ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ

| Published : Dec 23 2023, 01:45 AM IST / Updated: Dec 23 2023, 01:46 AM IST

ಸಾರಾಂಶ

ನಾನು ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗಿದ್ದೆ. ಹೈಕಮಾಂಡ್‌ನ ಯಾವ ನಾಯಕರನ್ನು ಭೇಟಿ ಮಾಡಿಲ್ಲ. ಲೋಕಸಭೆ ಚುನಾವಣೆಯ ಚರ್ಚೆಗಾಗಿ ಹೋಗಿಲ್ಲ. ಇದೆಲ್ಲ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ಪಷ್ಟಪಡಿಸಿದ್ದಾರೆ.

- ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪಷ್ಟಣೆಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಾನು ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗಿದ್ದೆ. ಹೈಕಮಾಂಡ್‌ನ ಯಾವ ನಾಯಕರನ್ನು ಭೇಟಿ ಮಾಡಿಲ್ಲ. ಲೋಕಸಭೆ ಚುನಾವಣೆಯ ಚರ್ಚೆಗಾಗಿ ಹೋಗಿಲ್ಲ. ಇದೆಲ್ಲ ಸುಳ್ಳು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನನಗಿಂತ ಮುಂಚಿತವಾಗಿ ದೆಹಲಿಗೆ ಹೋಗಿದ್ದರು. ಅವರು ಪ್ರಧಾನಿಗಳನ್ನು ಭೇಟಿಯಾಗಲು ಹೋಗಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ಹೋಗಿದ್ದೆ. ಯಾವ ನಾಯಕರನ್ನೂ ಭೇಟಿ ಮಾಡಿಲ್ಲ ಎಂದರು.

ಮೊನ್ನೆಯಷ್ಟೇ ವೀಕ್ಷಕರ ಸಭೆಯಾಗಿದೆ. ಟಿಕೆಟ್‌ ಆಕಾಂಕ್ಷಿಗಳ ಶಾರ್ಟ್‌ ಲಿಸ್ಟ್‌ ಮಾಡಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದ ಅವರು, ಕಾಂಗ್ರೆಸ್‌ನಿಂದ ಯಾರನ್ನೇ ನಿಲ್ಲಿಸಿದರೂ ಅವರನ್ನು ಗೆಲ್ಲಿಸಲು ಫೈಟ್‌ ಮಾಡುತ್ತೇನೆ. ಲೋಕಸಭಾ ಚುನಾವಣೆಗೂ ನನ್ನ ದೆಹಲಿ ಭೇಟಿಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಖರ್ಗೆ ಒಳ್ಳೆಯ ಆಡಳಿತಗಾರರು:

ಐಎನ್‌ಡಿಐಎ ಒಕ್ಕೂಟದ ಪಿಎಂ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರಿಗೆ ಅಪಸ್ವರ ಕೇಳಿಬಂದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಒಂದು ಕಡೆ, ಉಳಿದ ಎಲ್ಲ ವಿರೋಧ ಪಕ್ಷಗಳು ಮತ್ತೊಂದು ಕಡೆ. ಪ್ರಧಾನಿ ಅಭ್ಯರ್ಥಿ ಯಾರೆಂಬುದು ಎಲ್ಲರಲ್ಲೂ ಒಮ್ಮತದ ತೀರ್ಮಾನ ಮಾಡಬೇಕಾಗುತ್ತದೆ ಎಂದರು.

ಖರ್ಗೆ ಒಳ್ಳೆಯ ಅನುಭವ ಇರುವ, ಮುತ್ಸದ್ದಿ ರಾಜಕಾರಣಿ. ಒಳ್ಳೆಯ ಆಡಳಿತಗಾರರು. ಹೀಗಾಗಿ ಕೆಲವರು ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ಒಕ್ಕೂಟದ ಎಲ್ಲ ಸದಸ್ಯರು ಒಟ್ಟಾಗಿ ನಿರ್ಣಯ ತೆಗೆದುಕೊಳ್ಳಬೇಕು. ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿ ಯಾರೆಂಬುದು ತೀರ್ಮಾನ ಆಗಬಹುದು‌ ಎಂದು ತಿಳಿಸಿದರು.

ಈ ವರೆಗೆ ಬಿಜೆಪಿಯನ್ನು ಬೈಯುತ್ತಿದ್ದ, ರಾಮಮಂದಿರದ ಬಗ್ಗೆ ಟೀಕಿಸುತ್ತಿದ್ದ ದೇವೇಗೌಡರು, ಈಗ ಆ ಪಕ್ಷವನ್ನೇ ಅಪ್ಪಿಕೊಳ್ಳುತ್ತಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಗೌಡರು ಎಷ್ಟು ಸೀಟು ಕೇಳಿದ್ದಾರೋ, ಇವರು ಎಷ್ಟು ಸೀಟು ಕೊಡುತ್ತಾರೋ ಗೊತ್ತಿಲ್ಲ ಎಂದರು.

ಬಾಕ್ಸ್‌;

ಅನುದಾನ ತಡೆಹಿಡಿಯುವಷ್ಟು ದ್ವೇಷ ರಾಜಕಾರಣ ಮಾಡುವವನೂ ನಾನಲ್ಲ. ಅಭಿವೃದ್ಧಿ ವಿಷಯದಲ್ಲಿ ಯಾವತ್ತೂ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಶೆಟ್ಟರ್‌, ಹೊಸ ಸರ್ಕಾರ ಬಂದಿದೆ. ತಾಕತ್ತು ಇದ್ದರೆ ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಅಭಿವೃದ್ಧಿ ಕೆಲಸವನ್ನು ಮಾಡಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿಗೆ ಟಾಂಗ್‌ ನೀಡಿದರು.

ಅನುದಾನ ತರುವ ತಾಕತ್‌ ಇಲ್ಲದೇ ಟೆಂಗಿನಕಾಯಿ, ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಯಾರೇ ಕೆಮ್ಮಿದರೂ ಅದಕ್ಕೆ ನಾನೇ ಕಾರಣನಾ? ಇದು ಚಿಲ್ಲರೆ ರಾಜಕಾರಣ ಎಂದರು.

ಟೆಂಗಿನಕಾಯಿಗೆ ರೆಡಿಮೇಡ್‌ ಕ್ಷೇತ್ರ ಸಿಕ್ಕಿದೆ. ಈಗಾಗಲೇ ಸಾಕಷ್ಟು ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಪಡಿಸಿದ್ದೇನೆ. ಇನ್ನೂ ಏನೇನು ಆಗಬೇಕು ಆ ಕೆಲಸ ಮಾಡುತ್ತೇನೆ. ಇದು ನನ್ನ ಪ್ರೀತಿಯ ಕ್ಷೇತ್ರ ಎಂದರು.

ಅವರಿಗೆ ನಾನು ಮಾಡಿದ ಅಭಿವೃದ್ಧಿ ಬಗ್ಗೆ ಹೇಳುವ ಸೌಜನ್ಯ ಇಲ್ಲ. ಕ್ಷೇತ್ರಕ್ಕೆ ಮಂಜೂರಾದ ಅನುದಾನ ನಿಲ್ಲಿಸುವ ಪ್ರವೃತ್ತಿ ನನ್ನದ್ದಲ್ಲ. ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಕಾಮಗಾರಿ ನಿಂತಿರಬಹುದಷ್ಟೇ ಎಂದರು.