ಹಿಂದೆ ಆರ್ಥಿಕ ಸಂಕಷ್ಟ ಹಾಗೂ ಸುಸ್ತಿ ಸಾಲದಿಂದ ಬಳಲುತ್ತಿದ್ದ ವೀರೇಗೌಡನದೊಡ್ಡಿ ವ್ಯವಸಾಯ ಸೇವಾ ಸಹಕಾರ ಸಂಘವು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಈವರೆಗೆ ರೈತರಿಗೆ ₹೬.೭೫ ಕೋಟಿ ಸಾಲ ವಿತರಿಸಲಾಗಿದ್ದು, ಪ್ರಸ್ತುತ ಹೆಚ್ಚುವರಿಯಾಗಿ ₹೧ ಕೋಟಿ ಸಾಲಕ್ಕೆ ಅನುಮೋದನೆ ದೊರೆತಿದೆ. ಒಟ್ಟಾರೆ ₹೭.೭೫ ಕೋಟಿ ಕೃಷಿ ಸಾಲವನ್ನು ರೈತರಿಗೆ ಒದಗಿಸುವ ಮೂಲಕ ಸಂಘದ ಶಕ್ತಿಯನ್ನು ಸಾಬೀತುಪಡಿಸಿದ್ದೇವೆ .

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನ ವೀರೇಗೌಡನದೊಡ್ಡಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರವಿಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ವೀರೇಗೌಡನದೊಡ್ಡಿ ವಿಎಸ್‌ಎಸ್‌ಎನ್‌ಗೆ ಅಧ್ಯಕ್ಷರಾಗಿದ್ದ ಲೋಕೇಶ್ ಅವರು ರಾಜೀನಾಮೆ ನೀಡಿದ್ದು, ಇಂದು ಅಧ್ಯಕ್ಷರ ಆಯ್ಕೆ ಚುನಾವನೆ ನಿಗದಿಯಾಗಿದ್ದು, ರವಿಕುಮಾರ್ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ರವಿಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಮಹೇಶ್ ಘೋಷಿಸಿದರು.

ನೂತನ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸಂಘದ ನಿರ್ದೇಶಕರು ಒಗ್ಗಟ್ಟಿನಿಂದ ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಈ ಜವಾಬ್ದಾರಿಯನ್ನು ಹುದ್ದೆ ಎಂದು ಭಾವಿಸದೆ ಸೇವೆಯ ಅವಕಾಶವೆಂದು ಪರಿಗಣಿಸಿ ಕಾರ್ಯನಿರ್ವಹಿಸುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ರವಿಕುಮಾರ್ ತಿಳಿಸಿದರು.

ಸಹಕಾರ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಮಹತ್ವದ ಅವಕಾಶ ಇಲ್ಲಿದೆ. ಈ ನಿಟ್ಟಿನಲ್ಲಿ ಸಂಘದ ಮೂಲಕ ರೈತರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಂಘದ ಅಭಿವೃದ್ಧಿ ಹಾಗೂ ರೈತರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಪ್ರಸ್ತುತ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಈ ಹಿಂದೆ ಸಂಘದ ಅಭಿವೃದ್ಧಿಗೆ ಶ್ರಮಿಸಿರುವ ಹಿರಿಯರ ಪ್ರಯತ್ನಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಇದೀಗ ಕಟ್ಟಡ ನಿರ್ಮಾಣಕ್ಕೆ ಅವಕಾಶ ದೊರೆತಿದ್ದು, ಅದನ್ನು ಸಮರ್ಪಕವಾಗಿ ಸಾಕಾರಗೊಳಿಸಿ ಸಂಘಕ್ಕೆ ಉತ್ತಮ ಕಟ್ಟಡ ನಿರ್ಮಿಸುವ ಸಂಕಲ್ಪ ಹೊಂದಿದ್ದೇವೆ. ಕಟ್ಟಡ ನಿರ್ಮಾಣದ ಜೊತೆಗೆ ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದರು.

ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿರುವ ಬಾಲಕೃಷ್ಣ ಸೇರಿದಂತೆ ಸಂಘದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಮಾಜಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಹಿಂದೆ ಆರ್ಥಿಕ ಸಂಕಷ್ಟ ಹಾಗೂ ಸುಸ್ತಿ ಸಾಲದಿಂದ ಬಳಲುತ್ತಿದ್ದ ವೀರೇಗೌಡನದೊಡ್ಡಿ ವ್ಯವಸಾಯ ಸೇವಾ ಸಹಕಾರ ಸಂಘವು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಈವರೆಗೆ ರೈತರಿಗೆ ₹೬.೭೫ ಕೋಟಿ ಸಾಲ ವಿತರಿಸಲಾಗಿದ್ದು, ಪ್ರಸ್ತುತ ಹೆಚ್ಚುವರಿಯಾಗಿ ₹೧ ಕೋಟಿ ಸಾಲಕ್ಕೆ ಅನುಮೋದನೆ ದೊರೆತಿದೆ. ಒಟ್ಟಾರೆ ₹೭.೭೫ ಕೋಟಿ ಕೃಷಿ ಸಾಲವನ್ನು ರೈತರಿಗೆ ಒದಗಿಸುವ ಮೂಲಕ ಸಂಘದ ಶಕ್ತಿಯನ್ನು ಸಾಬೀತುಪಡಿಸಿದ್ದೇವೆ ಎಂದರು.

ಜುಟ್ಟನಹಳ್ಳಿ ವಿಎಸ್‌ಎಸ್‌ಎನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಜೆ.ಪಿ. ಚಂದ್ರೇಗೌಡ, ನಿರ್ದೇಶಕರಾದ ಶಿವಣ್ಣ, ಕೃಷ್ಣಪ್ಪ, ನರಸಿಂಹಮೂರ್ತಿ, ವಿ.ಎಸ್.ಉಮೇಶ್, ಜಯರಾಮ, ಪುಟ್ಟತಾಯಮ್ಮ, ಗಂಗಮ್ಮ, ವೆಂಕಟೇಶ್, ನಾಗರಾಜ್, ಮುಖಂಡರಾದ ವಿ.ಆರ್.ಪರಶಿವಮೂರ್ತಿ, ಜಯಣ್ಣ, ಪ್ರಕಾಶ್, ಲೋಕೇಶ್, ನಾಗೇಶ್, ಮಹೇಶ್, ಪ್ಯಾರೇಜಾನ್, ನರಸಿಂಹಮೂರ್ತಿ, ಕೃಷ್ಣ, ಸುನೀಲ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.