ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರುರೈತರು ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತನ್ನಿ ನಾನು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಂ.ಆರ್ ಮಂಜುನಾಥ್ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹಾಗೂ ರೈತ ಸಂಘಟನೆ ಸದಸ್ಯರ ನಡುವೆ ನಡೆದ ಮಾತಿನ ಚಕಮಕಿ ಹಿನ್ನಲೆ ವಿವರಣೆ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ ಸಂಘಟನೆಯ ಪದಾಧಿಕಾರಿಗಳು ಹನೂರು ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ರಸ್ತೆ ಸರಿಯಾಗಿಲ್ಲ, ಮೇಕೆ ದಾಟು ರಸ್ತೆ ವಿಚಾರದ ಜೊತೆಗೆ ಮುಖ್ಯವಾಗಿ ಉಡುತೊರೆ ಹಳ್ಳ ಹಾಗೂ ಕೀರೆಪಾತಿ ಜಲಾಶಯದಲ್ಲಿರುವ ಸಮಸ್ಯೆಗಳು ಸೇರಿದಂತೆ ಹನೂರು ಉದ್ದಗಲಕ್ಕೂ ಇರುವ ಜಲತ್ವ ಸಮಸ್ಯೆಗಳ ಕುರಿತು ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹಂತ-ಹಂತವಾಗಿ ಬಗೆಹರಿಸಲು ನಾನು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.ಈಗಾಗಲೇ ಜಲಾಶಯ ನಾಲೆಗಳಲ್ಲಿ ಹೂಳು ತೆಗೆಸಿದ್ದು ಆರ್‌ಟಿಸಿ ಸಂಬಂಧಪಟ್ಟಂತೆ ಸಾಕಷ್ಟು ಕೆಲಸ ಪ್ರಗತಿಯ ಹಂತದಲ್ಲಿದೆ ಜೊತೆಗೆ ನಾಲ್ ರೋಡ್ ಹಾಗೂ ಇನ್ನಿತರ ಕಡೆ ಹದಗೆಟ್ಟಿರುವ ರಸ್ತೆ ಸಹ ಆದಷ್ಟು ಬೇಗ ಡಾಂಬರೀಕರಣ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಜೊತೆಗೆ ನಿನ್ನೆ ಜನತಾದರ್ಶನದ ವೇಳೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ, ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಇನ್ನಿತರರು ಇದ್ದರು.