ಸರ್ಕಾರದ ಆಡಳಿತ ಜನರಿಗೆ ಹತ್ತಿರವಾಗಬೇಕು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿಯೇ ಸ್ಪಂದಿಸಿ, ನಿಗದಿತ ಕಾಲಮಿತಿಯೊಳಗೆ ಪರಿಹಾರ ಒದಗಿಸಬೇಕು ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸರ್ಕಾರದ ಆಡಳಿತ ಜನರಿಗೆ ಹತ್ತಿರವಾಗಬೇಕು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿಯೇ ಸ್ಪಂದಿಸಿ, ನಿಗದಿತ ಕಾಲಮಿತಿಯೊಳಗೆ ಪರಿಹಾರ ಒದಗಿಸಬೇಕು ಎಂದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಮತ್ತು ಆಡಳಿತಾತ್ಮಕ ಸೇವೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕು. ಈ ಉದ್ದೇಶದಿಂದಲೇ ಪ್ರಜಾಸೇವಾ ಆಂದೋಲನವನ್ನು ಆಯೋಜಿಸಲಾಗಿದ್ದು, ಜನರ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು ಮಾತ್ರವಲ್ಲದೆ, ಅವುಗಳಿಗೆ ಪರಿಣಾಮಕಾರಿಯಾಗಿ ಪರಿಹಾರ ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿದಾಗ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅನಗತ್ಯ ವಿಳಂಬ ಮಾಡದೆ, ಯಾವ ಸಮಸ್ಯೆಯನ್ನು ಯಾವ ರೀತಿಯಲ್ಲಿ ಪರಿಹರಿಸಬಹುದು ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡುವುದೇ ನಿಜವಾದ ಜನಸೇವೆ ಎಂದು ಹೇಳಿದರು. ಪ್ರಜಾಸೇವಾ ಆಂದೋಲನ ಸಭೆಗಳಿಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಹಿರಿಯ ಅಧಿಕಾರಿಗಳು ಕೂಡ ಈ ಕಾರ್ಯಕ್ರಮಗಳ ಬಗ್ಗೆ ಗಮನಹರಿಸಿ, ಜನರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಮಾರ್ಗದರ್ಶನ ನೀಡಬೇಕು. ಸಭೆಗಳಿಗೆ ಗೈರುಹಾಜರಾಗುವುದು ಅಥವಾ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ಸರ್ಕಾರ ಜನರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಶಾಸಕಾಂಗವು ಜನರ ಆಶಯಗಳಿಗೆ ಅನುಗುಣವಾಗಿ ರೂಪಿಸುವ ಯೋಜನೆಗಳನ್ನು ಕಾರ್ಯಾಂಗ ಸಮರ್ಪಕವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಸರ್ಕಾರದ ಮೇಲೆ ಜನರ ವಿಶ್ವಾಸವೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಪ್ರಜಾ ಸೇವಾ ಆಂದೋಲನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಮುಂದೆ ಮಂಡಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಇಂತಹ ಸಭೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜನರ ಅಹವಾಲುಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು. ಸಭೆಯಲ್ಲಿ ಗ್ರಾಮಸ್ಥರು ಮನೆಗಳ ಸಮಸ್ಯೆ, ಜಾನುವಾರುಗಳ ಕೊಟ್ಟಿಗೆ ನಿರ್ಮಾಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕೊರತೆ ಹಾಗೂ ವೈಯಕ್ತಿಕ ಕುಂದುಕೊರತೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.ಜನರ ಅಹವಾಲುಗಳನ್ನು ಆಲಿಸಿದ ಸಚಿವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳ ಸ್ವರೂಪಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರೆ, ಇನ್ನುಳಿದ ಸಮಸ್ಯೆಗಳನ್ನು ಪರಿಶೀಲಿಸಿ ನಿಗದಿತ ಕಾಲಮಿತಿಯೊಳಗೆ ಬಗೆಹರಿಸುವಂತೆ ನಿರ್ದೇಶನ ನೀಡಿದರು.ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿಯನ್ನೂ ಗಂಭೀರವಾಗಿ ಪರಿಗಣಿಸಬೇಕು. ಸಮಸ್ಯೆಗಳ ಪರಿಹಾರಕ್ಕೆ ಅಗತ್ಯವಿರುವ ದಾಖಲೆಗಳು ಅಥವಾ ಮಾಹಿತಿಯ ಕೊರತೆಯಿದ್ದರೆ ಫಲಾನುಭವಿಗಳಿಗೆ ತಿಳಿಸಬೇಕು. ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ, ಅರ್ಹರಿಗೆ ಸರ್ಕಾರದ ಸೌಲಭ್ಯಗಳು ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಸಂತೋಷ್ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್, ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ರೇವಣ್ಣ ಮತ್ತು ಮಂಜುಳಾಬಾಯಿ ಚಂದ್ರನಾಯ್ಕ್, ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್, ಕಾಂಗ್ರೆಸ್ ಮುಖಂಡ ಉಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.