ಸಾರಾಂಶ
ಕೊಪ್ಪಳ: ಈ ಗುಲಾಮಿತನದಿಂದ ಹೊರ ಬರಬೇಕು ಅನಿಸುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ನೋವಿನಿಂದ ಹೇಳಿಕೊಂಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
ಜಿಲ್ಲಾ ನ್ಯಾಯಾಲಯ ಕಟ್ಟಡದ ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗುಲಾಮಿತನ ಕುರಿತು ಮಾತನಾಡಿದ್ದಾರೆ. ಆದರೆ, ಗುಲಾಮಿಗಿರಿ ಎಲ್ಲಿದೆ? ಯಾರಿಂದ ಗುಲಾಮಗಿರಿ? ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ತಮ್ಮದೇ ಸರ್ಕಾರ ಇದ್ದರೂ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಅನುದಾನ ತರಲು ಆಗಲಿಲ್ಲ ಎನ್ನುವ ನೋವಿನ ಕುರಿತು ಮಾತನಾಡುವಾಗ ಈ ರೀತಿ ಹೇಳಿದ್ದಾರೆ. ವಾಸ್ತವದಲ್ಲಿ ಇದು ಹಲವಾರು ಬಗೆಯ ಚರ್ಚೆಗಳಿಗೆ ನಾಂದಿಯಾಗಿದೆ.ಲೀಡರ್ ಇಲ್ಲ: ಕೊಪ್ಪಳ ವಕೀಲರ ಸಂಘವನ್ನು ಸ್ಮರಿಸುವೆ. ಸಂಘ ಬಹಳ ಜಾಗೃತವಾಗಿದೆ. ನನ್ನನ್ನು ಹಿಡಿದುಕೊಂಡು ಕೊಪ್ಪಳ ಜಿಲ್ಲೆಯಲ್ಲಿ ಒಬ್ಬ ಡೈನಾಮಿಕ್ ಲೀಡರ್ ಇಲ್ಲ ಎಂದು ಅನಿಸುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಅಸಮಾಧಾನ ಹೊರಹಾಕಿದರು.
26 ವರ್ಷ ಕಳೆದ ನಂತರ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯಾಗಿದೆ. ಸಚಿವ ಎಚ್.ಕೆ. ಪಾಟೀಲ್ ಕೃಪೆಯಿಂದ ಈ ಕಾರ್ಯ ನಡೆದಿದೆ. ನಮ್ಮ ವಕೀಲರು ಇದಕ್ಕೂ ಹೋರಾಟ ಮಾಡಿದ್ದಾರೆ. ಇದು ನನಗೆ ಬೇಸರ ಅನಿಸಿಬಿಡುತ್ತದೆ. ಆಗ ಸಚಿವರಾಗಿದ್ದ ಸಿ.ಸಿ. ಪಾಟೀಲ, ಕಾರಜೋಳ ಹತ್ತಿರ ತೆರಳಿದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ. ಇದೆಲ್ಲ ನೋಡಿದರೆ ಗುಲಾಮಿತನದ ರಾಜಕಾರಣ ಅನಿಸುತ್ತದೆ. ಒಂದು ಸಾರಿ ಈ ಗುಲಾಮಿತನದಿಂದ ಹೊರಗೆ ಬಂದುಬಿಡಬೇಕು ಅನಿಸುತ್ತದೆ. ಆದರೆ, ಪಕ್ಷದ ಚೌಕಟ್ಟಿನಲ್ಲಿ ಇದ್ದಿವಲ್ಲಾ ಅಂತ ಸುಮ್ಮನಿರಬೇಕಾಗುತ್ತದೆ ಎಂದರು.ಕೊನೆಗೆ ವಕೀಲರು ಪಿಐಎಲ್ ಹಾಕಿ ಭೂಮಿ ಮಂಜೂರಾತಿ ಮಾಡಿಸಿಕೊಳ್ಳಬೇಕಾಯಿತು. ಜಿಲ್ಲೆ ಆಗಬೇಕಾದರೂ ವಕೀಲರು ಹೋರಾಟ ಮಾಡಿದ್ದಾರೆ. ಮುಂದಿನ ಗುರಿ ವಿಮಾನ ನಿಲ್ದಾಣಕ್ಕಾಗಿ ಹೋರಾಟ ಮಾಡಬೇಕು. ಇದಕ್ಕೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಸಹಕಾರ ನೀಡಬೇಕು. ಕೈಗಾರಿಕೆಗಳು ಇರುವುದರಿಂದ ಕೊಪ್ಪಳಕ್ಕೆ ವಿಮಾನ ನಿಲ್ದಾಣದ ಅಗತ್ಯವಿದೆ ಎಂದರು.ಗ್ರಾಮ ನ್ಯಾಯಾಲಯಕ್ಕೆ ವಿರೋಧ: ರಾಜ್ಯ ಸರ್ಕಾರ ಗ್ರಾಮ ನ್ಯಾಯಾಲಯ ತೆರೆಯಲು ಮುಂದಾಗಿರುವುದಕ್ಕೆ ನನ್ನ ವಿರೋಧ ಇದೆ. ಇದರ ಅಗತ್ಯ ಏನಿದೆ? ಈಗಾಗಲೇ ತಾಲೂಕುವಾರು ನ್ಯಾಯಾಲಯಗಳಿವೆ. ಸಂಚಾರಿ ನ್ಯಾಯಾಲಯಗಳಿವೆ. ತಂತ್ರಜ್ಞಾನ ಮುಂದುವರೆದಿದೆ. ಸೌಲಭ್ಯಗಳಿವೆ. ಹೊರೆಯಾಗುವ ಗ್ರಾಮ ನ್ಯಾಯಾಲಯ ಬೇಡ ಎನ್ನುವುದು ನನ್ನ ವೈಯಕ್ತಿಕ ನಿಲುವು. ಇದು ತಪ್ಪಾಗಿರಬಹುದು, ಸರಿಯೂ ಇರಬಹುದು ಎಂದು ಸಂಸದರು ಹೇಳಿದರು.