ಸಾರಾಂಶ
ಸರ್ಕಾರಿ ಬಸ್ ಡಿಪೋ ಸ್ಥಳಕ್ಕೆ ಮಾಜಿ ಸಚಿವ ಬಿ ಶ್ರೀರಾಮುಲು ಭೇಟಿ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಕಳೆದ ಬಾರಿ ನನಗೆ ಸಿಕ್ಕಂತ ಅವಕಾಶವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.ತಾಲೂಕಿನ ರಾಯಾಪುರ ಸಮೀಪದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಬಸ್ ಡಿಪೋ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ದಕ್ಷಿಣ ಭಾರತದಲ್ಲಿಯೇ ಅತಿದೊಡ್ಡ ಕ್ಷೇತ್ರವಾಗಿರುವ ಮೊಳಕಾಲ್ಮುರು ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಜನತೆಗೆ ಮೂಲ ಸೌಲಬ್ಯಗಳ ಕೊರತೆ ಕಾಡುತ್ತಿದೆ.ಹಾಗಾಗಿ ವಿದ್ಯಾರ್ಥಿಗಳಿಗೆ,ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು ಸಾರಿಗೆ ಸಚಿವನಾಗಿದ್ದ ವೇಳೆ ತಾಲೂಕು ಕೇಂದ್ರ ಸ್ಥಾನದಲ್ಲಿ ಸರ್ಕಾರಿ ಬಸ್ ನಿಲ್ದಾಣ ಹಾಗು ರಾಯಪುರದಲ್ಲಿ ಬಸ್ ಡಿಪೋ ಮುಂಜೂರು ಮಾಡಿಸಿದ್ದೆ.ಹಾಗು ಆರೋಗ್ಯ ಸಚಿವನಾಗಿದ್ದ ವೇಳೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೂಲ ಸೌಲಭ್ಯ ಕಲ್ಪಿಸಿ ವೈದ್ಯರ ಕೊರತೆ ನೀಗಿಸಿದ್ದೆ.ಅಲ್ಲದೆ ಬಿ.ಜಿ.ಕೆರೆ ಮತ್ತು ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಮುಂಜೂರಾತಿ ನೀಡಿದ್ದೆ. ಈಗ ಆ ಎಲ್ಲಾ ಕಾಮಗಾರಿ ಕಟ್ಟಡಗಳು ಪೂರ್ಣಗೊಂಡಿದ್ದು ಸರ್ಕಾರ ಆದಷ್ಟು ಶೀಘ್ರವಾಗಿ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.ಎಲ್ಲಾ ಪಕ್ಷದಲ್ಲೂ ಆತ್ಮೀಯರು ಇದ್ದಾರೆ. ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಿಂದಲೂ ಸ್ಪರ್ಧಿಸಲು ಒತ್ತಡ ಇದೆ. ರಾಜ್ಯ ತುಂಬಾ ಓಡಾಡಿ ಪಕ್ಷ ಕಟ್ಟುವ ಕೆಲಸ ಮಾಡುವ ಜೊತೆಗೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಜನಪದ ಆಕಾಡೆಮಿ ಪ್ರಶಸ್ತಿ ಪಡೆದ ಚಿಕ್ಕಿಂತಿ ಗ್ರಾಮದ ಅಲೆಮಾರಿ ಸಮುದಾಯ ಎ.ಶ್ರೀನಿವಾಸ ಅವರನ್ನು ರಾಯಪುರ ಬಳಿಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಅವರಿಗೆ ವೈಯಕ್ತಿಕ ಸಹಾಯ ಮಾಡಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಶ್ರೀರಾಮರೆಡ್ಡಿ, ನಿಕಟ ಪೂರ್ವ ಅಧ್ಯಕ್ಷ ಡಾ. ಪಿ.ಎಂ.ಮಂಜುನಾಥ್. ಪಪಂ ಮಾಜಿ ಅಧ್ಯಕ್ಷ ಲಕ್ಷ್ಮಣ, ಸದಸ್ಯ ಮಂಜಣ್ಣ ಎಸ್ಸಿ ಮೋರ್ಚಾ ಸಿದ್ದಾರ್ಥ ಪ್ರಭಾಕರ ಮುಖಂಡ ಓಬಣ್ಣ, ಜಿರಳ್ಳಿ ತಿಪ್ಪೇಸ್ವಾಮಿ, ಹಾನಗಲ್ ಪರಮೇಶ್, ಭೀಮಣ್ಣ, ಸಿದ್ದಯ್ಯನ ಕೋಟೆ ಮರಿಸ್ವಾಮಿ, ಪಾಪೇಶ್ ನಾಯಕ ಇದ್ದರು.ಮಹರಾಷ್ಟ್ರ ಸರ್ಕಾರ ರಚನೆ ಮಾದರಿ ಕರ್ನಾಟಕದಲ್ಲೂ ನಡೆಯಲಿದೆ:
ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಆದ ಬದಲಾವಣೆ ರಾಜ್ಯದಲ್ಲಿಯೂ ಮುಂಬರುವ ದಿನಗಳಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ. ತಾಲೂಕಿನ ರಾಯಪುರ ಗ್ರಾಮದ ಬಸ್ ಡಿಪೋ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ದಿವಾಳಿ ಅಂಚಿಗೆ ಬಂದಿದ್ದರೂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಕುರ್ಚಿ ಕಿತ್ತಾಟ ಶುರುವಾಗಿದ್ದು ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರದ ಶಿಂದೆ ಫಿನಾಮಿನನ್ ರೀತಿ ರಾಜ್ಯದಲ್ಲಿಯೂ ನಡೆಯಲಿದೆ. ಅಂತಹ ಸಂದರ್ಭ ಎದುರಾದಲ್ಲಿ ರಾಷ್ಟ್ರ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.