ನಿಮ್ಮೆಲ್ಲರ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರುವೆ: ಸಚಿವ ಚಲುವರಾಯಸ್ವಾಮಿ

| Published : Jun 07 2025, 12:15 AM IST

ನಿಮ್ಮೆಲ್ಲರ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರುವೆ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗ ಸೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಯನ್ನು ರೂಪಿಸಿದೆ. ಬಲವಂತವಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವುದಿಲ್ಲ. ಅದಕ್ಕಾಗಿಯೇ ರೈತ ಮುಖಂಡರ ಸಭೆ ಕರೆದು ನಿಮ್ಮ ಅಭಿಪ್ರಾಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಮ್ಯೂಸ್‌ಮೆಂಟ್‌ ಪಾರ್ಕ್‌, ಕಾವೇರಿ ಆರತಿ ಯೋಜನೆಗೆ ಸಂಬಂಧಿಸಿದಂತೆ ರೈತ ಪ್ರತಿನಿಧಿಗಳು ಸಭೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಈ ವಿಷಯವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಜಿಪಂನ ಕಾವೇರಿ ಸಭಾಂಗಣದಲ್ಲಿ ನಡೆದ ರೈತ ಪ್ರತಿನಿಧಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗ ಸೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಯನ್ನು ರೂಪಿಸಿದೆ. ಬಲವಂತವಾಗಿ ಯಾವುದೇ ಯೋಜನೆಗಳನ್ನು ಜಾರಿಗೊಳಿಸುವುದಿಲ್ಲ. ಅದಕ್ಕಾಗಿಯೇ ರೈತ ಮುಖಂಡರ ಸಭೆ ಕರೆದು ನಿಮ್ಮ ಅಭಿಪ್ರಾಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ ಎಂದರು.

ನೀವು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿರುವುದಾಗಿ ತಿಳಿಸಿದ್ದೀರಿ. ನೀವು ಅದರಿಂದ ಹೊರಬಂದು ಸರ್ಕಾರದೊಂದಿಗೆ ಚರ್ಚಿಸಬಹುದು. ನಮಗಿಂತಲೂ ನಿಮ್ಮ ಬಳಿ ಉತ್ತಮ ಸಲಹೆಗಳಿದ್ದರೆ ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸೋಣ. ಅನಾಹುತಗಳಿದ್ದರೆ ಯೋಜನೆಯನ್ನು ನಿಲ್ಲಿಸೋಣ. ಒಮ್ಮೆ ಮಾರ್ಪಾಡುಗಳೊಂದಿಗೆ ಜಾರಿಗೊಳಿಸಬಹುದಾದರೆ ಅನುಷ್ಠಾನಕ್ಕೆ ತರೋಣ ಎಂದರು.

ಶಾಸಕ ಪಿ.ರವಿಕುಮಾರ್‌ ಆಡಿರುವ ಮಾತುಗಳಿಗೆ ಪ್ರತಿಕ್ರಿಯಿಸಿ, ಒಬ್ಬ ಜನಪ್ರತಿನಿಧಿಯಾಗಿ ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ. ಅದನ್ನು ವಿರೋಧಿಸುವ ಸ್ವಾತಂತ್ರ್ಯ ನಿಮಗೂ ಇದೆ. ಆದರೆ, ಸರ್ಕಾರ ಇಬ್ಬರ ಅಭಿಪ್ರಾಯಗಳನ್ನೂ ಆಲಿಸಿ ಸರ್ವಸಮ್ಮತವಾದ ತೀರ್ಮಾನ ಮಾಡುತ್ತದೆ ಎಂದರು.

ಸರ್ಕಾರಕ್ಕೆ ಅನೇಕ ಜವಾಬ್ದಾರಿಗಳಿವೆ. ಬಹಿರಂಗ ಸಭೆ ಕರೆದಿದ್ದರೆ ಹತ್ತು ದಿನ ಮುಂಚಿತವಾಗಿ ರೈತರಿಗೆ ತಿಳಿಸಬೇಕಿತ್ತು. ಇದು ರೈಮುಖಂಡರೊಂದಿಗೆ ನಡೆಸುತ್ತಿರುವ ಸಭೆಯಾಗಿದ್ದರಿಂದ ನೀವೂ ಸಹ ಹೊಂದಾಣಿಕೆಯಿಂದ ಹೋಗಬೇಕು. ಜನಹಿತ ನಿಮಗೂ ಇದೆ. ನಮಗೂ ಇದೆ. ಹಾಗಾಗಿ ಸಹಕಾರ ಮನೋಭಾವದಿಂದ ಎಲ್ಲರೂ ಮುನ್ನಡೆಯಬೇಕು ಎಂದರು.

ಸಭೆಯಲ್ಲಿ ಉಪಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ಕೆ.ಜಯಪ್ರಕಾಶ್‌, ಜಿಲ್ಲಾಧಿಕಾರಿ ಡಾ.ಕೆ.ಕುಮಾರ, ಜಿಪಂ ಸಿಇಓ ಕೆ.ಆರ್‌.ನಂದಿನಿ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಶಾಸಕರಾದ ದರ್ಶನ್‌ ಪುಟ್ಟಣ್ಣಯ್ಯ, ರಮೇಶ್‌ ಬಂಡಿಸಿದ್ದೇಗೌಡ, ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಇದ್ದರು.