ಪ್ರವಾಹ ವೇಳೆ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ

| Published : Oct 07 2025, 01:03 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಗೆ ಇಂಡಿ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಹಾಗಾಗಿ ನಾನು ಸೆ.26ರಿಂದ ಅ.1ರವರೆಗೆ ಬೆಳಗ್ಗೆಯಿಂದ ಸಂಜೆಯವರೆಗೆ ನನ್ನ ಭಾಗದ 12 ಗ್ರಾಮಗಳಿಗೆ ಭೇಟಿ ನೀಡಿದ್ದು, ಸಂತ್ರಸ್ತರಿಗೆ, ರೈತರಿಗೆ ಧೈರ್ಯ ತುಂಬಿದ್ದೇನೆ. ಸರ್ಕಾರದಿಂದ ಶೀಘ್ರದಲ್ಲೇ ಪರಿಹಾರ ಕೊಡಿಸುವ ಕೆಲಸ ಮಾಡಿದ್ದೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಗೆ ಇಂಡಿ ಭಾಗದಲ್ಲಿ ಸಾಕಷ್ಟು ಹಾನಿಯಾಗಿದೆ. ಹಾಗಾಗಿ ನಾನು ಸೆ.26ರಿಂದ ಅ.1ರವರೆಗೆ ಬೆಳಗ್ಗೆಯಿಂದ ಸಂಜೆಯವರೆಗೆ ನನ್ನ ಭಾಗದ 12 ಗ್ರಾಮಗಳಿಗೆ ಭೇಟಿ ನೀಡಿದ್ದು, ಸಂತ್ರಸ್ತರಿಗೆ, ರೈತರಿಗೆ ಧೈರ್ಯ ತುಂಬಿದ್ದೇನೆ. ಸರ್ಕಾರದಿಂದ ಶೀಘ್ರದಲ್ಲೇ ಪರಿಹಾರ ಕೊಡಿಸುವ ಕೆಲಸ ಮಾಡಿದ್ದೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬದ್ಧತೆಯಿಂದ ರಾಜಕಾರಣ ಮಾಡುವ ನಾನು ಪ್ರವಾಹದ ವೇಳೆಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಜೊತೆಗೆ ಭೀಮಾ ನದಿ ಪ್ರವಾಹಕ್ಕೆ ತುತ್ತಾದ ಭಾಗಗಳಿಗೆ ಸಿಎಂ ಸಿದ್ಧರಾಮಯ್ಯನವರು ವೈಮಾನಿಕ ಸಮೀಕ್ಷೆ ಮಾಡಿ, ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಮಾಡಿದೆ. ಪ್ರವಾಹದಿಂದ ಹಾಗೂ ಮಳೆಯಿಂದಾಗಿ ಕ್ಷೇತ್ರದಲ್ಲಿನ ರಸ್ತೆಗಳು, ಕಟ್ಟಡಗಳು, ಅಂಗನವಾಡಿಗಳು ಹಾನಿಗೊಳಗಾಗಿವೆ. ಹಳೆಯ ಮನೆಗಳು ಇನ್ನೂ ಕುಸಿಯುತ್ತಲಿವೆ. ಇದೆಲ್ಲವನ್ನೂ ಸರ್ವೇ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದಾಗಿ ಮಾಹಿತಿ ಹಂಚಿಕೊಂಡರು.

ಪ್ರವಾಹಕ್ಕೂ ಮೊದಲೇ ಸೊನ್ನ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿದ್ದರಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿದಂತಾಗಿದೆ. ಇಂಡಿ ನಗರದಲ್ಲಿನ ರಸ್ತೆಗಳು, ಫರ್ಟಿಲೈಸರ್ ಅಂಗಡಿಗೆ ಹಾನಿಯಾಗಿದೆ. ಹೊರ್ತಿ ಬಳಿಯ ಕೆರೆಗೆ ಭೇಟಿ ನೀಡಿ, ಅದನ್ನು ದುರಸ್ತಿ ಮಾಡಲು ಸೂಚಿಸಿದ್ದೇನೆ. ಹಾನಿಗೊಳಗಾದ ಮನೆಗಳು, ಬೆಳೆಗಳು ಎಲ್ಲವನ್ನೂ ವೇಗವಾಗಿ ಸರ್ವೇ ಮಾಡಿ ಪರಿಹಾರ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸಮನ್ವಯತೆ ಸಾಧಿಸಿ ಕರ್ನಾಟಕ-ಮಹಾರಾಷ್ಟ್ರದ ಮಧ್ಯೆ ಹರಿಯುವ ಉಪನದಿಗಳ ಬಗ್ಗೆ ಗಮನ ಹರಿಸಿ, ಸಮನ್ವತೆಯಿಂದ ನೀರು ನಿರ್ವಹಣಾ ಸಮಿತಿ ಮಾಡಬೇಕು. ಪ್ರವಾಹದಿಂದ ಸಮಸ್ಯೆಯಾದ ಬಳಿಕ ಕ್ರಮ ಕೈಗೊಳ್ಳುವ ಬದಲು ಸಮಸ್ಯೆ ಆಗದಂತೆ ಸಮನ್ವತೆಯಿಂದ ನೀರು ನಿರ್ವಹಣೆಯಿಂದ ಮುಂಚಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮೊನ್ನೆಯಷ್ಟೆ ವಿಪಕ್ಷ ನಾಯಕರು ಬಂದು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ಅದನ್ನು ನಾನು ಕೂಡ ಪ್ರಶಂಸಿಸುತ್ತೇನೆ. ಆದರೆ ಅವರೆಲ್ಲ ಅತಿಹೆಚ್ಚು ಮಳೆಯಾಗಿರುವ ಚಡಚಣಕ್ಕೆ ಭೇಟಿ ಕೊಡಬೇಕಿತ್ತು. ಜೊತೆಗೆ ಕೇಂದ್ರದಿಂದ ಸಾಕಷ್ಟು ಪರಿಹಾರ ಕೊಡಿಸುವ ಕೆಲಸ ಮಾಡಬೇಕು.

ಪ್ರವಾಹದಿಂದಾಗಿ 82,524 ರೈತರ ತೊಗರಿ, ಹತ್ತಿ, ಈರುಳ್ಳಿ, ಸಜ್ಜೆ, ಕಬ್ಬು ಸೇರಿದಂತೆ ಹಲವು ಬೆಳೆಗಳು ಶೇಕಡ 100 ರಷ್ಟು ಹಾನಿಯಾಗಿವೆ. ಆದಷ್ಟು ಬೇಗನೆ ಸೂಕ್ತ ಪರಿಹಾರಕ್ಕಾಗಿ ಈಗಾಗಲೇ ಮುಖ್ಯಮಂತ್ರಿಗಳು ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪತ್ರವನ್ನೂ ಬರೆದಿದ್ದಾರೆ ಎಂದು ತಿಳಿಸಿದರು.---------

ಬಾಕ್ಸ್‌........

ಶಾಸಕ ಯಶವಂತರಾಯಗೌಡ ಅಸಮಾಧಾನ

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಯಶವಂತರಾಯಗೌಡ ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆಯಾಗುವ ಮೊದಲೇ ಕಳೆದ ಚುನಾವಣೆಯಲ್ಲಿ ಸರ್ಕಾರ ಬರುವಾಗ ಜಿಲ್ಲೆಯ ಮೂವರು ಜನಪ್ರತಿನಿಧಿಗಳನ್ನು ಕರೆಯಲಾಗಿತ್ತು. ಪಕ್ಷಕ್ಕಾಗಿ ಕೆಲಸ ಮಾಡಿ, ಸರ್ಕಾರ ರಚನೆಯಾದರೆ ಮೂವರಿಗೆ ಸಮಾನಾಂತರವಾಗಿ ಅಧಿಕಾರ ಹಂಚಿಕೆ ಮಾಡುತ್ತೇವೆ ಎಂದು ರಾಜ್ಯ ಮತ್ತು ಕೇಂದ್ರದ ನಾಯಕರು ಭರವಸೆ ನೀಡಿದ್ದರು ಎಂದು ಹೇಳಿದರು.

ನಾನು ಮಾತು ಕೊಟ್ಟಂತೆ ನಡೆಯುತ್ತೇನೆ. ಮಾತು ಕೊಟ್ಟವರಿಗೆ ಆ ಮಾತು ಉಳಿಸಿಕೊಳ್ಳುವುದು ಬಿಟ್ಟಿದ್ದೇನೆ. ಎಐಸಿಸಿ ಹಾಗೂ ನಮಗೆ ಮಾತು ಕೊಟ್ಟವರು ನುಡಿದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಅಲ್ಲದೇ, ರಾಜ್ಯದಲ್ಲಿ ಅಧಿಕಾರ ಬದಲಾವಣೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಯಾರಿಗೂ ಮಾತನಾಡಬಾರದು ಎಂದು ಹೈಕಮಾಂಡ್ ಆದೇಶ ಮಾಡಿದೆ. ಹಾಗಾಗಿ ಈ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ರಾಹುಲ್ ಗಾಂಧಿ, ಸಿಎಂ, ಡಿಸಿಎಂ ಅವರಿಗೆ ಕೇಳಬೇಕು ಎಂದರು.