ಸಾರಾಂಶ
ಕೊಪ್ಪಳ:
ಗಾಲಿ ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆಯಲ್ಲಿ ಜೈಲು ಸೇರಿ, ತೆರವಾಗಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾನೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲಿನ ಪೈಪೋಟಿಗೆ ತೆರೆ ಎಳೆದಿದ್ದಾರೆ.ಈ ಕುರಿತು ತಮ್ಮ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ವಾಟ್ಸ್‌ಆ್ಯಪ್ ಸಂದೇಶ ರವಾನಿಸಿರುವ ಅವರು, ಗಂಗಾವತಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವರ ಹೆಸರು ಮುಂಚೂಣಿಗೆ ಬರುತ್ತಿದ್ದಂತೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎನ್ನುವ ವದಂತಿಗೂ ಸಂದೇಶದ ಮೂಲಕ ಬ್ರೇಕ್ ಹಾಕಲು ಪ್ರಯತ್ನಿಸಿದ್ದಾರೆ.
ನಾನು ಎರಡ್ಮೂರು ದಿನಗಳಲ್ಲಿ ಗಂಗಾವತಿಗೆ ಬಂದು ನಿಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ ಎಂದಿರುವ ಅನ್ಸಾರಿ, ಕ್ಷೇತ್ರದ ಕುರಿತು ಈ ಹಿಂದೆಯೇ ನಾನು ಹೇಳಿದ್ದೆ. ಈಗ ಅದೇ ಆಗಿದೆ. ಅದು ಏನೇ ಇರಲಿ. ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನೀವೆಲ್ಲರೂ ನನ್ನ ಪರವಾಗಿ ಮನೆ-ಮನೆಗೆ ಹೋಗಿ, ತಿಳಿ ಹೇಳಿ ಎಂದು ಮನವಿ ಮಾಡಿದ್ದಾರೆ.ನಾನು ಸೋತರು ಸಹ, ನನ್ನನ್ನು ಸೋಲಿಸಿದರು ಸಹ, ನಮ್ಮ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಗೆಲುವಿಗಾಗಿ ಕಾರ್ಯಕರ್ತರ ಪಡೆ ಕಟ್ಟಿಕೊಂಡು, ಗೆಲ್ಲಿಸುವ ಕೆಲಸ ಮಾಡಿದ್ದೇನೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 16 ಸಾವಿರ ಮತಗಳ ಲೀಡ್ ಕೊಟ್ಟಿದ್ದೇವೆ. ಹೀಗಾಗಿ, ಹಿಟ್ನಾಳ ಕುಟುಂಬ ಸೇರಿದಂತೆ ಎಲ್ಲರೂ ಸೇರಿ ನನ್ನ ಗೆಲುವಿಗೆ ಶ್ರಮಿಸುತ್ತಾರೆ ಎನ್ನುವ ವಿಶ್ವಾಸವಿದೆ. ನನ್ನ ಮುಸ್ಲಿಂ ಬಾಂಧವರು, ನನ್ನ ಸ್ನೇಹಿತರು ಸಹ ನನಗೆ ಬೆಂಬಲಿಸುತ್ತಾರೆ ಎಂದು ಭಾವಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರ ಆದೇಶದ ಮೇರೆಗೆ ಎಲ್ಲರೂ ಬಂದು ನನ್ನ ಗೆಲುವಿಗೆ ಶ್ರಮಿಸುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ, ಈ ನಡುವೆ ಕೆಲವೊಂದು ವದಂತಿಗಳು ಹರಡುತ್ತಿದ್ದು, ಅವುಗಳಿಗೆ ರೆಕ್ಕೆಯೂ ಇಲ್ಲ, ಪುಕ್ಕವೂ ಇಲ್ಲ. ಹೀಗಾಗಿ, ಈ ಮಾತಿಗೆ ಯಾರು ಸಹ ತಲೆಕೆಡೆಸಿಕೊಳ್ಳಬಾರದು ಎಂದಿದ್ದಾರೆ.