ಕೆಪಿಎಸ್‌ಸಿ ಹಗರಣವನ್ನು ಬಯಲಿಗೆಳೆಯದೆ ಬಿಡುವುದಿಲ್ಲ, ಪಲಾಯನ ಮಾಡುವುದಿಲ್ಲ, ಚರ್ಚೆಗೆ ಸಿದ್ಧವಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದರು.
ಕನ್ನಡಪ್ರಭ ವಾರ್ತೆ ತುಮಕೂರುಕೆಪಿಎಸ್‌ಸಿ ಹಗರಣವನ್ನು ಬಯಲಿಗೆಳೆಯದೆ ಬಿಡುವುದಿಲ್ಲ, ಪಲಾಯನ ಮಾಡುವುದಿಲ್ಲ, ಚರ್ಚೆಗೆ ಸಿದ್ಧವಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದರು.ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಚ್.ಡಿ.ಕುಮಾರಸ್ವಾಮಿ, ನಾನು ಕೇಳುತ್ತಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಕೊಡದೆ ಕೇವಲ ಎಕ್ಸ್ ವೇದಿಕೆಯಲ್ಲಿ ಮಾತನಾಡಿ ಜಾರಿಕೊಳ್ಳುತ್ತಿರುವುದು ಏಕೆ? ಮಾಧ್ಯಮದ ಎದುರು ಬರಲು ಧೈರ್ಯವಿಲ್ಲವೆ ಎಂದು ಪ್ರಶ್ನಿಸಿದರು.ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೆಪಿಎಸ್‌ಸಿ ಸಂಸ್ಥೆಯ ಪರೀಕ್ಷೆಗಳು ಹಾಗೂ ನೇಮಕಾತಿ ಅಕ್ರಮಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವಿರುದ್ಧ ಮಾಡಿರುವ ಟ್ವಿಟ್‌ಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಪ್ರಿಯಾಂಕ್ ಖರ್ಗೆ ಅವರು ಪ್ರತಿಯೊಂದು ವಿಷಯದಲ್ಲೂ ಟೀಕೆ ಮಾಡುತ್ತಾ, ತಾವೊಬ್ಬರೇ ಪಾರದರ್ಶಕ ಆಡಳಿತ ನಡೆಸುತ್ತಿರುವಂತೆ ಮಾತನಾಡುತ್ತಿದ್ದಾರೆ. ಉಳಿದವರೆಲ್ಲರೂ ತಪ್ಪು ಮಾಡಿದ್ದಾರೆ ಎಂಬ ರೀತಿಯಲ್ಲಿ ಪಾಠ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪ್ರಿಯಾಂಕ್ ಖರ್ಗೆ ಪಂಚಾಯತ್ ರಾಜ್ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಇಲಾಖೆಯಲ್ಲಿ 24 ಅಸಿಸ್ಟೆಂಟ್ ಎಂಜಿನಿಯರ್ ನೇಮಕಾತಿ ಅಕ್ರಮ ನಡೆದಿತ್ತು ಎಂದು ಆರೋಪಿಸಿದರು. ಕೆಪಿಎಸ್‌ಸಿಯಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು. ಅಧ್ಯಕ್ಷರ ಸಹಿ ಇಲ್ಲದೆ ಕಾರ್ಯದರ್ಶಿಯೊಬ್ಬರು ತರಾತುರಿಯಲ್ಲಿ ಅಂತಿಮ ಪಟ್ಟಿಯನ್ನು ಕಳುಹಿಸಿದ್ದರು. ಓಎಂಆರ್ ಶೀಟ್‌ಗಳಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆ ನಡೆದಿತ್ತು.ಈ ಬಗ್ಗೆ ದಾಖಲೆಗಳನ್ನು ದಿನಾಂಕವಾರು ಸಂಗ್ರಹಿಸಿ ಇಟ್ಟಿದ್ದೇನೆ ಎಂದು ಹೇಳಿದರು.ಅಕ್ರಮದ ಕುರಿತು ಕೆಪಿಎಸ್‌ಸಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಅದನ್ನು ತಿರಸ್ಕರಿಸಿ ನೇಮಕಾತಿ ಏಕೆ ನೀಡಲಾಯಿತು ಎಂಬ ನನ್ನ ಪ್ರಶ್ನೆಗೆ ಇದುವರೆಗೂ ಉತ್ತರ ನೀಡಿಲ್ಲ. ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲೂ ದೊಡ್ಡ ಮಟ್ಟದ ಹಗರಣ ನಡೆದಿದೆ. ಪರೀಕ್ಷಾ ನಿಯಂತ್ರಕರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಸ್ಥೆಯ ಕಾರ್ಯವೈಖರಿ ಕುರಿತು ಸಂಪೂರ್ಣ ಮಾಹಿತಿ ಹೊರಬರುತ್ತಿದೆ ಎಂದು ಹೇಳಿದರು. ಏನೋ ಸಾಧನೆ ಮಾಡಿದ್ದೇನೆ ಎನ್ನುವಂತೆ ಬೆಟ್ಟ ಅಗೆದು ಇಲಿ, ಹೆಗ್ಗಣ ರಿಲೀಸ್ ಮಾಡಿದ್ದಾರೆ. ನೀವು ಮಾಡಿದ್ದೆಲ್ಲಾ ಮೃಷ್ಟಾನ್ನ, ನಾವು ಮಾಡೋದೆಲ್ಲಾ ಚಿತ್ರಾನ್ನನಾ? ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿ ತಪ್ಪಿಸುವುದು ಹಾಗೂ ಸುಳ್ಳು ಹೇಳುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ನಾನು ಸಂಸತ್ತಿಗೆ ಹೋಗಿದ್ದರಿಂದ ಇಂತಹ ಒಳ್ಳೆಯ ಅವಕಾಶವನ್ನು ಕಳೆದುಕೊಂಡೆ. ವಿರೋಧ ಪಕ್ಷದಲ್ಲಿ ಕೆಲಸ ಮಾಡುವುದಕ್ಕಿಂತ ಉತ್ತಮವಾದ ಕೆಲಸ ಮತ್ತೊಂದಿಲ್ಲ. ಈಗ ವಾಪಸ್ ಬಂದರೆ ಜನ ಏನಂತಾರೆ? ಬರುವ ಸಂದರ್ಭ ಬಂದಾಗ ಬರುತ್ತೇನೆ ಎಂದರು.ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಜೆಡಿಎಸ್ ಅಧ್ಯಕ್ಷ ಎಚ್.ನಿಂಗಪ್ಪ, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮತ್ತಿತರರು ಹಾಜರಿದ್ದರು.