ಸಾರಾಂಶ
ಚನ್ನಪಟ್ಟಣ: ೮ ತಿಂಗಳ ಅಧಿಕಾರ ಅವಧಿಯಲ್ಲಿ ಎಲ್ಲರ ಸಹಕಾರದಿಂದ ನಗರ ಪ್ರದೇಶದಲ್ಲಿ ತಾಂಡವವಾಡುತ್ತಿದ್ದ ಕಸದ ಸಮಸ್ಯೆ ನಿವಾರಣೆ ಜೊತೆಗೆ ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ನಗರಸಭಾ ಅಧ್ಯಕ್ಷ ವಾಸಿಲ್ ಆಲಿ ಖಾನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಕಸದ ಸಮಸ್ಯೆ ತೀವ್ರವಾಗಿತ್ತು. ನಗರದ ಸ್ವಚ್ಛತೆಗೆ ಒತ್ತುಕೊಟ್ಟು ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಂಡು ಕಸದ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸುಮಾರು ೬೦೦ ಲಕ್ಷ ರು. ವೆಚ್ಚದಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಹೊಸ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ರಸ್ತೆ, ಚರಂಡಿ, ಕಾಂಪೌಂಡ್ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.೧೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರಸಭೆಯ ಹೊಸ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ೨೦೨೨-೨೩ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ೩೧ ವಾರ್ಡ್‌ಗಳಲ್ಲಿ ೨೦ ಕೋಟಿ ವೆಚ್ಚದ ಕಾಮಗಾರಿಗಳು ಪ್ರಾರಂಭವಾಗಿ ಪ್ರಗತಿಯಲ್ಲಿವೆ. ೨೦೨೪-೨೫ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ೩೧ ವಾರ್ಡ್‌ಗಳ ಅಭಿವೃದ್ಧಿಗಾಗಿ ತಲಾ ೧ ಕೋಟಿಯಂತೆ ೩೧ ಕೋಟಿ ಟೆಂಡರ್ ಕರೆದು ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ವಾರದಲ್ಲಿ ಕಾರ್ಯಾದೇಶ ನೀಡಲಾಗುವುದು. ನೆನೆಗುದಿಗೆ ಬಿದ್ದಿರುವ ನಗರದ ಖಾಸಗಿ ಬಸ್ ನಿಲ್ದಾಣದ ಭೂ ವಿವಾದ ನಾಯಕರ ಮಟ್ಟದಲ್ಲಿ ಬಗೆಹರಿದಿದ್ದು ಕಾಮಗಾರಿ ಪ್ರಾರಂಭಿಸುವ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಇದುವರೆವಿಗೆ ೬ ಸಾವಿರ ಖಾತೆಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕಚೇರಿಯ ರೆಕಾರ್ಡ್ ರೂಂನಲ್ಲಿರುವ ಎಲ್ಲ ದಾಖಲೆಗಳ ಡಿಜಿಟಲೀಕರಣಕ್ಕೆ ಕ್ರಮ ವಹಿಸಲಾಗಿದೆ. ನಗರದ ಸ್ವಚ್ಛತೆ ಕಾಪಾಡಲು ನಗರದ ಪ್ರತಿ ಮತ್ತು ಮನೆಗೆ ೨ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಲು ಕ್ರಮ ವಹಿಸಲಾಗಿದೆ ಎಂದರು.ನಗರದ ಶೆಟ್ಟಿಹಳ್ಳಿ ಕೆರೆ ಸ್ವಚ್ಛತೆಗೊಳಿಸುವ ಕಾರ್ಯಕ್ಕೆ ನಗರಸಭೆಯಿಂದ ೭೦ ಲಕ್ಷ ರು.ಗಳನ್ನು ನೀಡಲಾಗಿದೆ. ಕೆರೆ ಒತ್ತುವರಿ ಸಂಬಂಧ ನ್ಯಾಯಾಲಯದಲ್ಲಿರುವ ಕೇಸ್‌ಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗಿದೆ ಎಂದರು.
ತುರ್ತು ಪತ್ರಿಕಾಗೋಷ್ಠಿಯ ಉದ್ದೇಶವೇನು? ಇದು ತಮ್ಮ ಅವಧಿಯ ವಿದಾಯದ ಪತ್ರಿಕಾಗೋಷ್ಠಿಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ತಡವರಿಸಿದ ಅಧ್ಯಕ್ಷ ವಾಸಿಲ್ ಆಲಿ ಖಾನ್, ಆ ರೀತಿ ಏನೂ ಇಲ್ಲ. ನನ್ನ ೮ ತಿಂಗಳ ಅವಧಿಯಲ್ಲಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರ ಸಹಕಾರದಿಂದ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಸಾರ್ವಜನಿಕರಿಗೆ ತಿಳಿಯಲಿ ಎಂದು ಕರೆದಿದ್ದೇವೆ. ಪಕ್ಷದ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಒಂದು ವೇಳೆ ಪಕ್ಷದ ವರಿಷ್ಠರಿಂದ ಸೂಚನೆ ಬಂದರೆ, ಅಧಿಕಾರ ತೆರವು ಮಾಡಿ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಮಾರ್ಮಿಕವಾಗಿ ಉತ್ತರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಲೋಕೇಶ್ ಉಪಸ್ಥಿತರಿದ್ದರು.
ಬಾಕ್ಸ್.................ಖಾಲಿ ನಿವೇಶನಗಳ ಸ್ವಚ್ಛಗೊಳಿಸದಿದ್ದರೆ ಕ್ರಮ
ನಗರ ಪ್ರದೇಶದಲ್ಲಿ ಸಾರ್ವಜನಿಕರು ನೆಲೆಸಿರುವ ಅಕ್ಕ ಪಕ್ಕದ ಖಾಲಿ ಖಾಸಗಿ ನಿವೇಶನ ಮಾಲೀಕರು ನಿವೇಶನವನ್ನು ಸ್ವಚ್ಛಗೊಳಿಸಬೇಕು. ಹಾಗೆಯೇ ಬಿಟ್ಟಿರುವುದರಿಮದ ಕಸದ ಗುಡ್ಡೆ ಜೊತೆಗೆ ಗಿಡ ಪೊದೆಗಳು ಬೆಳೆದು, ನಾಯಿ, ಹಂದಿ, ವಿಷಜಂತುಗಳ ಉಪಟಳದಿಂದ ಅಕ್ಕ ಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಖಾಸಗಿ ಖಾಲಿ ನಿವೇಶನ ಮಾಲೀಕರು ಈ ಕೂಡಲೇ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಮಹೇಂದ್ರ ಎಚ್ಚರಿಕೆ ನೀಡಿದರು.ಪೊಟೋ೭ಸಿಪಿಟಿ೧: ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಅಧ್ಯಕ್ಷ ವಾಸಿಲ್ ಆಲಿ ಖಾನ್ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉಪಾಧ್ಯಕ್ಷ ಲೋಕೇಶ್ ಉಪಸ್ಥಿತರಿದ್ದರು.