ನಾಲ್ಕು ಬಾರಿ ಕ್ಷೇತ್ರದ ಶಾಸಕನಾಗಿದ್ದ ನನಗೆ ಕ್ಷೇತ್ರದ ಜನರು ಸಮಸ್ಯೆಯನ್ನು ಹೇಳಿಕೊಂಡಾಗ ಸ್ಪಂದಿಸುವ ಹಕ್ಕು ಇದೆ. ಸ್ವಾರ್ಥಕ್ಕೆ ಯಾರಿಗೂ ಪತ್ರ ನೀಡಿಲ್ಲ. ಯಾವುದೇ ಕಾರಣಕ್ಕೂ ನೀಡಿರುವ ಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಬಿಟ್ಟು ಹೋಗಿರುವ ಪ್ರದೇಶಗಳನ್ನು ಸೇರಿಸಿ ನೀರು ಕೊಡಿ ಎನ್ನುವುದೇ ನನ್ನ ಆಗ್ರಹ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ವಾಗ್ಧಾಳಿ ನಡೆಸಿದರು.
ಕುಂದಾಪುರ: ನಾಲ್ಕು ಬಾರಿ ಕ್ಷೇತ್ರದ ಶಾಸಕನಾಗಿದ್ದ ನನಗೆ ಕ್ಷೇತ್ರದ ಜನರು ಸಮಸ್ಯೆಯನ್ನು ಹೇಳಿಕೊಂಡಾಗ ಸ್ಪಂದಿಸುವ ಹಕ್ಕು ಇದೆ. ಸ್ವಾರ್ಥಕ್ಕೆ ಯಾರಿಗೂ ಪತ್ರ ನೀಡಿಲ್ಲ. ಯಾವುದೇ ಕಾರಣಕ್ಕೂ ನೀಡಿರುವ ಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಬಿಟ್ಟು ಹೋಗಿರುವ ಪ್ರದೇಶಗಳನ್ನು ಸೇರಿಸಿ ನೀರು ಕೊಡಿ ಎನ್ನುವುದೇ ನನ್ನ ಆಗ್ರಹ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ವಾಗ್ಧಾಳಿ ನಡೆಸಿದರು.ವಾರಾಹಿ ಅಣೆಕಟ್ಟಿನ ಕೆಳಭಾಗದ ನದಿ ಪಾತ್ರದ ಗ್ರಾಮ ಪಂಚಾಯಿತಿಗಳ ರೈತರು, ಪಂಚಾಯಿತಿ ಕುಡಿಯುವ ನೀರಿನ ಫಲಾನುಭವಿಗಳು, ಸೌಕೂರು ಏತ ನೀರಾವರಿ ಫಲಾನುಭವಿಗಳು ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಫಲಾನುಭವಿಗಳ ನೇತೃತ್ವದಲ್ಲಿ ಕಂಡ್ಲೂರಿನಲ್ಲಿ ಭಾನುವಾರ ನಡೆದ ಬೃಹತ್ ಜನಾಂದೋಲನಾ ಸಭೆಯಲ್ಲಿ ಅವರು ಮಾತನಾಡಿದರು.
ನೀರಿನ ಬೇಡಿಕೆ ಇರುವ ಕ್ಷೇತ್ರದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ಡಿಪಿಆರ್ ಸಿದ್ಧಪಡಿಸಿ ಕಾರ್ಯಗತಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಜಿಲ್ಲೆ ಹಾಗೂ ಹೊರ ಜಿಲ್ಲೆಯ ಬೇರೆ ಭಾಗಗಳಿಗೆ ನೀರು ಕೊಂಡೊಯ್ಯುವ ಮೊದಲು ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ಕ್ಷೇತ್ರದಲ್ಲಿ ಹಲವು ವೆಂಟೆಡ್ ಡ್ಯಾಂ ತಂದಿರುವುದು ನಮ್ಮ ಅಧಿಕಾರಾವಧಿಯಲ್ಲಿ. ರಾಜಕೀಯ ಭೇದ ಮರೆತು ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದೇನೆ. ಜೀವ ಇರುವವರೆಗೂ ಕಾರ್ಯಕರ್ತರ ಪರ ಇರುತ್ತೇನೆ. ವಾರಾಹಿ ಯೋಜನೆ ಸಮಸ್ಯೆ ಬಿಂಬಿಸುವಲ್ಲಿ ಮಾಧ್ಯಮ ಸ್ನೇಹಿತರ ಪ್ರಯತ್ನವೂ ಉಲ್ಲೆಖನೀಯ. ಸತ್ಯವನ್ನು ಹೇಳಲು ಯಾರ ಅಂಜಿಕೆಯೂ ನನಗಿಲ್ಲ ಎಂದರು.ಟೀಕಿಸುವುದು ಸರಿಯಲ್ಲ: ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ ಮಾತನಾಡಿ, ಸಮಾಜಮುಖಿಯಾಗಿರುವ ವ್ಯಕ್ತಿಗಳನ್ನು ಪದೆ ಪದೆ ಟೀಕೆ ಮಾಡುವುದು ಸರಿಯಲ್ಲ. ಸರ್ಕಾರದ ಆದೇಶದಂತೆ ಪ್ರಸ್ತುತ ಆರಂಭವಾಗಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಸಮಿತಿ ವರದಿ ನೀಡಿ ಸಮಸ್ಯೆ ಬಗೆಹರಿಯುವವರೆಗೂ ಕಾಮಗಾರಿಗೆ ಸಂಬಂಧಿಸಿದ ಒಂದು ನಯಾ ಪೈಸೆ ಬಿಲ್ಲನ್ನು ಪಾವತಿ ಮಾಡಬಾರದು ಎಂದರು.ಉಪ್ಪು ನೀರು ಹಿಮ್ಮುಖವಾಗಿ ಬಂದಲ್ಲಿ ಜನರಿಗೆ ತೊಂದರೆಯಾಗುತ್ತದೆ ಎನ್ನುವ ದೂರ ದೃಷ್ಟಿಯಿಂದ ಬಳ್ಕೂರಿನಲ್ಲಿ ಉಪ್ಪು ನೀರಿನ ತಡೆಗೋಡೆ ಕಟ್ಟಿ, ವೆಂಟೆಡ್ ಡ್ಯಾಂ ನಿರ್ಮಿಸಿದವರು ಕೆ.ಜಯಪ್ರಕಾಶ್ ಹೆಗ್ಡೆ. ಸಿದ್ದಾಪುರ ಏತ ನೀರಾವರಿ ಯೋಜನೆ ಮೇಲ್ಭಾಗದ ಕಾಮಗಾರಿಗೆ ಅರಣ್ಯ ಇಲಾಖೆಯ ನಿರಪೇಕ್ಷಣಾ ಅವಶ್ಯಕತೆ ಇಲ್ಲ ಎನ್ನುವ ಅಧಿಕಾರಿಗಳು, ಯೋಜನೆ ಕೆಳ ಭಾಗದಲ್ಲಿ ಆಗುವುದಾದರೆ ಅರಣ್ಯ ಇಲಾಖೆಯ ಒಪ್ಪಿಗೆ ಬೇಕು ಎಂದು ಗೊಂದಲ ಮೂಡಿಸುತ್ತಿದ್ದಾರೆ. ಸರ್ಕಾರಕ್ಕೆ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ಕೊಡುವ ಜಿ.ಶಂಕರ ಅವರ ವ್ಯಕ್ತಿತ್ವ ಹಾಳು ಮಾಡುವವರಿಗೆ ಖಂಡಿತಾ ಒಳ್ಳೆಯದಾಗುದಿಲ್ಲ. ಕಾರ್ಕಳ , ಉಡುಪಿ ಭಾಗಗಳಿಗೆ ನದಿಯಲ್ಲಿ ಜಾಕ್‌ವೆಲ್ ಅಳವಡಿಸಿ ನೀರು ಕೊಡುವ ವ್ಯವಸ್ಥೆ ಆಗುತ್ತದೆ ಎಂದಾದರೆ, ಬೈಂದೂರು, ಕುಂದಾಪುರ ಭಾಗಕ್ಕೆ ಯಾಕೆ ಆಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಯಾವ ನೈತಿಕತೆ ಇದೆ: ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು, ಕ್ಷೇತ್ರದ ಜನರ ಅಹವಾಲಿಗೆ ಸ್ಪಂದಿಸಿದ ಗೋಪಾಲ ಪೂಜಾರಿ ಅವರ ಮೇಲೆ ಸುಳ್ಳು ಆಪಾದನೆ ಮಾಡಲಾಗುತ್ತಿದೆ. ಅವರ ಮೇಲೆ ಭ್ರಷ್ಟಾಚಾರದ ಸುಳ್ಳು ಆರೋಪ ಮಾಡುತ್ತಿರುವ ಎಂಪಿ, ಎಂಎಲ್‌ಎ ಅವರುಗಳಿಗೆ ಯಾವ ನೈತಿಕತೆ ಇದೆ. ವಾರಾಹಿ ಮೂಲ ಯೋಜನೆಯಲ್ಲಿ ಬಿಟ್ಟು ಹೋದ ಪ್ರದೇಶಗಳಿಗೂ ನೀರು ದೊರಕಬೇಕು ಎನ್ನುವ ಆಗ್ರಹ ನಮ್ಮದು. ಡ್ಯಾಂ ಮೇಲ್ಭಾಗದಲ್ಲಿ ಯಾವುದೇ ಕಾಮಗಾರಿ ನಡೆದರೂ, ಭವಿಷ್ಯದಲ್ಲಿ ಡ್ಯಾಂ ಅಸ್ತಿತ್ವಕ್ಕೆ ಧಕ್ಕೆ ಬರುವ ಅಪಾಯ ಇದೆ ಎಂದರು.ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಬೀಜಾಡಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಪಶ್ಚಿಮವಾಹಿನಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿಟ್ಟೆ ರಾಜಗೋಪಾಲ್ ಹೆಗ್ಡೆ, ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಮೆಂಡನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಟಿ ಶ್ರೀಯಾನ್ ಮಾತನಾಡಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಅರವಿಂದ ಪೂಜಾರಿ ಪಡುಕೋಣೆ, ಜಿ.ಪಂ ಮಾಜಿ ಸದಸ್ಯರಾದ ಸದಾನಂದ ಬಳ್ಕೂರು, ಜ್ಯೋತಿ ನಾಯ್ಕ್, ಪ್ರಮುಖರಾದ ಸಂತೋಷ ಶೆಟ್ಟಿ ಹಕ್ಲಾಡಿ, ಬಿಜೂರು ರಘುರಾಮ ಶೆಟ್ಟಿ, ಅನಂತ ಮೊವಾಡಿ, ಸುದೀಶ್ ಶೆಟ್ಟಿ ಗುಲ್ವಾಡಿ, ಜಯರಾಮ್ ನಾಯ್ಕ್, ಜಿ.ಮೊಹಮ್ಮದ್, ರತ್ನಾಕರ್ ಶೆಟ್ಟಿ ಮಧುರಬಾಳು, ವಾಸುದೇವ ಯಡಿಯಾಳ, ಕಾಂಗ್ರೆಸ್ ಐಟಿ ಸೆಲ್‌ನ ಚಂದ್ರಶೇಖರ ಶೆಟ್ಟಿ, ನಾಗಪ್ಪ ಕೊಠಾರಿ, ಕಾಳಿಂಗ್ ಶೆಟ್ಟಿ , ಸುರೇಶ್ ಶೆಟ್ಟಿ ಗುಲ್ವಾಡಿ, ಪ್ರಭಾಕರ ಆನಗಳ್ಳಿ, ವಿಜಯ್ ಪುತ್ರನ್ ಇದ್ದರು. ಬೈಂದೂರು ಬಿಜೆಪಿ ಮಂಡಲ ಕಾರ್ಯದರ್ಶಿ ರಾಘವೇಂದ್ರ ನೆಂಪು ನಿರೂಪಿಸಿದರು.ಕೈಕಾಲು ಜಪ್ಪಲು ಬಂದರೆ ಜೈಲಿಗಟ್ಟುತ್ತೇವೆ: ಕೈಕಾಲು ಜಪ್ಪಿಹಾಕುತ್ತೇವೆ ಎನ್ನುವುದು ಶಾಸಕರಿಗೆ ಶೋಭೆ ತರುವಂತದ್ದಲ್ಲ. ಯಾರ ಕೈಕಾಲು ಜಪ್ಪಿ ಹಾಕುತ್ತಾರೆ ಎನ್ನುವುದು ಶಾಸಕರು ಮೊದಲು ಸ್ಪಷ್ಟಪಡಿಸಲಿ. ರೈತರ ಕೈಕಾಲು ಜಪ್ಪಿ ಹಾಕಲು ಬರುವುದಾದರೆ ಶಾಸಕರನ್ನು ಜೈಲಿಗಟ್ಟುವ ಕೆಲಸ ಮಾಡುತ್ತೇನೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಗುರುರಾಜ್ ಗಂಟಿಹೊಳೆಯವರ ಕೈಕಾಲು ಜಪ್ಪುವ ಹೇಳಿಕೆಗೆ ತಪರಾಕಿ ನೀಡಿದ ಅವರು, ಯೋಜನೆ ನಿಲ್ಲಿಸುತ್ತಾರೆ ಎಂದು ಆಪಾದನೆ ಮಾಡುವ ಶಾಸಕರು ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. ಇಲ್ಲದಿದ್ದಲ್ಲಿ ನೀವು ರಾಜಕೀಯ ಸನ್ಯಾಸ ಸ್ವೀಕರಿಸುತ್ತೀರಾ ಎಂದು ಪ್ರಶ್ನಿಸಿದರು.