ಸಾರಾಂಶ
ಕನಕಪುರ : ನಾನು ರಾಜ್ಯಕ್ಕೆ ಸೇವೆ ಮಾಡಬೇಕೆಂದು ದೊಡ್ಡಮಟ್ಟದ ಪ್ರಯತ್ನ, ಹೋರಾಟ ನಡೆಯುತ್ತಿದೆ. ಕನಕಪುರದ ಜನರ ಹಾರೈಕೆ, ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಆ ‘ಶುಭ ಗಳಿಗೆ’ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಪರೋಕ್ಷವಾಗಿ ಮುಖ್ಯಮಂತ್ರಿ ಗಾದಿ ಕುರಿತು ಅಭಿಲಾಷೆ ಹೊರಹಾಕಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿರುವ ಹೊತ್ತಿನಲ್ಲೇ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ಕನಕಪುರದ ಜನತೆ ನನಗೆ ಆಶೀರ್ವಾದ ಮಾಡಿದ್ದು, ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಎಂದು ಇದೀಗ ದೊಡ್ಡ ಪ್ರಯತ್ನ, ಹೋರಾಟ ನಡೆಯುತ್ತಿದೆ. ನಿಮ್ಮೆಲ್ಲರ ಆಸೆ, ಹಾರೈಕೆ ಹಾಗೂ ತಾಲೂಕಿನ ಜನರ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ಶುಭಗಳಿಗೆ ಬರಲಿದೆ ಎಂದು ಹೇಳಿದರು.
ಇದೇ ವೇಳೆ ಸದ್ಯ ನಾನು ಇಲ್ಲಿಗೆ ಉಪಮುಖ್ಯಮಂತ್ರಿ ಆಗಿ ಬಂದಿಲ್ಲ, ನಿಮ್ಮ ಶಾಸಕನಾಗಿ ಬಂದಿದ್ದೇನೆ. ಉಪಮುಖ್ಯಮಂತ್ರಿ ಏನಿದ್ದರೂ ವಿಧಾನಸೌಧದಲ್ಲಿ ಮಾತ್ರ. ಇಲ್ಲಿ ನೀವೆಲ್ಲ ನಮ್ಮ ಮನೆ ಮಕ್ಕಳು ಎಂದು ತಿಳಿಸಿದರು.