ಸಾರಾಂಶ
ಹಾವೇರಿ:ನಾನು ಯಾವುದೇ ಷರತ್ತು ಇಲ್ಲದೇ ಪಕ್ಷದ ತತ್ವ, ಸಿದ್ಧಾಂತಗಳನ್ನು ಮೆಚ್ಚಿ ಕಾಂಗ್ರೆಸ್ ಸೇರಿದ್ದೇನೆ. ಕಾಂಗ್ರೆಸ್ ಸೇರ್ಪಡೆ ಆಗುವಂತೆ ಅನೇಕರು ಒತ್ತಾಯಿಸುತ್ತಿದ್ದರು. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಮಾಜಿ ಶಾಸಕ ನೆಹರು ಓಲೇಕಾರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಬಿಜೆಪಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಏನೂ ಅನುಕೂಲ ಆಗಿಲ್ಲ, ಸಂವಿಧಾನ ಬದಲಾವಣೆ ಮಾಡುತ್ತೇವೆ.
ಮೀಸಲಾತಿ ತೆಗೆಯುತ್ತೇವೆ ಎಂದು ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಸಂವಿಧಾನಕ್ಕೆ ಅಪಚಾರ ಆಗುತ್ತೆ. ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು.
ಯಡಿಯೂರಪ್ಪನವರು ಜಿಲ್ಲೆಗೆ ಆಗಮಿಸಿದಾಗಲೂ ಬಿಜೆಪಿಯಲ್ಲಿ ಇರಿ ಎಂದು ಒಂದೂ ಮಾತು ಹೇಳಲಿಲ್ಲ, ಅವರು ಯಾಕೆ ಹೀಗೆ ಮಾಡಿದರೋ ಗೊತ್ತಿಲ್ಲ. ಬಸವರಾಜ ಬೊಮ್ಮಾಯಿ ಅವರೂ ನನ್ನನ್ನು ಸಂಪರ್ಕಿಸಿಲ್ಲ, ಬಿಜೆಪಿಯಲ್ಲೇ ಇರಿ ಎಂದು ಹೇಳಿದ್ದರೆ ನಾನು ಅಲ್ಲೇ ಇರುತ್ತಿದ್ದೆ. ಉದಾಸೀನತೆ ಮಾಡುವ ಪಕ್ಷದಲ್ಲಿ ಇದ್ದರೆ ಉಪಯೋಗ ಇಲ್ಲ ಎಂದು ಭಾವಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.
ಈ ವೇಳೆ ಪರಶುರಾಮ ಅಗಡಿ, ಶಿವರಾಜ ಮತ್ತಿಹಳ್ಳಿ ಇತರರು ಇದ್ದರು.