ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನಲ್ಲಿ ಬಿಜೆಪಿ ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ತಳ ಮಟ್ಟದಿಂದ ಪಕ್ಷ ಸಂಘಟಿಸಿ ಮುಂಬರುವ ಸ್ಥಳೀಯ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವುದಾಗಿ ಮಧುಗಿರಿ ಬಿಜೆಪಿ ಮಂಡಲದ ನೂತನ ಅಧ್ಯಕ್ಷ ವಕೀಲ ಹನುಮಂತರೆಡ್ಡಿ ತಿಳಿಸಿದರು.ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಧಿಕಾರ ವಹಿಸಿ ಕೊಂಡು ಮಾತನಾಡಿದ ಅವರು, ಎಲ್ಲ ಪಕ್ಷದಲ್ಲೂ ಭಿನ್ನಮತ ಸಹಜವಾಗಿದ್ದು, ನಮ್ಮ ಪಕ್ಷದಲ್ಲಿನ ಅಸಮಧಾನಿತರು ಬಿಜೆಪಿ ಪಕ್ಷ ಕಟ್ಟುವಲ್ಲಿ ಶ್ರಮ ವಹಿಸಿದ್ದು, ಪಕ್ಷಕ್ಕೆ ಅವರ ಸೇವೆ ಅನನ್ಯ. ಹಾಗಾಗಿ ಅವರ ಮನೆಗಳಿಗೆ ತೆರಳಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ತಾಲೂಕಿನಲ್ಲಿ ಸದೃಡವಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಅಧ್ಯಕ್ಷ ಸ್ಥಾನ ಮುಳ್ಳಿನ ಹಾದಿ ಎಂಬುದು ನನಗೆ ತಿಳಿದಿದೆ. ಆದರೂ ಪಕ್ಷದ ಒಳಿತಿಗೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗಬೇಕಿದೆ. ನಾನು ಸಹ ಜಿಲ್ಲಾ ಕಾನೂನು ಪ್ರಕೋಷ್ಠದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ನನ್ನನ್ನು ಗುರುತಿಸಿ ಮಧುಗಿರಿ ಮಂಡಲದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ನಿಕಟಪೂರ್ವ ಅಧ್ಯಕ್ಷ ನಾಗೇಂದ್ರ ಮಾತನಾಡಿ, ನಾನು ಅಧ್ಯಕ್ಷನಾದ ಬಳಿಕ ಸಂಸತ್, ಅಸೆಂಬ್ಲಿ ಚುನಾವಣೆಗಳು ನಡೆದಿದ್ದು ಪಕ್ಷವನ್ನು ಎಲ್ಲರ ಸಹಕಾರದಿಂದ ಕಟ್ಟಿ ಬೆಳಸಿದ್ದೇವೆ. ಈಗಿನ ನೂತನ ಅಧ್ಯಕ್ಷರೂ ಸಹ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟಲು ಮುಂದಾಗಬೇಕು ಎಂದರು.ಈ ವೇಳೆ ಮಾಜಿ ಅಧ್ಯಕ್ಷ ಕೆ.ಎಸ್.ಪಾಂಡುರಂಗಾರೆಡ್ಡಿ, ಜಿಲ್ಲಾ ಮಹಿಳಾಧ್ಯಕ್ಷೆ ಲತಾ ಪ್ರದೀಪ್, ಜಿಲ್ಲಾ ರೈತ ಮೋರ್ಚ ಅಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಮೋಹನ್, ಸುರೇಶ್,ಶಿವಕುಮಾರ್, ಶಿವಶಂಕರ್, ರಾಜಣ್ಣ ಸೇರಿದಂತೆ ಕಾರ್ಯಕರ್ತರು ಇದ್ದರು.