ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಳೆದ 50 ವರ್ಷಗಳಿಂದ ನಾನು ಬೇಡುವ ಕೆಲಸ ಮಾಡಿಕೊಂಡು ಬಂದು ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಲೋಕವನ್ನು ಗಟ್ಟಿಗೊಳಿಸಲು ಶ್ರಮಿಸಿದ್ದೇನೆ ಎಂದು ಪ್ರೊ.ಜಯಪ್ರಕಾಶ್‌ಗೌಡ ಹೇಳಿದರು.ಪಟ್ಟಣದ ಗ್ರಾಮಭಾರತಿ ಶಿಕ್ಷಣ ಸಂಸ್ಥೆಯ ಚಿಕ್ಕಣ್ಣಗೌಡ ಸಭಾಂಗಣದಲ್ಲಿ ತಾಲೂಕು ಕ್ನನಡ ಸಾಹಿತ್ಯ ಪರಿಷತ್ತು ಮತ್ತು ಇತರೆ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ನೆರವಿನೊಂದಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಬೇಡುವ ಕೈಗಳು ಸ್ವಚ್ಛವಾಗಿದ್ದರೆ ನೀಡುವ ಕೈಗಳು ಸುಲಭವಾಗಿ ನೀಡುತ್ತವೆ. ಜನರು ನೀಡುವ ಕೆಲಸವನ್ನು ಮಾಡಿದ್ದಾರೆ. ಈ ಬೇಡುವ ಮತ್ತು ನೀಡುವ ಮಧ್ಯೆ ಯಾವುದೇ ಗೊಂದಲವಿಲ್ಲದಂತೆ ನಡೆದುಕೊಂಡಿರುವುದಾಗಿ ತಿಳಿಸಿದರು.
ನಾನು ಮಂಡ್ಯ ಜಿಲ್ಲೆಯ ರಾಜಕೀಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಾಯಭಾರಿಯಾಗಿದ್ದ ಕೆ.ವಿ.ಶಂಕರಗೌಡರ ಶಿಷ್ಯ. ಅವರು ನಮಗೆ ಎಂದಿಗೂ ಕೂಡಾ ಹಣ ಮಾಡು ಎಂದು ಹೇಳಿಕೊಡಲಿಲ್ಲ. ಆದರೆ, ಸಾಂಸ್ಕೃತಿಕ ಜಗತ್ತನ್ನು ಗಟ್ಟಿಮಾಡಿ ಎಂದು ಹೇಳಿದ್ದಾರೆ ಎಂದರು.ಕೆ.ವಿ.ಶಂಕರಗೌಡರ ಸಲಹೆಯನ್ನು ದೀಕ್ಷೆಯಾಗಿ ಸ್ವೀಕರಿಸಿ ಇಂದು ಮಂಡ್ಯ ಜಿಲ್ಲೆಯ ಜನರ ಸಹಕಾರದಿಂದ ಕರ್ನಾಟಕ ಸಂಘವನ್ನು ಕಟ್ಟುವ ಮೂಲಕ ಸಾಂಸ್ಕೃತಿಕ ಜಗತ್ತಿಗೆ ಅರ್ಪಣೆ ಮಾಡಿದ್ದೇನೆ. ನನಗೆ ಪಕ್ಷಾತೀತವಾಗಿ ಎಲ್ಲರೂ ಸಹಾಯ ಮಾಡಿದ್ದಾರೆ. ನಾನು ಬೇಡಿದ್ದೇನೆ. ಬೇಡಿದ ತಕ್ಷಣ ಜನರು ನೀಡಿದ್ದಾರೆ. ನಾನು ಎನ್ನುವುದಕ್ಕಿಂತ ನಮ್ಮದು ಎಂದು ಹೇಳಿಕೊಳ್ಳುವ ಕೆಲಸ ಮಾಡಿದ್ದೇನೆ ಎಂದರು.
ನಾನು ಯಾವ ಪ್ರಶಸ್ತಿ ಮತ್ತು ಸನ್ಮಾನಗಳನ್ನು ಅರಸಿ ಹೋದವನಲ್ಲ. ಎಲ್ಲವೂ ತಾನಾಗೆ ಬಂದಿವೆ. ಸುಮ್ಮನೆ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಎಲ್ಲವೂ ಕೂಡಾ ನಮ್ಮನ್ನೆ ಹುಡುಕಿಕೊಂಡು ಬರುತ್ತವೆ. ಭೌತಿಕವಾದ ಜೀವನವನ್ನು ಇಷ್ಟಪಡುವ ಜೊತೆಗೆ ಬೌದ್ಧಿಕವಾದ ವಾತಾವರಣ ಸೃಷ್ಟಿ ಮಾಡಬೇಕು ಎಂದರು.ಹಿಂದಿನಂತೆ ಈಗ ಇಲ್ಲ. ಎಲ್ಲವೂ ಜನಪ್ರತಿನಿಧಿಗಳ ಕೈಯಲ್ಲಿದೆ. ಜನಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು. ಪ್ರತಿಯೊಬ್ಬರಿಗೂ ಒಂದೊಂದು ಉದ್ದೇಶವಿರುತ್ತದೆ. ಆದರೆ, ಉದ್ದೇಶಗಳು ಉತ್ತಮವಾಗಿರಬೇಕು. ಕೆ.ಆರ್.ಪೇಟೆ ಶಾಸಕ ಮಂಜು ಯುವಕರಾಗಿದ್ದಾರೆ. ಅವರಿಗೆ ವಿಪುಲವಾದ ಅವಕಾಶಗಳಿವೆ. ಈ ಕಾರ್ಯಕ್ರಮದಲ್ಲಿ ಅವರನ್ನು ಕೇಳಿಕೊಳ್ಳುತ್ತಿದ್ದೇನೆ. ಕೆ.ಆರ್.ಪೇಟೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣ ಗಟ್ಟಿಗೊಳಿಸಿ ಎಂದು ಮನವಿ ಮಾಡಿದರು.
ಪ್ರೊ.ಜಯಪ್ರಕಾಶ್‌ಗೌಡ ಅವರನ್ನು ಕುರಿತು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮಂಡ್ಯ ಜಿಲ್ಲೆಯನ್ನು 50 ವರ್ಷಗಳ ತಮ್ಮ ಪರಿಶ್ರಮದಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಕೀರ್ತಿ ಪ್ರೊ.ಜಯಪ್ರಕಾಶಗೌಡ ಅವರಿಗೆ ಸಲ್ಲುತ್ತದೆ ಎಂದರು.ಮಂಡ್ಯ ಜಿಲ್ಲೆಯಲ್ಲಿ ಸಂಸ್ಕೃತಿ ಸಂಘಟಕರಾಗಿ, ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ಎಲೆ ಮರೆ ಕಾಯಿಗಳಂತಿರುವ ಸಮಾಜ ಸೇವಕರು ಸಂಘಟಕರು ಹಾಗೂ ಸಾಹಿತಿಗಳನ್ನು ಗುರುತಿಸಲು ಸುಮಾರು 65 ದತ್ತಿನಿಧಿ ಪ್ರಶಸ್ತಿಗಳನ್ನು ಸ್ಥಾಪಿಸಿ ನಾಡಿನ ಪ್ರತಿಭಾವಂತರನ್ನು ಸನ್ಮಾನಿಸುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಜ್ಯಾದ್ಯಂತ ಪಸರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರತೇಜಸ್ವಿ, ಮಸಾಪ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ಟಿಎಪಿಸಿಎಂಎಸ್ ಸಂಸ್ಥೆ ಅಧ್ಯಕ್ಷ ಬಿ.ಎಲ್.ದೇವರಾಜು, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬೆಂಗಳೂರು ಎಸಿಪಿ ಲಕ್ಷ್ಮೇಗೌಡ, ತಾಜಾಪ ಅಧ್ಯಕ್ಷ ಕತ್ತರಘಟ್ಟ ವಾಸು, ಕಸಾಪ ಮಾಜಿ ಅಧ್ಯಕ್ಷರಾದ ಕೆ.ಎಸ್. ಸೋಮಶೇಖರ್, ಶಿ.ಕುಮಾರಸ್ವಾಮಿ, ಕೆ.ಆರ್.ನೀಲಕಂಠ, ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್, ಮುಖಂಡರಾದ ಬಿ.ನಂಜಪ್ಪ, ಅಂಚಿ ಸಣ್ಣಸ್ವಾಮೀಗೌಡ, ಎ.ಆರ್.ರಘು, ಎಸ್.ಎಲ್.ಮೋಹನ್, ಗೂಡೇಹೊಸಹಳ್ಳಿ ಜವರಾಯಿಗೌಡ, ಮುದುಗೆರೆ ರಾಜೇಗೌಡ, ಕೆ.ಆರ್.ಜಯರಾಂ, ನಂದಿನಿ ಜಯರಾಂ, ಹಾದನೂರು ಪರಮೇಶ್ ಸೇರಿದಂತೆ ಹಲವರು ಇದ್ದರು.