ವಿವಿಧ ರಾಜ್ಯಗಳ ಆರೋಗ್ಯ ವಿಜ್ಞಾನ ಸಂಸ್ಥೆಗಳು ಮತ್ತು ವಿವಿಧ ಕಾಲೇಜುಗಳೊಂದಿಗೆ ಒಡನಾಟ ಬೆಳೆಸಿದ ನನಗೆ ನಮ್ಮ ಭಾಗದಲ್ಲಿ ಆರೋಗ್ಯ ವಿಜ್ಞಾನ ಕಾಲೇಜು ಸ್ಥಾಪಿಸುವ ಕನಸು ಮೂಡಿತು.
ಶಾಂತಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸಂಸದ ಡಾ.ಕೆ. ಸುಧಾಕರ್ ಹೇಳಿಕೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಜನತೆಯ ಹಾಗೂ ನನ್ನ ತಾಯಿ ಆಶೀರ್ವಾದ ಇವು ನನ್ನನ್ನು ಮೇಲೆತ್ತಿ ಮುನ್ನಡೆಸಿವೆ, ತಲೆ ಎತ್ತಿ ಬಾಳುವಂತೆ ಮಾಡಿವೆ. ಆದ್ದರಿಂದಲೇ ನನ್ನೆಲ್ಲ ಸಾಧನೆಗಳಲ್ಲಿ ಜನತೆಯ ಕಲ್ಯಾಣ ಮತ್ತು ತಾಯಿ ಆಶೀರ್ವಾದವನ್ನು ನೋಡುತ್ತೇನೆ ಎಂದು ಸಂಸದ ಡಾ.ಕೆ. ಸುಧಾಕರ್ ತಿಳಿಸಿದರು
ತಾಲೂಕಿನ ಪೆರೆಸಂದ್ರ ಗ್ರಾಮದ ಶಾಂತಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಶಾಂತ ನರ್ಸಿಂಗ್, ಫಾರ್ಮಸಿ, ಫಿಜಿಯೋಥೆರಪಿ ಮತ್ತು ಅರೆ ವೈದ್ಯಕೀಯ ಕೋರ್ಸುಗಳ ಪ್ರಥಮ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೆಡಿಕಲ್ ಕಾಲೇಜು ನಿರ್ಮಾಣದೊಂದಿಗೆ ನನ್ನ ಆಸೆ ನಿಲ್ಲಲಿಲ್ಲ. ವಿವಿಧ ರಾಜ್ಯಗಳ ಆರೋಗ್ಯ ವಿಜ್ಞಾನ ಸಂಸ್ಥೆಗಳು ಮತ್ತು ವಿವಿಧ ಕಾಲೇಜುಗಳೊಂದಿಗೆ ಒಡನಾಟ ಬೆಳೆಸಿದ ನನಗೆ ನಮ್ಮ ಭಾಗದಲ್ಲಿ ಆರೋಗ್ಯ ವಿಜ್ಞಾನ ಕಾಲೇಜು ಸ್ಥಾಪಿಸುವ ಕನಸು ಮೂಡಿತು. ಇದರಿಂದಾಗಿಯೇ ಇಂದು ಶಾಂತ ಆರೋಗ್ಯ ವಿಜ್ಞಾನ ಶಿಕ್ಷಣ ಕಾಲೇಜಿನ ಪದವಿ ಸಮಾರಂಭ ನಿಮ್ಮ ಮುಂದೆ ಸಾಕ್ಷಿಯಾಗಿದೆ.ಇದು ನೂರ್ಕಾಲ ಮುಂದುವರಿಯಬೇಕು ಗ್ರಾಮೀಣ ಮಧ್ಯಮ ವರ್ಗದ ವಿದ್ಯಾರ್ಥಿಗಳು, ನಿರ್ದಿಷ್ಟವಾಗಿ ಹೆಣ್ಣು ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಕಾಲೇಜುಗಳು ಎಲ್ಲ ರೀತಿಯ ಸಹಕಾರ ನೀಡಬೇಕು ಎಂಬ ಆಶಯ ನನಗಿದೆ. ಇದರಿಂದಾಗಿ ನನ್ನ ಹೃದಯ ತುಂಬಿ ಬರುತ್ತದೆ. ನನ್ನಲ್ಲಿ ಸಾರ್ಥಕ ಭಾವ ಮೂಡುತ್ತದೆ ಎಂದರುಸಮಾರಂಭವನ್ನು ಉದ್ಘಾಟಿಸಿ ಪದವಿ ಪ್ರದಾನ ಮಾಡಿದ ಮಣಿಪಾಲ್ ಸಮೂಹ ಆಸ್ಪತ್ರೆಗಳ ಅಧ್ಯಕ್ಷ ಪ್ರೊ. ಸುದರ್ಶನ್ ಬಲ್ಲಾಳ್ ಮಾತನಾಡಿ, ಪೆರೇಸಂದ್ರದ ಶಾಂತ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭಿಸಿರುವ ಅಪೂರ್ವವಾದ ಆರೋಗ್ಯ ವಿಜ್ಞಾನ ಕೋರ್ಸುಗಳು ಈ ಭಾಗದ, ನಾಡಿನ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ವರದಾನವಾಗಿದ್ದು ಇವುಗಳ ಲಾಭವನ್ನು ಪಡೆಯಬೇಕು. ಸಮಾಜ ಆರೋಗ್ಯದ ಸ್ಥಿತಿಗತಿ ಮತ್ತು ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನದ ಬಗ್ಗೆ ಒಳನೋಟ ಹೊಂದಿರುವ ಡಾ.ಕೆ. ಸುಧಾಕರ್ ತಮ್ಮ ತಾಯಿಯವರ ಹೆಸರಿನಲ್ಲಿ ಉದ್ಯೋಗ ಆಧಾರಿತ ಆರೋಗ್ಯ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿರುವುದು ಅಭಿನಂದನೀಯ ಎಂದರು.
ತರಗತಿಯ ಬೋಧನೆ ಮತ್ತು ಪದವಿ ಪತ್ರಗಳಿಗೆ ಕಲಿಕೆ ಅಂತ್ಯ ವಾಗುವುದಿಲ್ಲ, ನಿಜ ಕಲಿಕೆ ವೃತ್ತಿಯಿಂದಲೇ ಆರಂಭವಾಗುತ್ತದೆ. ನೀವೆಲ್ಲರೂ ವೃತ್ತಿ ಗಳಿಸಿ ವೃತ್ತಿಯೊಂದಿಗೆ ಪರಿಣಿತಿ, ಬದ್ಧತೆ, ವೃತ್ತಿ ಸಂಹಿತೆ ಮೈಗೂಡಿಸಿಕೊಂಡು ಜಗತ್ತಿನ ಮೂಲೆ ಮೂಲೆಗಳಲ್ಲಿ ಕರ್ನಾಟಕ ಹಾಗೂ ಚಿಕ್ಕಬಳ್ಳಾಪುರದ ಯುವ ವಿದ್ಯಾರ್ಥಿಗಳು ನಮ್ಮ ದೇಶದ ಗೌರವವನ್ನು ಎತ್ತಿ ಹಿಡಿಯಬಹುದು. ಆಗ ಮಾತ್ರ ಸುಧಾಕರ್ ಮತ್ತು ನನ್ನಂತಹವರ ಆಶಯಗಳು ಸಾರ್ಥಕ ಪಡೆಯುತ್ತವೆ.ಇಂತಹ ಸಾಧನೆಯಿಂದಲೇ ಡಾ.ಸುಧಾಕರ್ ಅವರ ತಾಯಿಯವರು ನಿಜವಾದ ಗೌರವ ಪಡೆಯುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಡಾ. ಪ್ರೀತಿ ಸುಧಾಕರ್ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ವಚನ ಬೋಧಿಸಿದರು. ಡೀನ್ ಮತ್ತು ಪ್ರಾಂಶುಪಾಲ ಡಾ. ನವೀನ್ ಸೈಮನ್, ನಿರ್ದೇಶಕ ಡಾ. ಕೋಡಿ ರಂಗಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಫಾರ್ಮಸಿ ಪ್ರಾಂಶುಪಾಲ ಡಾ. ಗೋಪಿನಾಥ್, ಶಾಂತಾ ವಿದ್ಯಾನಿಕೇತನದ ಪ್ರಾಂಶುಪಾಲ ಪ್ರೊ. ಪ್ರಸಾದ್, ನರ್ಸಿಂಗ್ ಮುಖ್ಯಸ್ಥೆ ಡಾ. ಡಯಾನ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಆಕಾಂಕ್ಷ ಇದ್ದರು.ಪೆರೆಸಂದ್ರ ಗ್ರಾಮದ ಶಾಂತ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಪ್ರಥಮ ಪದವಿ ಪ್ರದಾನ ಸಮಾರಂಭದಲ್ಲಿ ಗಣ್ಯರೊಂದಿಗೆ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳು.