ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ಮಾರ್ಪಾಡು ಮಾಡಿಸುತ್ತೇನೆ: ಮಧು ಬಂಗಾರಪ್ಪ

| Published : Feb 22 2024, 01:49 AM IST / Updated: Feb 22 2024, 02:18 PM IST

ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ಮಾರ್ಪಾಡು ಮಾಡಿಸುತ್ತೇನೆ: ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು. ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ನಾನು ಮಾರ್ಪಾಡು ಮಾಡಿಸುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ 

ಶಾಲೆಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹೇಳಿದರೆ ಒಳ್ಳೆಯದು. ನಾಡಗೀತೆ ಕಡ್ಡಾಯವಲ್ಲ ಎಂದು ಮಾಡಿದ್ದರೆ ನಾನು ಮಾರ್ಪಾಡು ಮಾಡಿಸುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾಕೆ ಈ ನಿರ್ಧಾರ ಮಾಡಿದೆಯೋ ಗೊತ್ತಿಲ್ಲ. ಅದು ನನ್ನ ಇಲಾಖೆ ಅಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆ ಕಡ್ಡಾಯವಾಗಿದೆ. ಇದಕ್ಕೆ ಅವರೇ ಉತ್ತರ ನೀಡಬೇಕು ಎಂದರು.

ನನ್ನ ಇಲಾಖೆ ವತಿಯಿಂದ ಸಂವಿಧಾನದ ಪೀಠಿಕೆಯನ್ನು ಕಡ್ಡಾಯಗೊಳಿಸಿದ್ದೇನೆ. ಶಾಲೆ ಎಂದರೆ ಒಂದು ರೀತಿಯಲ್ಲಿ ಯೂನಿಫಾರ್ಮ್ ಇದ್ದಂತೆ. ಸಂವಿಧಾನ ಪೀಠಿಕೆ ಮಕ್ಕಳಿಗೆ ಈಗ ಬಾಯಿ ಪಾಠ ಆಗಿದೆ. 

ಜಾತ್ಯತೀತ ಪ್ರೀತಿಯನ್ನು ಮಕ್ಕಳಿಗೆ ಕೊಡಬೇಕಾಗುತ್ತದೆ. ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ಹೇಳದಿರಲು ಕಾರಣವೇನು ಎಂಬುದನ್ನು ನಾನು ಕೇಳುತ್ತೇನೆ. ಆದರೆ, ಹೇಳುವುದು ಒಳ್ಳೆಯದು ಎಂದು ನಾನು ಹೇಳುತ್ತೇನೆ. 

ಕುವೆಂಪು ಅವರದು ಜಾತ್ಯತೀತ ಭಾವನಾತ್ಮಕ ಹಾಗೂ ಪಕ್ಷಾತೀತ ಮನೋಭಾವ ಕುವೆಂಪು ಅವರ ಎಲ್ಲ ಗೀತೆಗಳು ನೇಚರ್‌ಗೆ ಕನೆಕ್ಟ್ ಆಗಿವೆ. ಪಠ್ಯ ಪುಸ್ತಕದಲ್ಲಿ ನಾಡಗೀತೆ ಇರುವುದರಿಂದ ಅದನ್ನು ಕಡ್ಡಾಯವಾಗಿ ಹಾಡಬೇಕಾಗಿಲ್ಲ ಎಂದು ಹೇಳಿರಬಹುದೆನೋ ಗೊತ್ತಿಲ್ಲ ಎಂದರು.

ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆ ಮಕ್ಕಳು ಎಂದು ಡಿವೈಡ್ ಮಾಡಲ್ಲ. ಮಕ್ಕಳೆಂದರೆ ಎಲ್ಲರೂ ಮಕ್ಕಳೇ, ಅವರೆಲ್ಲರಿಗೂ ಸಮಾನತೆ ಕೊಡಬೇಕು. ಈ ರೀತಿಯ ಕಡ್ಡಾಯವಲ್ಲ ಎಂಬ ಹೇಳಿಕೆ ಸರಿಯಲ್ಲ. ಆ ಇಲಾಖೆ ಜೊತೆ ಚರ್ಚೆ ಮಾಡಿ ನಾನು ವಿಷಯವನ್ನು ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.

 ಕೆಎಫ್‌ಡಿ ಸಾವಿಗೆ ಪರಿಹಾರಕ್ಕೆ ನಿಗಾಕೆಎಫ್‌ಡಿಯಿಂದ ಮೃತಪಟ್ಟವರಿಗೆ ಪರಿಹಾರ ಕೊಡಬೇಕು ಅಂತಾ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಕೆಎಫ್‌ಡಿಯಿಂದ ಮೃತಪಟ್ಟವರ ಮಾಹಿತಿ ಕೊಡಲು ಸೂಚಿಸಿದ್ದೇನೆ. ಪರಿಹಾರ ಕೊಡುವ ಬಗ್ಗೆ ಗಮನಹರಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಕೇರಳದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರ್ಕಾರ ಪರಿಹಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಸತ್ಯಸಾಯಿ ಬಾಬಾ ಆಸ್ಪತ್ರೆಗೆ ₹2 ಕೋಟಿ ಕೊಟ್ಟಿದ್ದರು. ಅದಕ್ಕೂ ವಿರೋಧ ಮಾಡಿದ್ದರು. ನಮ್ಮ ರಾಜ್ಯದ ರೋಗಿಗಳು ಆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ ಅಂದಿದ್ದರು. ಅದೇ ರೀತಿ ಆನೆ ತುಳಿದು ಮೃತಪಟ್ಟಿದ್ದಕ್ಕೆ ಪರಿಹಾರ ಕೊಟ್ಟಿದ್ದಾರೆ. ಬಿಜೆಪಿಯವರಿಗೆ ಯಾವುದೇ ಕೆಲಸ ಇಲ್ಲ. ಅದಕ್ಕೆ ಇಂತಹ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು.

"ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ " ಘೋಷವಾಕ್ಯ ಬದಲಾವಣೆ ಬಗ್ಗೆ ಸರ್ಕಾರ ಯಾವುದೇ ಆದೇಶ ಮಾಡಿರಲಿಲ್ಲ. ಯಾವುದೋ ವಾಟ್ಸಾಪ್‌ನಲ್ಲಿ ಬಂದ ಮೆಸೇಜ್‌ನಿಂದ ಗೊಂದಲ ಆಯ್ತು ಎಂದು ಪ್ರತಿಕ್ರಿಯಿಸಿದರು.