ಬಿಜೆಪಿಯಲ್ಲಿ ಹಿಂದೆ ಇದ್ದ ಪರಿಸ್ಥಿತಿ ಇಲ್ಲ. ಸದ್ಯ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ಪಕ್ಷಕ್ಕೆ ಮತ್ತಷ್ಟು ಉತ್ಸಾಹ ಬಂದಂತಾಗಿದೆ. ನನ್ನ ಸೇರ್ಪಡೆಯಿಂದ ಬಿಜೆಪಿಯ ಸ್ಥಳೀಯ ಯಾವ ನಾಯಕರಿಗೂ ಅಸಮಾಧಾನವಿಲ್ಲ. ಹಾಗೊಂದು ವೇಳೆ ಅಸಮಾಧಾನ ಇದ್ದಲ್ಲಿ ರಾಷ್ಟ್ರೀಯ ನಾಯಕರು ನನ್ನನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುತ್ತಿರಲಿಲ್ಲ

ಹುಬ್ಬಳ್ಳಿ: ಪಕ್ಷದ ಹೈಕಮಾಂಡ್‌, ರಾಜ್ಯಾಧ್ಯಕ್ಷರು ಹಾಗೂ ಹಿರಿಯ ಕಾರ್ಯಕರ್ತರ ಆಹ್ವಾನದ ಮೇರೆಗೆ ನಾನು ಮರಳಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

ಅವರು ಬಿಜೆಪಿಗೆ ವಾಪಸ್ಸಾದ ನಂತರ ಭಾನುವಾರ ಸಂಜೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರ ಮಾತನಾಡಿದರು.

ನಾನು ಕಳೆದ 3-4 ತಿಂಗಳುಗಳಿಂದ ಬೇರೆ-ಬೇರೆ ಜಿಲ್ಲೆಯಲ್ಲಿ ಪ್ರವಾಸಕ್ಕೆ ಹೋದಲೆಲ್ಲ ಅಲ್ಲಿನ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಿಂದ ನನಗೆ ಬಿಜೆಪಿ ಪಕ್ಷಕ್ಕೆ ವಾಪಸ್ ಬರುವಂತೆ ಒತ್ತಡಗಳು ಕೇಳಿ ಬಂದವು. ಅದರಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಸಹ ಮತ್ತೆ ಪಕ್ಷಕ್ಕೆ ಆಹ್ವಾನಿಸಿದರು. ಕೊನೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವದಲ್ಲಿ ಮನವೊಲಿಕೆಗೆ ಸ್ಪಂದಿಸಿ, ನಾನು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದೇನೆ.

ಶನಿವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಹುತೇಕ ಎಲ್ಲ ಜಿಲ್ಲೆಯ ನಾಯಕರು ನಾನು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.

ಬಿಜೆಪಿಯಲ್ಲಿ ಹಿಂದೆ ಇದ್ದ ಪರಿಸ್ಥಿತಿ ಇಲ್ಲ. ಸದ್ಯ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ಪಕ್ಷಕ್ಕೆ ಮತ್ತಷ್ಟು ಉತ್ಸಾಹ ಬಂದಂತಾಗಿದೆ. ನನ್ನ ಸೇರ್ಪಡೆಯಿಂದ ಬಿಜೆಪಿಯ ಸ್ಥಳೀಯ ಯಾವ ನಾಯಕರಿಗೂ ಅಸಮಾಧಾನವಿಲ್ಲ. ಹಾಗೊಂದು ವೇಳೆ ಅಸಮಾಧಾನ ಇದ್ದಲ್ಲಿ ರಾಷ್ಟ್ರೀಯ ನಾಯಕರು ನನ್ನನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಜಗದೀಶ ಶೆಟ್ಟರ್‌ ಬಿಜೆಪಿ ಸೇರ್ಪಡೆಯಾದ ಮೇಲೆ ಶೆಟ್ಟರ್‌ ಬಣ- ಜೋಶಿ ಬಣಗಳಾಗಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಶೆಟ್ಟರ್‌, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಇರುವುದು ಒಂದೇ ಅದು ಬಿಜೆಪಿ ಬಣ ಎಂದರು.

ನಾನು ಲೋಕಸಭಾ ಟಿಕೆಟ್ ಸೇರಿದಂತೆ ಯಾವುದೇ ಬೇಡಿಕೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಪಕ್ಷ ನನಗೆ ಯಾವ ಜವಾಬ್ದಾರಿ ನೀಡುತ್ತದೆಯೋ ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಒಂದೊಮ್ಮೆ ಪಕ್ಷದ ನಾಯಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚಿಸಿದರೆ ನಾನು ಸ್ಪರ್ಧಿಸಲು ಸಿದ್ಧ. ಒಂದು ವೇಳೆ ಬೇರೆಯವರಿಗೆ ಟಿಕೆಟ್‌ ನೀಡಿದಲ್ಲಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ಪಕ್ಷ ಬಿಟ್ಟವರು ಮರಳುವರು: ಕೆಲವು ಸಣ್ಣ-ಪುಟ್ಟ ವೈಮನಸ್ಸಿನಿಂದ ಬಿಜೆಪಿ ಬಿಟ್ಟು ಹೋದವರು, ಬರುವ ದಿನಗಳಲ್ಲಿ ಮತ್ತೆ ಬಿಜೆಪಿಗೆ ವಾಪಸ್ ಆಗಲಿದ್ದಾರೆ. ರಾಜಕಾರಣದಲ್ಲಿ ಬದಲಾವಣೆಗಳು ಆಗುವುದು ಸಹಜ. ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವವನ್ನು ನಾನು ಸಹಿತ ಬಿಜೆಪಿಯ ಎಲ್ಲ ನಾಯಕರು ಮೆಚ್ಚಿಕೊಂಡಿದ್ದಾರೆ. ನಾನು ಬಿಜೆಪಿಗೆ ಮರು ಸೇರ್ಪಡೆ ಆಗುವ ಮುನ್ನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲ ಕಾಂಗ್ರೆಸಿನ ನಾಯಕರಿಗೂ ಧನ್ಯವಾದ ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ತೆರೆದ ಜೀಪ್‌ನಲ್ಲಿ ಮೆರವಣಿಗೆ: ಬೆಂಗಳೂರಿನಿಂದ ಕಾರಿನಲ್ಲಿ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಮಾಜಿ ಸಚಿವ ಕಳಕಪ್ಪ ಬಂಡಿ ಅವರೊಂದಿಗೆ ಇಲ್ಲಿನ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್‌ಗೆ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಶೆಟ್ಟರ್‌ ಪರ ಘೋಷಣೆ ಕೂಗಿ ಮಾಲೆ ಹಾಕಿ ಅಭಿನಂದಿಸಿದರು.

ಅಲ್ಲಿಂದ ತೆರೆದ ಜೀಪಿನಲ್ಲಿ ಆರಂಭವಾದ ಬೃಹತ್ ಮೆರವಣಿಗೆಯು ಕೇಶ್ವಾಪುರ ವೃತ್ತ, ರಮೇಶ ಭವನದ ಮಾರ್ಗವಾಗಿ ತಮ್ಮ ಗೃಹ ಕಚೇರಿಯ ವರೆಗೆ ನಡೆಯಿತು.ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು. ಮೆರವಣಿಗೆಯಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಸೇರಿದಂತೆ ಹಲವರು ಸಾಥ್‌ ನೀಡಿದರು. ಆದರೆ, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಾಗಲಿ, ಪಾಲಿಕೆ ಸದಸ್ಯರಾಗಲಿ ಪಾಲ್ಗೊಂಡಿರಲಿಲ್ಲ.

ಬಳಿಕ ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು.ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಹಿರಿಯ ಸದಸ್ಯ ರಾಜಣ್ಣ ಕೊರವಿ, ವೀರಣ್ಣ ಸವಡಿ, ಸಂತೋಷ ಚವ್ಹಾಣ ಸೇರಿದಂತೆ ಬಿಜೆಪಿಯ ಹಲವು ಕಾರ್ಯಕರ್ತರು ಶೆಟ್ಟರ್‌ ಅವರನ್ನು ಸ್ವಾಗತಿಸಿದರು.