ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳು ಮರು ವಿಂಗಡಣೆಯಾದರೆ ನಾನು ಲೋಕಸಭಾ ಅಭ್ಯರ್ಥಿಯಾಗುವೆ ಎಂದು ಮಧುಗಿರಿ ಶಾಸಕ ಕೆ.ಎನ್‌. ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳು ಮರು ವಿಂಗಡಣೆಯಾದರೆ ನಾನು ಲೋಕಸಭಾ ಅಭ್ಯರ್ಥಿಯಾಗುವೆ ಎಂದು ಮಧುಗಿರಿ ಶಾಸಕ ಕೆ.ಎನ್‌. ರಾಜಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಧಾರವಾಡ ಜಿಲ್ಲೆ ದೊಡ್ಡದಾಗಿತ್ತು. ಆಗ ಅದನ್ನು ಒಡೆದು ಹಾವೇರಿ ಹಾಗೂ ಗದಗ ಜಿಲ್ಲೆ ಮಾಡಿದರು. ಅದೇ ರೀತಿ ತುಮಕೂರು ಸಹ ದೊಡ್ಡ ಜಿಲ್ಲೆಯಾಗಿದ್ದು ಮಧುಗಿರಿ ಹಾಗೂ ತಿಪಟೂರು ಜಿಲ್ಲೆಗಳಾಗಬೇಕಿದೆ. ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ಸೇರಿ ಲೋಕಸಭಾ ಕ್ಷೇತ್ರ ವಿಂಗಡಣೆ ಆದರೆ ನಾನು ಲೋಕಸಭಾ ಅಭ್ಯರ್ಥಿಯಾಗುವುದು ಖಚಿತ ಎಂದರು.

ನಾಗೇಂದ್ರ ರಾಜೀನಾಮೆ ಕುರಿತು ಮಾತನಾಡಿದ ಅವರು, ಅದು ಈ ಮುಗಿದ ಅಧ್ಯಾಯ. ಹೈಕಮಾಂಡ್‌ ಮೊದಲೇ ವಿಚಾರ ಮಾಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎನ್ನುವುದು ನನ್ನ ಅನಿಸಿಕೆ. ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಮಾತ್ರವೇ ಹೋರಾಡುತ್ತಿದ್ದು ಎಸ್ಟಿ ಸಮುದಾಯದ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪಾದಯಾತ್ರೆ ರಾಜಕೀಯ ಗಿಮಿಕ್‌ ಅಷ್ಟೇ ಎಂದರು.

ರಾಜ್ಯದಲ್ಲಿ ಬಹುತೇಕ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದರೂ ಕೂಡ ಸರ್ಕಾರದ ಆರ್ಥಿಕ ಪರಿಸ್ಥಿತಿಯಲ್ಲಿ ಸಾಲ ಮನ್ನಾ ಅಸಾಧ್ಯವಾಗಿದೆ. ರೈತರ ಹಿತ ದೃಷ್ಟಿಯಿಂದ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. 2028ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನಮ್ಮ ಪಕ್ಷ ಖಂಡಿತ ಸಾಲ ಮನ್ನಾ ಮಾಡುತ್ತದೆ ಎಂದರು.

ಇನ್ನೂ ಬರ ಪೀಡಿತ ತಾಲೂಕುಗಳನ್ನು ಆರಂಭಗೊಳ್ಳಲಿರುವ ಗೋ ಶಾಲೆಗಳಲ್ಲಿ ಗೋವುಗಳ ರಕ್ಷಣೆಯಲ್ಲಿ ತೊಡಗಿಕೊಳ್ಳುವ ಗೋಪಾಲಕರಿಗೆ ಜಿಲ್ಲಾ ಸಹಕಾರಿ ಕೇಂದ್ರದ ಬ್ಯಾಂಕ್ ಮೂಲಕ ಸ್ಥಳೀಯ ಸಹಕಾರಿ ಕೇಂದ್ರಗಳ ಮೂಲಕ ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು. ಇದರ ಖರ್ಚು ವೆಚ್ಚಗಳನ್ನು ನಿಯಮಸಾರ ಡಿಸಿಸಿ ಬ್ಯಾಂಕ್ ವಿತರಣೆ ಮಾಡಲಿದೆ ಎಂದು ಘೋಷಣೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಗ್ಯಾರಂಟಿ ಯೋಜನೆಯ ಸಮಿತಿಯ ತಾಲೂಕ ಅಧ್ಯಕ್ಷ ಸಿಡಿ ಚಂದ್ರಶೇಖರ್ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸಿಂಗದಳ್ಳಿ ರಾಜಕುಮಾರ್ ಉಪಸ್ಥಿತರಿದ್ದರು.