ಬಾಯಿಬೀಗ ಹಾಕಿಕೊಂಡು ಮಾರಮ್ಮನಿಗೆ ಹರಕೆ

| Published : Mar 27 2025, 01:09 AM IST

ಸಾರಾಂಶ

ಹನೂರು ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಬುಧವಾರ ದೊಡ್ಡಬಾಯಿ ಬೀಗ ಹಾಕಿಕೊಂಡು ಭಕ್ತಾದಿಗಳು.

ಕನ್ನಡಪ್ರಭ ವಾರ್ತೆ ಹನೂರು

ನೋವಿಲ್ಲ, ಅಂಜಿಕೆಯಿಲ್ಲ 18-20 ಅಡಿ ಉದ್ದದ ಸರಳನ್ನು ಬಾಯಿಗೆ ಚುಚ್ಚಿದರೂ ಯಾವುದೇ ಆತಂಕವಿಲ್ಲ. ಆದರೆ, ನೋಡುಗರು ಮಾತ್ರ ಭಕ್ತಿ ಪರಾಕಾಷ್ಠೆಗೆ ರೋಮಾಂಚಿತರಾದರು.

ಹೌದು, ಹನೂರು ಪಟ್ಟಣದ ಆದಿಪರ ಶಕ್ತಿ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಬುಧವಾರದಂದು 3000ಕ್ಕೂ ಹೆಚ್ಚು ಭಕ್ತಾದಿಗಳು ಸಣ್ಣ ಬಾಯಿ ಬೀಗ ಹಾಕಿಕೊಂಡು ಮಾರಮ್ಮನಿಗೆ ಹರಕೆ ತೀರಿಸಿದರು. ಜೊತೆಗೆ, 103 ಮಂದಿ 18-20 ಅಡಿ ಉದ್ದದ ಸರಳುಗಳ ಬಾಯಿ ಬೀಗ ಧರಿಸಿ ಮಾರಮ್ಮನಿಗೆ ನಮಿಸಿದರು.ದೊಡ್ಡ ಬಾಯಿಬೀಗ ಹಾಕಿಕೊಂಡ ಭಕ್ತರು:

ಕಳೆದ ಒಂದು ವಾರದಿಂದ ಮಾರಮ್ಮನ ದೇವಾಲಯದಲ್ಲಿ ಸೇವೆ ಸಲ್ಲಿಸಿ ಬೆಳಗ್ಗೆ ತಣ್ಣೀರು ಸ್ನಾನ ಮಾಡಿ, ಉಪವಾಸವಿದ್ದ 103 ಮಂದಿ ಭಕ್ತಾದಿಗಳು 18 ರಿಂದ 20 ಅಡಿ ಸರಳನ್ನು ಬಾಯಿಗೆ ಚುಚ್ಚಿಕೊಂಡು ಭಕ್ತಿ ಪರಕಾಷ್ಟೆ ಮೆರೆದರು.

ದೊಡ್ಡ ಬಾಯಿ ಬೀಗ ವಿಶೇಷ :

ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಬುಧವಾರದಂದು 78 ಮಂದಿ ಪುರುಷರು 25 ಮಹಿಳೆಯರು ದೊಡ್ಡ ಬಾಯಿ ಬೀಗ ಹಾಕಿಕೊಂಡಿದ್ದು ನೋಡುಗರ ಎದೆ ಝಲ್ಲೆನಿಸುವಂತಿತ್ತು. ಆಂಜನೇಯ ಸ್ವಾಮಿ ದೇವಾಲಯದಿಂದ ಕಿ.ಮೀ ಗಟ್ಟಲೆ ಮೆರವಣಿಗೆ ನಡೆಸಿ ಮಾರಮ್ಮನಿಗೆ ಭಕ್ತಿ ಸಮರ್ಪಿಸಿ ತಮ್ಮ ಸೇವೆಯನ್ನು‌ ಸಂಪನ್ನಗೊಳಿಸಿದರು.

ನೆತ್ತಿ ಸುಡುವ ಬಿಸಿಲಿನಲ್ಲಿ ಭಾರಿ ಜನಸ್ತೋಮ:

ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಹಾಗೂ ವಿವಿಧ ತಾಲೂಕುಗಳಿಂದಲೂ ಸಹ ಜಾತ್ರೆಗೆ ಭಕ್ತರು ಬಂದಿದ್ದರು. ಯಾವುದೇ ಅಹಿತಕರ ಘಟನೆ ಆಗದಂತೆ ಪೊಲೀಸ್ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸುವ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಬೆಟ್ಟಳ್ಳಿ ಮಾರಮ್ಮನಿಗೆ ಶಾಸಕರ ಪೂಜೆ:

ಹನೂರು ಶಾಸಕ ಎಂಆರ್ ಮಂಜುನಾಥ್ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯಕ್ಕೆ ಭೇಟಿ ನೀಡಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬರುವಂತಹ ಭಕ್ತಾದಿಗಳಿಗೆ ಮತ್ತು ಮಾರಮ್ಮನ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಿರಲಿ ಕಾಲಕಾಲಕ್ಕೆ ಮಳೆ ಬೆಳೆ ಆಗುವಂತೆ ದೇವಿಯಲ್ಲಿ ಪೂಜೆ ಸಲ್ಲಿಸಿ ನಿವೇದನೆ ಮಾಡಿಕೊಂಡರು.

ಬಿಜೆಪಿ ಮುಖಂಡ ಭೇಟಿ:

ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆ ಹಿನ್ನೆಲೆಯಲ್ಲಿ ಬಿಜೆಪಿ ಉತ್ಸಾಹಿ ಮುಖಂಡ ನಿಶಾಂತ್ ಮಾರಮ್ಮನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾರಮ್ಮನಿಗೆ ಹರಕೆ ಕಾಣಿಕೆಗಳನ್ನು ಸಮರ್ಪಿಸಿದರು.

ಮಜ್ಜಿಗೆ ಪಾನಕ ವಿತರಣೆ:

ಪಟ್ಟಣದಲ್ಲಿ ನಡೆಯುತ್ತಿರುವ ದೊಡ್ಡ ಬಾಯಿ ಬೇಗ ಹಾಗೂ ಸಣ್ಣ ಬಾಯಿ ಬೀಗ ಮತ್ತು ಸಾವಿರಾರು ಭಕ್ತರು ಮಾರಮ್ಮನ ಜಾತ್ರೆಗೆ ಬರುವುದರಿಂದ ಆಟೋ ಮತ್ತು ಚಾಲಕರ ಸಂಘದ ವತಿಯಿಂದ ಬಂಡಳ್ಳಿ ರಸ್ತೆಯಲ್ಲಿ ಪಾನಕ ಮಜ್ಜಿಗೆ ಸಹ ಭಕ್ತಾದಿಗಳಿಗೆ ವಿತರಿಸುವ ಮೂಲಕ ಸುಡುಬಿಸಿಲಿನಲ್ಲಿ ಬರುವಂತ ಭಕ್ತಾದಿಗಳಿಗೆ ಪಾನಕ ಮಜ್ಜಿಗೆ ವಿತರಣೆ ಮಾಡಿ ಮಾರಮ್ಮನ ಭಕ್ತರಿಗೆ ನೀರಿನ ದಾಹ ಹಾಗೂ ದಣಿವನ್ನು ನೀಗಿಸಿದರು.