ಎಚ್‌.ಡಿ ಕುಮಾರಸ್ವಾಮಿಗೂ ಮೊದಲು ಚನ್ನಪಟ್ಟಣ ನೋಡಿದವನು ನಾನು: ಡಿ.ಕೆ ಶಿವಕುಮಾರ್‌

| Published : Jun 26 2024, 12:35 AM IST

ಎಚ್‌.ಡಿ ಕುಮಾರಸ್ವಾಮಿಗೂ ಮೊದಲು ಚನ್ನಪಟ್ಟಣ ನೋಡಿದವನು ನಾನು: ಡಿ.ಕೆ ಶಿವಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಸ್ವಾಮಿ ಅವರು ಚನ್ನಪಟ್ಟಣ ನೋಡುವುದಕ್ಕಿಂತ ಮೊದಲೇ ನಾನು ನೋಡಿದ್ದೇನೆ. ಅವರು ತಡವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕುಮಾರಸ್ವಾಮಿ ಅವರು ಚನ್ನಪಟ್ಟಣ ನೋಡುವುದಕ್ಕಿಂತ ಮೊದಲೇ ನಾನು ನೋಡಿದ್ದೇನೆ. ಅವರು ತಡವಾಗಿ ರಾಜಕೀಯಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚನ್ನಪಟ್ಟಣಕ್ಕೆ ಏನೂ ಮಾಡಿಲ್ಲ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಚನ್ನಪಟ್ಟಣಕ್ಕೆ ನಾನು ಏನು ಮಾಡಿದ್ದೇನೆ, ಏನು ಮಾಡಿಲ್ಲ ಎಂದು ಕುಮಾರಸ್ವಾಮಿಗೇನು ಗೊತ್ತು? ನಾನು 1985ರಲ್ಲೇ ಅವರ ತಂದೆ ವಿರುದ್ಧ ಚುನಾವಣೆಗೆ ನಿಂತವನು. ಕುಮಾರಸ್ವಾಮಿ 1995ರ ಬಳಿಕ ಲೋಕಸಭಾ ಚುನಾವಣೆಗೆ ನಿಂತವರು. ದೊಡ್ಡವರು ಅಧಿಕಾರ ಅನುಭವಿಸಿದರೂ ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನ ಜನರಿಗೆ ಅಳಿಲು ಸೇವೆ ಮಾಡಬೇಕಿದೆ. ಈಗ ಉತ್ತಮ ಸಮಯ ಒದಗಿ ಬಂದಿದೆ. ಸಣ್ಣ ಸಹಾಯ ಮಾಡೋಣ ಎಂದು ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಹೇಳಿದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಡಿ.ಕೆ.ಸುರೇಶ್‌ ಅವರಿಗೆ ಆಸಕ್ತಿಯಿಲ್ಲ. ಜನರು ಸುರೇಶ್‌ಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ, ಅವರಿಗೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ. ನಮ್ಮನ್ನು ನಂಬಿ ಚನ್ನಪಟ್ಟಣದ ಜನ 85 ಸಾವಿರ ಮತ ಕೊಟ್ಟಿದ್ದಾರೆ. ನಮ್ಮನ್ನು ನಂಬಿದ ಜನರ ಕೈ ಬಿಡುವುದಕ್ಕೆ ಆಗುವುದಿಲ್ಲ. ದೇವರಂಥ ಜನ ರಾಜ್ಯದಲ್ಲಿ ನಮಗೆ 136 ಸ್ಥಾನ ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ಅದನ್ನು ಜನರ ಅಭಿವೃದ್ಧಿಗೆ ವಿನಿಯೋಗಿಸಬೇಕಿದೆ ಎಂದು ಹೇಳಿದರು.

‘ತಮ್ಮ ಮೇಲಿನ ದ್ವೇಷದ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ’ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ‘ಮೈನಿಂಗ್ ಬಗ್ಗೆ ಎಚ್‌ಡಿಕೆ ಅವರಿಗೆ ತಿಳುವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ನನಗಂತೂ ಆ ಬಗ್ಗೆ ಏನೂ ಗೊತ್ತಿಲ್ಲ’ ಎಂದರು.