ಸಾರಾಂಶ
ರಾಮನಗರ: ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಹಾಗೂ ಏಕ ಪೋಷಕರನ್ನು ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅವರ ಶಾಲಾ ಶುಲ್ಕವನ್ನು ವೈಯಕ್ತಿಕವಾಗಿ ತಾವೇ ಭರಿಸಲು ನಿರ್ಧರಿಸಿರುವುದಾಗಿ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಖಾಸಗಿ ಶಾಲಾ ಮುಖ್ಯಶಿಕ್ಷಕರ ಹಾಗೂ ಆಡಳಿತ ಮಂಡಳಿಯ ಸಭೆ ನಡೆಸಿದ ಅವರು, ಕಳೆದ ಎರಡು ವರ್ಷಗಳಿಂದಲೂ ಖಾಸಗಿ ಶಾಲೆಗಳಲ್ಲಿ ಶಾಲಾ ಶುಲ್ಕ ಪಾವತಿಸುತ್ತಾ ಬಂದಿದ್ದೇನೆ. ಈ ವರ್ಷವೂ ಅದನ್ನು ಮುಂದುವರಿಸುತ್ತೇನೆ ಎಂದರು.ಮೊದಲ ವರ್ಷ 25 ಲಕ್ಷ ನೀಡಿದ್ದೆ, ಎರಡನೇ ವರ್ಷದಲ್ಲಿ 45 ಲಕ್ಷ ಶಾಲಾ ಶುಲ್ಕ ನೀಡಲಾಗಿತ್ತು. ಪೋಷಕರು ನನ್ನ ಕಚೇರಿಗೆ ಆಗಮಿಸಿ ವಿದ್ಯಾರ್ಥಿಗಳ ಶಾಲಾ ಹಾಗೂ ಕಾಲೇಜು ಶುಲ್ಕ ಭರಿಸುವಂತೆ ಮನವಿ ಮಾಡುತ್ತಿದ್ದರು. ಹಾಗಾಗಿ ಈ ವರ್ಷ ಖಾಸಗಿ ಶಾಲಾ ಆಡಳಿತ ಮಂಡಳಿಯ ಸಭೆ ನಡೆಸಿ, ಬಡತನದಲ್ಲಿರುವ ಹಾಗೂ ಶಾಲಾ ಶುಲ್ಕ ಭರಿಸಲು ಸಾಧ್ಯವಾಗದಿರುವವರ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದರು.
ಈ ಸೌಲಭ್ಯ ನೀಡಲು ಜಾತಿ, ಧರ್ಮ ಹಾಗೂ ಪಕ್ಷಪಾತ ಮಾಡದೆ ಬಡ ವಿದ್ಯಾರ್ಥಿಗಳು, ಶುಲ್ಕ ಭರಿಸಲು ಸಾಧ್ಯವಾಗದೆ ಇರುವವರು, ಕೂಲಿ ಕಾರ್ಮಿಕರ ಮಕ್ಕಳು ಮತ್ತು ಏಕ ಪೋಷಕರನ್ನು ಒಳಗೊಂಡಿರುವ ವಿದ್ಯಾರ್ಥಿಗಳನ್ನು ಪರಿಗಣಿಸುವಂತೆ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಹೇಳಿದರು.ಕಳೆದ ವರ್ಷ ಒಂದೇ ಶಾಲೆಗೆ 7.5 ಲಕ್ಷ ಹಣ ನೀಡಲಾಗಿತ್ತು. ಜತೆಗೆ, 33 ಖಾಸಗಿ ಶಾಲೆಗಳು ಹಾಗೂ 25 ಕಾಲೇಜುಗಳಿಗೆ ಒಟ್ಟು 45 ಲಕ್ಷ ವಿತರಣೆ ಮಾಡಿದ್ದೆ, ಈ ಬಾರಿಯು ಅಗತ್ಯ ಇರುವವರ ಪಟ್ಟಿ ಪಡೆದು, ಆಯಾಯ ಶಾಲೆಯ ಹೆಸರಿನಲ್ಲಿ ಡಿಡಿ ನೀಡಲಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನೀಡಲು ಮಕ್ಕಗಳಿಗೆ ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದೆ. ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ಹಾಕಲಾಗುತ್ತಿದೆ. ಬೆರಳೆಣಿಕೆ ಸಂಖ್ಯೆ ಇರುವ ವಿದ್ಯಾರ್ಥಿಗಳನ್ನು ಮತ್ತೊಂದು ಶಾಲೆಯೊಂದಿಗೆ ವಿಲೀನ ಮಾಡಲಾಗುತ್ತಿದೆ. ಜತೆಗೆ, ಗ್ರಾಮಾಂತರ ಪ್ರದೇಶದಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಸಭೆಯಲ್ಲಿ ಮಾಜಿ ಶಾಸಕ ಕೆ.ರಾಜು, ರಾಮನಗರ ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಬಿಇಒ ಸೋಮಲಿಂಗಯ್ಯ ಸೇರಿದಂತೆ ತಾಲೂಕಿನ ಖಾಸಗಿ ಶಾಲೆಯ ಅಡಳಿತ ಮಂಡಳಿಯ ಮುಖ್ಯಸ್ಥರು, ಶಿಕ್ಷಕರು ಹಾಗೂ ಮುಖಂಡರಾದ ರವಿ ಮತ್ತಿತರರು ಉಪಸ್ಥಿತರಿದ್ದರು.23ಕೆಆರ್ ಎಂಎನ್ 4.ಜೆಪಿಜಿ
ರಾಮನಗರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಬುಧವಾರ ಖಾಸಗಿ ಶಾಲಾ ಮುಖ್ಯೋಪಾಧ್ಯಾಯರ ಹಾಗೂ ಆಡಳಿತ ಮಂಡಳಿಯ ಸಭೆ ನಡೆಸಿದರು.