ಸಾರಾಂಶ
ಕೇರಳದ ಕನ್ನಡತಿ, ಸದ್ಯ ಮಳವಳ್ಳಿಯಲ್ಲಿ ನೆಲೆಸಿರುವ ರಾಧಾ ಅವರು ಮಗಳ ಶಾಲಾ ದಾಖಲಾತಿ ವಿಚಾರವಾಗಿ ವಯನಾಡು ಜಿಲ್ಲೆಯ ಚೂರಲ್‌ಮಲೆಗೆ ತೆರಳಿದ್ದ ವೇಳೆ ಮಹಾ ಪ್ರಳಯಕ್ಕೆ ಸಿಲುಕಿ ಅದೃಷ್ಟವಶಾತ್ ಪಾರಾಗಿ ಬಂದಿದ್ದಾರೆ.
ಚಾಮರಾಜನಗರ: ಕೇರಳದ ಕನ್ನಡತಿ, ಸದ್ಯ ಮಳವಳ್ಳಿಯಲ್ಲಿ ನೆಲೆಸಿರುವ ರಾಧಾ ಅವರು ಮಗಳ ಶಾಲಾ ದಾಖಲಾತಿ ವಿಚಾರವಾಗಿ ವಯನಾಡು ಜಿಲ್ಲೆಯ ಚೂರಲ್‌ಮಲೆಗೆ ತೆರಳಿದ್ದ ವೇಳೆ ಮಹಾ ಪ್ರಳಯಕ್ಕೆ ಸಿಲುಕಿ ಅದೃಷ್ಟವಶಾತ್ ಪಾರಾಗಿ ಬಂದಿದ್ದಾರೆ.
ಕತ್ತಿನ ತನಕ ಬಂದಿದ್ದ ನೀರಿನ ನಡುವೆ ಹಗ್ಗ ಹಿಡಿದು ಬೆಟ್ಟ ಏರಿ ಪಾರಾಗಿ ಬಂದಿದ್ದೇನೆ ಎಂದು ಅವರು ಆ ಸಂದರ್ಭದ ಭಯಾನಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಕಣ್ಣೆದುರೇ ಮಹಾ ಪ್ರಳಯ ಕಂಡ ಇವರು ಅಕ್ಷರಶಃ ಎರಡು ದಿನ ನರಕ ನೋಡಿ ಬಂದಿದ್ದಾರೆ.ರಾತ್ರಿ ಶುರುವಾದ ಜೋರು ಮಳೆಯಿಂದ ಬಚಾವ್ ಆಗಲು ಬೆಟ್ಟ ಏರಿದೆವು. 10 ನಿಮಿಷದಲ್ಲೇ ಎಲ್ಲವೂ ನಮ್ಮ ಕಣ್ಣೆದುರೇ ನಾಶವಾಯಿತು. ಆಸ್ಪತ್ರೆ ಕಟ್ಟಡವೊಂದು ಬಿಟ್ಟರೆ ಏನೂ ಉಳಿದಿಲ್ಲ, ನನ್ನ ಮಗಳ ಶಾಲಾ ದಾಖಲಾತಿಗಾಗಿ ಕೆಲ ದಾಖಲೆಗಳನ್ನು ತರಲು ಅಲ್ಲಿಗೆ ಹೋಗಿದ್ದೆ, ಸಂಜೆ ಭೇಟಿ ಕೊಟ್ಟಿದ್ದ ಶಾಲೆ ಬೆಳಗ್ಗೆ ಹೊತ್ತಿಗೆ ನೋಡಿದರೆ ಅವಶೇಷವೇ ಇಲ್ಲದಂತೆ ನಾಶವಾಗಿದೆ ಎಂದು ಕಣ್ಣೀರಾದರು.
ಗುಡ್ಡದ ಮೇಲಿದ್ದರೂ ಅದೊಂದು ರೀತಿ ನರಕವೇ ಆಗಿತ್ತು. ಒಬ್ಬರಿಗೆ ಕೈ ಇಲ್ಲ, ಇನ್ನೊಬ್ಬರಿಗೆ ತಲೆ ಇರಲಿಲ್ಲ. ಮನೆಯಲ್ಲಿ ಉಳಿದಿದ್ದ ಒಂದೇ ಗೋಡೆ ಹಿಡಿದು ತಾಯಿ-ಮಗು ಬದುಕಿದ್ದರು... ಇಂಥ ದೃಶ್ಯ ಯಾರಿಗೂ ಬೇಡ ಎಂದಿರುವ ಅವರು, ಜಾತಿ ಪ್ರಮಾಣಪತ್ರದಲ್ಲಿ ಉಂಟಾಗಿರುವ ದೋಷ ಸರಿಪಡಿಸಿ, ಮಗಳಿಗೆ ಶಾಲಾ ದಾಖಲಾತಿಗೆ ಅನುಕೂಲ ಮಾಡಿಕೊಡುವಂತೆ ಕೇರಳ ಸರ್ಕಾರವನ್ನು ಮನವಿ ಮಾಡಿದ್ದಾರೆ.ಎರಡು ದಿನ ತಾವು ಕಂಡ ನರಕದ ದೃಶ್ಯದಿಂದ ಇನ್ನೂ ಚೇತರಿಸಿಕೊಳ್ಳದ ರಾಧಾ ಸದ್ಯ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯ ಸಂಬಂಧಿ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.