ಸಾರಾಂಶ
ಮುಂದಿನ ದಿನಗಳಲ್ಲಿ ಹಲವಾರು ನೀರಾವರಿ ಯೋಜನೆಗಳ ಮೂಲಕ ನಾಲೆಗಳ ಆಧುನೀಕರಣ ಮಾಡುವುದು ನನ್ನ ಗುರಿಯಾಗಿದೆ. ಈಗಾಗಲೇ ನೂರಾರು ಕೋಟಿ ರು. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆ ಮಾಡುವ ಆಶಯ ಹೊಂದಿದ್ದೇನೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕಾವೇರಿ ನೀರಾವರಿ ನಿಗಮದ ವಿಭಾಗ ಕಚೇರಿ 2 ತರಲು ಬಹಳಷ್ಟು ಶ್ರಮಿಸಿದ್ದೇನೆ. ಅದರ ಫಲವಾಗಿಯೇ ಕಚೇರಿ ಉದ್ಘಾಟನೆಯಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಪಟ್ಟಣದ ಐಬಿ ವೃತ್ತದ ಬಳಿ ಶುಕ್ರವಾರ ಸಂಜೆ ಕಾವೇರಿ ನೀರಾವರಿ ನಿಗಮದ ವಿಭಾಗ ಕಚೇರಿ 2 ಅನ್ನು ಉದ್ಘಾಟಿಸಿದ ಬಳಿಕ ಸಭೆಯಲ್ಲಿ ಮಾತನಾಡಿ, ನಾನು ಶಾಸಕನಾದ ಬಳಿಕ ಕೊನೇ ಭಾಗದ ರೈತರ ಕೋರಿಕೆ ಹಾಗೂ ಒತ್ತಾಸೆ ಮೇರೆಗೆ ನೀರಾವರಿ ಇಲಾಖೆ ಸಚಿವರು, ಉಪಮುಖ್ಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್ ಅವರೊಂದಿಗೆ ಹಲವು ಬಾರಿ ಚರ್ಚಿಸಿ 15 ತಿಂಗಳು ತಿರುಗಿ ಬೇಡಿಕೆಯಿಟ್ಟು ಶ್ರಮವಹಿಸಿದ್ದರಿಂದ ವಿಭಾಗ ಕಚೇರಿ ದೊರಕಿದೆ ಎಂದರು.
ಮುಂದಿನ ದಿನಗಳಲ್ಲಿ ಹಲವಾರು ನೀರಾವರಿ ಯೋಜನೆಗಳ ಮೂಲಕ ನಾಲೆಗಳ ಆಧುನೀಕರಣ ಮಾಡುವುದು ನನ್ನ ಗುರಿಯಾಗಿದೆ. ಈಗಾಗಲೇ ನೂರಾರು ಕೋಟಿ ರು. ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆ ಮಾಡುವ ಆಶಯ ಹೊಂದಿದ್ದೇನೆ ಎಂದರು.ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಈ ಹಿಂದೆ ಹಲವು ಉಪಕಚೇರಿಯನ್ನು ತಾಲೂಕಿಗೆ ತರಲು ಪ್ರಯತ್ನಿಸಿದ್ದರೂ ಅದು ಪ್ರಯೋಜನವಾಗಿರಲಿಲ್ಲ. ಆದರೆ, ಶಾಸಕ ಕೆ.ಎಂ.ಉದಯ್ ಸರ್ಕಾರದೊಂದಿಗೆ ಮಾತನಾಡಿ ಉಪಕಚೇರಿ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಶಾಸಕರು ಈಗಾಗಲೇ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಿದೆ. ಅವರಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಅವರು ಶಾಸಕರದ್ದು ಮಾತು ಕಡಿಮೆ ಕೆಲಸ ಹೆಚ್ಚು ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಈ ವೇಳೆ ಪುರಸಭಾಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶನ್, ಮನ್ಮುಲ್ ನಿರ್ದೇಶಕ ಹರೀಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಸವರಾಜು, ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಜಯಂತ್, ನಂಜುಂಡೇಗೌಡ, ಶೇಖರ್, ಎಇಇ ನಾಗರಾಜು ಹಾಗೂ ಅಜಯ್, ಪ್ರಶಾಂತ್ ಇದ್ದರು.