ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿನ ರಾಜಕಾರಣದಲ್ಲಿ 25 ವರ್ಷ ಅನುಭವವಿರುವ ರಾಜಕಾರಣಿ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.ತಾಲೂಕಿನ ಅಲಕಾಪುರ ಸೋಲಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಿ ಅಭೂತಪೂರ್ವ ಗೆಲವು ಸಾಧಿಸಿದ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ನೂತನ ನಿರ್ದೇಶಕರನ್ನು ಆತ್ಮೀಯವಾಗಿ ಅಭಿನಂದಿಸಿ ಮಾತನಾಡಿದರು.ತಾಲೂಕಿನಲ್ಲಿ ಕೆಎಚ್‌ಪಿ ಬಣ ಅಧಿಕಾರಕ್ಕೆ ಬಂದ ದಿನದಿಂದ ಸರ್ವ ಸಮುದಾಯದ ನಾಯಕರಿಗೆ ಹಲವು ರೀತಿಯ ಅಧಿಕಾರ, ಆಡಳಿತವನ್ನು ಪಾರದರ್ಶಕವಾಗಿ ಸಮಾನವಾಗಿ ನೀಡಲಾಗುತ್ತಿದೆ. ಎಲ್ಲಾ ಹಳ್ಳಿಗಳಲ್ಲಿರುವ ಮೂಲ ಸೌಕರ್ಯಗಳ ಕುಂದುಕೊರತೆಗಳನ್ನು ನೀಗಿಸಿ ಉತ್ತಮ ಅಭಿವೃದ್ಧಿಮಾಡಿ ತಾಲೂಕಿನ ಪ್ರಗತಿಗೆ ಶ್ರಮಿಸುತ್ತಿದ್ದೇನೆ ಎಂದು ತಿಳಿಸಲಾಯಿತು.ಕ್ಷುಲ್ಲಕ ರಾಜಕಾರಣ: ಮಾಜಿ ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ ನಮ್ಮ ಪಕ್ಷದ ಮೇಲೆ ಇಲ್ಲ ಸಲ್ಲದ ಆರೋಪ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ. ಇತ್ತೀಚಿಗೆ ತಾಲೂಕಿನ ತೊಂಡೇಭಾವಿ ಹೋಬಳಿಯ ತಪಸಮಾಕಲಹಳ್ಳಿ ಮತ್ತು ಡಿ.ಪಾಳ್ಯ ಹೋಬಳಿಯ ಬಚ್ಚರೆಡ್ಡಿಹಳ್ಳಿ ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳು ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಪಂಚಾಯಿತಿ ಜಾಗವನ್ನು ತಾಪಂ ಅಧಿಕಾರಿಗಳು ತೆರವುಗೊಳಿಸಿದ್ದರು. ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ 25 ವರ್ಷಗಳ ಅನುಭವವಿರುವರು ಪಂಚಾಯಿತಿ ಸದಸ್ಯರ ಅವಧಿ ಮುಗಿದ ಮೇಲೆ ಪಂಚಾಯಿತಿ ಜಾಗದಲ್ಲಿ ನಾಲ್ಕು ಶೆಡ್ ಹಾಕಿಸಿ, ಜಾತಿಗಳನ್ನು ಎತ್ತಿ ಕಟ್ಟಿ ಬೇಕಾದವರಿಂದ ಫೋಟೋ ಮತ್ತು ವಿಡಿಯೋ ಮಾಡಿಸಿ ಶಾಸಕ ಪುಟ್ಟಸ್ವಾಮಿಗೌಡ ಬಡವರ ಶೆಡ್ ಕಿತ್ತು ಹಾಕಿದ್ದಾರೆ ಎಂದು ಹೇಳಿರುವುದು ಸರಿಯಲ್ಲ. ಕೈಲಾಗದವರ ಕೊನೆಯ ಅಸ್ತವೇ ಅಪಪ್ರಚಾರವಾಗಿದೆ ಎಂದರು.ತೊಂಡೇಭಾವಿ ಪಂಚಾಯಿತಿಯಲ್ಲಿ ಎರಡು ವರ್ಷಗಳ ಹಿಂದೆಯೇ ಶೆಡ್ ನಿರ್ಮಾಣದ ಜಾಗದಲ್ಲಿ ಅಂಗನವಾಡಿ, ಶಾಲೆ ಮತ್ತು ಅಡುಗೆ ಕೊಠಡಿ ನಿರ್ಮಿಸಲು ಪಂಚಾಯಿತಿಯಿಂದ ರೆಸೊಲ್ಯೂಶನ್ ಸಹ ಮಾಡಲಾಗಿದೆ. ಇಂತಹ ಸಣ್ಣತನದ ರಾಜಕೀಯ ಮಾಡಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪಂಚಾಯಿತಿ ಜಾಗಗಳನ್ನು ಅತಿಕ್ರಮಿಸಿ ಶೆಡ್ ನಿರ್ಮಿಸಿಕೊಂಡರೆ ಸರ್ಕಾರಿ ಕಚೇರಿಗಳಿಗೆ ಜಾಗ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು.ತಾಲೂಕಿನ ಬಚ್ಚರೆಡ್ಡಿಹಳ್ಳಿ ಮತ್ತು ತಮಸಮಾಕಲಹಳ್ಳಿಯಲ್ಲಿ ನಿವೇಶನವನ್ನು ವಿನಾಕಾರಣ ತೆರವುಗೊಳಿಸಿಲ್ಲ, ಗ್ರಾಪಂನವರು ಅಂಗನವಾಡಿ ಕಟ್ಟಡ ಮತ್ತು ಅಡುಗೆ ಕೋಣೆ ನಿರ್ಮಾಣಕ್ಕೆ ಕಳೆದೆರಡು ವರ್ಷಗಳ ಹಿಂದೆಯೇ ಗ್ರಾಪಂನಲ್ಲಿ ಠರಾವು ಮಾಡಲಾಗಿತ್ತು. ಆದರೆ ನಮ್ಮ ವಿರೋಧಿಗಳು ಸಂಪೂರ್ಣವಾಗಿ ವಿಚಾರ ತಿಳಿದುಕೊಳ್ಳದೆ ನನ್ನ ವಿರುದ್ಧ ಮಾತನಾಡುವುದು ಅವರ ಕ್ಷುಲ್ಲಕ ರಾಜಕಾರಣ ತೋರುತ್ತದೆ. ಗ್ರಾಮಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರಿ ಜಾಗದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸುವ ಮೂಲಕ ಆಯಾ ಗ್ರಾಮಗಳ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.120ಕೋಟಿ: ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ನಾನಾ ಇಲಾಖೆಗಳಿಂದ 120ಕೋಟಿ ಅನುದಾನ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು 3ತಿಂಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.ರಮಾಪುರ ವ್ಯವಸಾಯ ಸಹಕಾರಿ ಸಂಘದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಿ ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಸಹಕಾರಿಯಾಗಿ ಪ್ರಮಾಣಿಕವಾಗಿ ಕೆಲಸ ಮಾಡುವಂತೆ ತಿಳಿಸಲಾಯಿತು.ಕಾರ್ಯಕ್ರಮದಲ್ಲಿ ಅಹಿಂದ ವರ್ಗಗಳ ನಾಯಕ ಆರ್.ಅಶೋಕ್ ಕುಮಾರ್, ಕೆ.ಎಚ್.ಪಿ ಪಕ್ಷದ ಶ್ರೀನಿವಾಸಗೌಡ, ಕೋಲಾರ ಚಿಕ್ಕಬಳ್ಳಾಪುರ ಬ್ಯಾಂಕಿನ ನಿರ್ದೇಶಕ ವೆಂಕಟರಾಮರೆಡ್ಡಿ, ಎಸ್.ಎಲ್.ಲಕ್ಷ್ಮೀನಾರಾಯಣಪ್ಪ, ವೆಂಕಟರೆಡ್ಡಿ, ಜಿ.ಕೆ.ಸತೀಶ್, ಕೃಷಿಕಸಮಾಜದ ಅಧ್ಯಕ್ಷ ಪ್ರಭಾಕರರೆಡ್ಡಿ, ಬೊಮ್ಮಣ್ಣ, ತಾಲ್ಲೂಕಿನ ಎಲ್ಲಾ ಡೈರಿ ಅಧ್ಯಕ್ಷರು ಮತ್ತು ರೈತರು ಭಾಗವಹಿಸಿದ್ದರು.ನನ್ನ ಮೇಲೆ ಅಪಪ್ರಚಾರ ಸಹಿಸುವುದಿಲ್ಲ: ಶಾಸಕ ಪುಟ್ಟಸ್ವಾಮಿಗೌಡ
ಮಾಜಿ ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ ನಮ್ಮ ಪಕ್ಷದ ಮೇಲೆ ಇಲ್ಲ ಸಲ್ಲದ ಆರೋಪ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.