ಕಾವೇರಿಗಾಗಿ ಮೋದಿಯನ್ನೇ ನಂಬಿದ್ದೇನೆ: ದೇವೇಗೌಡ

| Published : Apr 16 2024, 01:00 AM IST / Updated: Apr 16 2024, 09:12 AM IST

ಸಾರಾಂಶ

ನಾನು ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ನಂಬಿದ್ದೇನೆ.  ವಿ.ಸೋಮಣ್ಣ ಗೆದ್ದರೆ ತಲೆ ಎತ್ತಿ ನಾನು ನರೇಂದ್ರ ಮೋದಿಯವರಿಗೆ ಕಾವೇರಿ ನೀರು ಮತ್ತು ಮೇಕೆದಾಟಿನ ಬಗ್ಗೆ ಪ್ರಶ್ನೆ ಮಾಡುವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

  ಕೊರಟಗೆರೆ :  ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳಲ್ಲೂ ನಮ್ಮ ಮೈತ್ರಿ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಾರ್ಲಿಮೆಂಟ್‌ಗೆ ಕಳಿಸಿಕೊಡುವ ಶಕ್ತಿ ನನಗಿನ್ನೂ ಇದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ಆಗುವ ಅರ್ಹತೆ ಯಾರಿಗಿದೆ ಹೇಳಿ? ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆದ್ದರೆ ನಿಮ್ಮ ದೇವೇಗೌಡರೇ ಗೆದ್ದಂತೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಕೊರಟಗೆರೆ ಪಟ್ಟಣದ ಊರ್ಡಿಗೆರೆ ಸಮೀಪದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯತೀತ ಜನತಾದಳ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ನಂಬಿದ್ದೇನೆ. ೧೯೬೨ರಿಂದ ನಾನು ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದೇನೆ. ವಿ.ಸೋಮಣ್ಣ ಗೆದ್ದರೆ ತಲೆ ಎತ್ತಿ ನಾನು ನರೇಂದ್ರ ಮೋದಿಯವರಿಗೆ ಕಾವೇರಿ ನೀರು ಮತ್ತು ಮೇಕೆದಾಟಿನ ಬಗ್ಗೆ ಪ್ರಶ್ನೆ ಮಾಡುವೆ. ತಮಿಳುನಾಡಿನ ಸ್ಟಾಲಿನ್ ನೀರಿನ ವೈರತ್ವದ ಬಗ್ಗೆ ಪ್ರಧಾನಿ ಮೋದಿಗೂ ಅರ್ಥವಾಗಿದೆ. ನಾನು 2019 ಲ್ಲಿ ಸೋತಿದ್ದಕ್ಕೆ ವ್ಯಥೆಯಿಲ್ಲ, ಆದರೆ ಈ ಬಾರಿ ವಿ.ಸೋಮಣ್ಣ ಗೆದ್ದು ದೆಹಲಿಗೆ ಹೋಗಬೇಕಿದೆ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯನವರೇ ನೀವು ರಾಜ್ಯದ 7 ಕೋಟಿ ಜನರ ಮುಖ್ಯಮಂತ್ರಿ, ೧೫೦ ಕೋಟಿ ಜನರ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಮುನ್ನ ಎಚ್ಚರವಹಿಸಿ. ಸೋಮಣ್ಣ ಎಲ್ಲಿಯವನು ಅಂತಾ ನೀವು ಕೇಳುತ್ತೀರಾ? ನೀವು ಎಲ್ಲಿಯವರು, ಬಾದಾಮಿಗೆ ಯಾಕೆ ಹೋಗಿದ್ರಿ ಹೇಳಿ. ಹೆಗಡೆ ಸಿಎಂ ಆಗಿದ್ದಾಗ ಬರಗಾಲವಿತ್ತು, ಆಗ ಅವರದ್ದೇ ಕೇಂದ್ರ ಸರ್ಕಾರವಿದ್ದಾಗ ಎಷ್ಟು ಹಣ ಕೊಟ್ಟಿತ್ತು ಎಂದು ಸಿದ್ದರಾಮಯ್ಯ ಹೇಳಲಿ. ನಾನು ತುಮಕೂರಿಗೆ ನೀರು ಕೊಡುವುದಿಲ್ಲ ಅಂತ ಹೇಳಿ ನನ್ನನ್ನು ಸೋಲಿಸಿದರು. ಈಗ ಬೆಂಗಳೂರಿನಲ್ಲಿ ಕುಡಿಯೋ ನೀರಿನ ದಂಧೆ ಹೇಗೆ ನಡೆಯುತ್ತಿದೆ ಎಂಬುದು ಪ್ರಧಾನಿ ಮೋದಿಯವರ ಗಮನಕ್ಕೆ ಹೋಗಿದೆ ಎಂದರು.