ಸಂಸ್ಕೃತ ಶಿಕ್ಷಕರಿಗಾಗಿ ನನ್ನ ಪ್ರಾಣ ನೀಡುವೆ

| Published : Sep 08 2025, 01:00 AM IST

ಸಾರಾಂಶ

ರಾಜ್ಯ ಸರ್ಕಾರ ಮತ್ತು ಎಡಪಂತೀಯರು ಸಂಸ್ಕೃತ ಶಿಕ್ಷಕರನ್ನು ಉಗ್ರಗಾಮಿಗಳಂತೆ ನೋಡುತ್ತಿದ್ದು ಅವರ ರಕ್ಷಣೆಗಾಗಿ ಪ್ರಾಣ ನೀಡುತ್ತೇನೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಎಲೆರಾಂಪುರ ಕುಂಚಟಿಗ ಮಹಾಸಂಸ್ಥಾನ ಪೀಠದ ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ರಾಜ್ಯ ಸರ್ಕಾರ ಮತ್ತು ಎಡಪಂತೀಯರು ಸಂಸ್ಕೃತ ಶಿಕ್ಷಕರನ್ನು ಉಗ್ರಗಾಮಿಗಳಂತೆ ನೋಡುತ್ತಿದ್ದು ಅವರ ರಕ್ಷಣೆಗಾಗಿ ಪ್ರಾಣ ನೀಡುತ್ತೇನೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಎಲೆರಾಂಪುರ ಕುಂಚಟಿಗ ಮಹಾಸಂಸ್ಥಾನ ಪೀಠದ ಹನುಮಂತನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಶ್ರೀ ಕ್ಷೇತ್ರ ಯಡಿಯೂರು ದೇವಾಲಯದ ಆವರಣದಲ್ಲಿ ತುಮಕೂರು ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘ, ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ವೇದ ಜ್ಯೋತಿಷ್ಯ ಮತ್ತು ವೀರಶೈವಾಗಮ ಪಾಠಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು

ಕರ್ನಾಟಕ ರಾಜ್ಯದಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದಂತೆ 2010ರ ಸಮಯದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಪ್ರಾರಂಭ ಆಗಿದೆ ಆದರೆ ರಾಜ್ಯ ಸರ್ಕಾರ ಸಂಸ್ಕೃತ ಶಿಕ್ಷಕರು ಎಂದರೆ ಮಲತಾಯಿ ಧೋರಣೆ ಅನುಸರಿಸಿರುವುದು ಸರಿಯಲ್ಲ. ನನಗೆ ಹಲವಾರು ಸಂಸದರು ಶಾಸಕರು ಸಚಿವರು ಪರಿಚಯ ಇದೆ. ನಾನು ಯಾರ ಮನೆ ಬಾಗಿಲಿಗೂ ಕೂಡ ಸಹಾಯಕ್ಕಾಗಿ ಹೋಗಿಲ್ಲ ಮುಂದಿನ ದಿನಗಳಲ್ಲಿ ಸಂಸ್ಕೃತ ಶಿಕ್ಷಕರಿಗಾಗಿ ಭವಿಷ್ಯ ರೂಪಿಸುವ ಉದ್ದೇಶದಿಂದ ನನ್ನ ಪ್ರಾಣ ಬೇಕಾದರೂ ನೀಡಲು ಸಿದ್ದರಿದ್ದೇನೆ ಎಂದರು. ಸಂಸ್ಕೃತ ಶಿಕ್ಷಕರು ತಮ್ಮ ಮಕ್ಕಳಿಗೆ ಹಾಗೂ ಅಕ್ಕಪಕ್ಕದ ಸ್ನೇಹಿತರಿಗೆ ಸಂಸ್ಕೃತ ಕಲಿಸುವ ಕೆಲಸ ಮಾಡಬೇಕು ಮುಸಲ್ಮಾನರು ಸೇರಿದಂತೆ ಬೇರೆಯವರು ಕೂಡ ಸಂಸ್ಕೃತ ಕಲಿತು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಆದರೆ ಇದೇ ಧರ್ಮದಲ್ಲಿ ಹುಟ್ಟಿರುವ ಬಹುತೇಕ ಮಂದಿ ಸಂಸ್ಕೃತವನ್ನು ಸಂಸ್ಕೃತ ಭಾಷಿಗರನ್ನು ಉಗ್ರಗಾಮಿಗಳಂತೆ ನೋಡುತ್ತಿರುವುದು ಖಂಡನೀಯ ಎಂದರು.

ಪ್ರತಿ ಬಾರಿಯೂ ಸಂಸ್ಕೃತ ಶಿಕ್ಷಕರ ಪರವಾಗಿ ಸರ್ಕಾರದ ಮುಂದೆ ರೋಧಿಸಬೇಕಾದ ಅನಿವಾರ್ಯತೆ ಉಂಟಾಗಿದೆ ಮುಂದಿನ ದಿನಗಳಲ್ಲಿ ಇದಕ್ಕಾಗಿ ಒಂದು ಹೋರಾಟ ರೂಪಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳೋಣ ಎಂದರು. ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಪ್ರೊಫೆಸರ್ ಪಾಲಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂಜಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷ ಎಚ್ ಪಿ ಗಂಗಾಧರಯ್ಯ , ತುಮಕೂರು ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಜಿ ವೆಂಕಟಪ್ಪ, ಕರ್ನಾಟಕ ರಾಜ್ಯ ಸಂಸ್ಕೃತ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಪರಶಿವಮೂರ್ತಿ, ಉಪಾಧ್ಯಕ್ಷ ರಾಜಣ್ಣ, ವಿದ್ವಾನ್ ರಾಜಣ್ಣ ಜಗದೀಶ್ ಟಿ ಎಸ್ ಗಿರೀಶ್ ಓಎಸ್ ಕುಮಾರಸ್ವಾಮಿ, ಸಿದ್ದಗಂಗಾ ಮಠದ ವಿಶ್ವ ಪರಿವೀಕ್ಷಕರಾದ ಬಿ ಆರ್ ಗಂಗಾಧರ್ ಶಿಕ್ಷಕರ ಸಂಘದ ಎಚ್ ಪಿ ಶಿವರುದ್ರಪ್ಪ ಸೇರಿದಂತೆ ಹಲವಾರು ಸಂಸ್ಕೃತ ಶಿಕ್ಷಕರು ಭಾಗವಹಿಸಿದ್ದರು .