್ಲಾಧಿಕಾರಿಗೆ ಮತ್ತು ನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೆ ಎಂದರು.

ನಗರ ಪಾಲಿಕೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮನವಿಗೆ ಅನುಮೋದನೆ ನೀಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ, ತೀರ್ಮಾನವನ್ನು ಸಾರ್ವಜನಿಕರಿಗೆ ಬಿಡೋಣ ಎಂದಿದ್ದಾರೆ. ಅದರಂತೆ ಕೆಲವು ಆರ್.ಟಿ.ಐ ಕಾರ್ಯಕರ್ತರು ಮತ್ತು ಸಂಸದ ಯದುವೀರ್ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಜೊತೆಗೆ ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ ಅವರೂ ಕೂಡ ಆಕ್ಷೇಪ ಎತ್ತಿದ್ದಾರೆ. ನಾನು ಅವರ ಜತೆಯೂ ದೂರವಾಣಿಯಲ್ಲಿ ಮಾತನಾಡಿದ್ದು, ವಾಸ್ತವಾಂಶವನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.

ನಾವು ಮೈಸೂರಿನಲ್ಲಿ ಇಷ್ಟೊಂದು ನೆಮ್ಮದಿಯ ವಾತಾವರಣದಲ್ಲಿ ಬದುಕುವುದಕ್ಕೆ ಮಹಾರಾಜರು ಕಾರಣ ಎಂಬುದು ಗೊತ್ತಿದೆ. ನಾನೂ ಮೈಸೂರಿನವನೇ, ಬೇರೆ ಕಡೆಯಿಂದ ಬಂದು ಸೇರಿಲ್ಲ. ಆದ್ದರಿಂದ ಇಲ್ಲಿನ ಇತಿಹಾಸ ನನಗೂ ಗೊತ್ತಿದೆ. 1997ರ ಭೂಪಟ ಮತ್ತು ನಗರ ಯೋಜನೆಯ ನಕ್ಷೆಯಲ್ಲಿಯೂ ಕೆ.ಆರ್.ಎಸ್ ರಸ್ತೆ ಎಂದೇ ಉಲ್ಲೇಖವಾಗಿದೆ ಎಂದು ಅವರು ದಾಖಲಾತಿ ಬಿಡುಗಡೆಗೊಳಿಸಿದರು.

ಇದು ಇಲಾಖೆಯ ಅಧಿಕೃತ ದಾಖಲೆ. ಇದನ್ನು ಯಾರೂ ಕೂಡ ತಿರುಚಿಲ್ಲ. ಆದ್ದರಿಂದ ಎಲ್ಲರಿಗೂ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ, ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದರು.

ಸಿಎಂ ಬದಲಾವಣೆ ಇಲ್ಲ:

ಯಾರೋ ಕೆಲವು ಶಾಸಕರು ಒಟ್ಟಾಗಿ ಕುಳಿತು ಟೀ ಕುಡಿದಾಕ್ಷಣ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬುದೆಲ್ಲ ಸುಳ್ಳು. ಇದು ಬಿಜೆಪಿಯವರು ಮಾಡುತ್ತಿರುವ ಆರೋಪವಷ್ಟೇ ಎಂದು ಹೇಳಿದರು.

ಬಂದ್ ಗೆ ಸಂಪೂರ್ಣ ಬೆಂಬಲ, ಭಾಗಿ:

ದಲಿತ ಸಂಘಟನೆಗಳು ಜ. 7 ರಂದು ಕರೆ ನೀಡಿರುವ ಮೈಸೂರು ಬಂದ್ ಗೆ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂಪೂರ್ಣ ಬೆಂಬಲ ನೀಡಿ, ಪಾಲ್ಗೊಳ್ಳುತ್ತಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ತಿಳಿಸಿದರು.

ನಗರದ ದಾಸಪ್ಪ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನಿಟ್ಟು ಪುಷ್ಪಾರ್ಚನೆ ನೆರವೇರಿಸಲಾಗುವುದು. ಈ ವೇಳೆ ಎಲ್ಲಾ ಧರ್ಮಗುರುಗಳನ್ನು ಆಹ್ವಾನಿಸಲಾಗುತ್ತಿದೆ. ನಾವು ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಹೋರಾಟದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುತ್ತಿದ್ದೇವೆ. ನಮ್ಮ ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೂ ಭಾಗಿ ಆಗುವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಮಾಜಿ ಸದಸ್ಯ ಜೆ. ಗೋಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಸೇವಾದಳ ಸಂಚಾಲಕ ಗಿರೀಶ್ಇದ್ದರು.ದಾಖಲೆ ಸಾಬೀತಾದರೆ ಪ್ರಿನ್ಸಸ್ ರಸ್ತೆ ಎಂದೇ ಇರಲಿ

ಬಿಜೆಪಿಯವರು ಬಿಡುಗಡೆಗೊಳಿಸಿರುವ ದಾಖಲೆ ಮತ್ತು ನನ್ನ ಬಳಿ ಇರುವ ದಾಖಲೆ ಎರಡನ್ನೂ ನೋಡಲಿ. ಅವರ ದಾಖಲೆಗಳಲ್ಲಿ ಸಂಪೂರ್ಣವಾಗಿ ಪ್ರಿನ್ಸಸ್ ರಸ್ತೆ ಎಂದೇ ಇದ್ದರೆ, ಅದೇ ಹೆಸರು ಇರಲಿ. ಇದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ ಸಿದ್ದರಾಮಯ್ಯ ಅವರ ಹೆಸರು ಹೇಳಿದಾಕ್ಷಣ ಯಾಕೆ ಕೆಲವರು ಹೀಗೆ ಆಕ್ಷೇಪ ಎತ್ತಿದ್ದಾರೋ ಗೊತ್ತಿಲ್ಲ.

- ಕೆ. ಹರೀಶ್ ಗೌಡ, ಶಾಸಕ