ಕ್ಷೇತ್ರದ ಸಮಸ್ಯೆ ನಿವಾರಿಸುವಲ್ಲಿ ಯಶಸ್ಸು ಕಾಣುತ್ತೇನೆ: ನಯನಾ ಮೋಟಮ್ಮ

| Published : Feb 09 2024, 01:53 AM IST

ಕ್ಷೇತ್ರದ ಸಮಸ್ಯೆ ನಿವಾರಿಸುವಲ್ಲಿ ಯಶಸ್ಸು ಕಾಣುತ್ತೇನೆ: ನಯನಾ ಮೋಟಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ಮುಗಿಸುವ ಜತೆಗೆ ತನ್ನ ಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ ಯಶಸ್ಸು ಕೂಡ ಕಾಣುತ್ತೇನೆಂದು ಶಾಸಕಿ ನಯನಾ ಮೋಟಮ್ಮ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ಮುಗಿಸುವ ಜತೆಗೆ ತನ್ನ ಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ ಯಶಸ್ಸು ಕೂಡ ಕಾಣುತ್ತೇನೆಂದು ಶಾಸಕಿ ನಯನಾ ಮೋಟಮ್ಮ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ 10-11ನೇ ಹಾಗೂ 8 ನೇವಾರ್ಡ್ನಲ್ಲಿ ನೂತನ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕಳೆದ 25 ವರ್ಷದ ಹಿಂದೆ ತನ್ನ ತಾಯಿ ಮೋಟಮ್ಮ ಪಟ್ಟಣದ ಜನತೆಗೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಸೌಲಭ್ಯ ಮಾಡಿಕೊಟ್ಟಿದ್ದರು. ಈಗ 19.5 ಕೋಟಿ ರು. ವೆಚ್ಚದಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣ, ಹೊಸ ಹೈಟೆಕ್ ಮೋಟಾರು, ಪೈಪ್‌ಗಳನ್ನು ಹಾಕಿ ಮುಂದಿನ 25 ವರ್ಷವರೆಗೆ ಸಮಸ್ಯೆ ಬಾರದಂತೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ ಈಗಾಗಲೇ ಪಟ್ಟಣದವರೆಗೆ ಕುಡಿಯುವ ನೀರಿನ ಎಕ್ಸ್ಪ್ರೆಸ್ ಲೈನ್ ಬಂದಿದ್ದು, ಇನ್ನು 300 ಮೀಟರ್ ಪೈಪ್‌ಲೈನ್ ಕಾಮಗಾರಿ ಬಾಕಿ ಉಳಿದಿದೆ. ಅದಕ್ಕೆ ಟೆಂಡರ್ ಕೂಡ ನಡೆದಿದೆ. ಇವೆಲ್ಲಾ ಕಾರ್ಯ ಮುಗಿದರೆ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಯಾಗುತ್ತದೆ. ಅಲ್ಲದೇ ತಾಲೂಕಿಗೆ ಈಗಾಗಲೆ ಲೆಕ್ಯಾ ಡ್ಯಾಮ್‌ನಿಂದ ನೀರು ಪೂರೈಕೆ ಮಾಡುವ ಪ್ರಕ್ರಿಯೆ ಕೂಡ ನಡೆಯುತ್ತಿದ್ದು, ಆ ಕೆಲಸ ಪೂರ್ಣಗೊಂಡರೆ ತಾಲೂಕಿನ ಜನತೆಗೆ ಕೂಡ ಕುಡಿಯುವ ನೀರು ಪೂರೈಕೆಯಾಗುತ್ತದೆ ಎಂದು ಹೇಳಿದರು.

ಪಟ್ಟಣದಲ್ಲಿ 2002 ದಿಂದ ಇಲ್ಲಿಯವರೆಗೂ ಡಾಂಬಾರು ಕಾಣದ 10-11 ಹಾಗೂ 8ನೇ ವಾರ್ಡ್ನಲ್ಲಿ 25 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿದ್ದು, ಕಾಮಗಾರಿ ಶೀಘ್ರವಾಗಿ ಪ್ರಾರಂಭಗೊಳ್ಳಲಿದೆ. ನಗರೋತ್ಥಾನ ಯೋಜನೆ ಯಲ್ಲಿ ಬಿಡುಗಡೆಯಾದ 3.5 ಕೋಟಿ ಅನುದಾನದಲ್ಲಿ ಪಟ್ಟಣದಲ್ಲಿ ಬಾಕಿ ಉಳಿದಿರುವ ಬಹುತೇಕ ಕಾಮಗಾರಿಗಳಿಗೆ ಮುಕ್ತಿ ದೊರಕಲಿದೆ. ಮುಂದಿನ ದಿನದಲ್ಲಿ ಯುಜಿಡಿ ಕಾಮಗಾರಿ ಕೂಡ ನಡೆಯಲಿದೆ. ಅಲ್ಲದೇ ಚಿಕ್ಕಮಗಳೂರು ಮೂಗ್ತಿಹಳ್ಳಿಯಿಂದ ಹ್ಯಾಂಡ್‌ಪೋಸ್ಟ್ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ. ಸಧ್ಯದಲ್ಲೇ ಜನಸಂಪರ್ಕ ನಡೆಸಿ ಪಟ್ಟಣದ ನಿವಾಸಿಗಳ ಅಭಿಪ್ರಾಯ ಪಡೆದು ಎಂಜಿ ರಸ್ತೆ ಅಗಲೀಕರಣಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಪ.ಪಂ. ಸದಸ್ಯರಾದ ವೆಂಕಟೇಶ್, ಎಚ್.ಪಿ.ರಮೇಶ್, ಹಂಜಾ, ಮುಖ್ಯಾಧಿಕಾರಿ ರಂಗಸ್ವಾಮಿ, ಮುಖಂಡರಾದ ದೀಕ್ಷಿತ್, ಸಿ.ಬಿ.ಶಂಕರ್, ಸುರೇಂದ್ರ, ಹರೀಶ್ ಮತ್ತಿತರರಿದ್ದರು.