ಪೌರಕಾರ್ಮಿಕರಿಗೆ ಬಿಡದಿಯಲ್ಲಿ ನಿವೇಶನ ಕಲ್ಪಿಸಿ ಕೊಡುವೆ: ಶಾಸಕ ಎಚ್.ಸಿ. ಬಾಲಕೃಷ್ಣ

| Published : Oct 09 2025, 02:00 AM IST

ಪೌರಕಾರ್ಮಿಕರಿಗೆ ಬಿಡದಿಯಲ್ಲಿ ನಿವೇಶನ ಕಲ್ಪಿಸಿ ಕೊಡುವೆ: ಶಾಸಕ ಎಚ್.ಸಿ. ಬಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪೌರ ಕಾರ್ಮಿಕರ ನಿವೇಶನ ಬೇಡಿಕೆ ಈಡೇರಿಸಲಾಗದಿರುವುದು ನನಗೂ ಬೇಸರ ತರಿಸಿದೆ. ಪುರಸಭೆ ಸದಸ್ಯರು ಉಪ ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಪುರಸಭೆ ವ್ಯಾಪ್ತಿಯಲ್ಲಿಯೇ 3 ರಿಂದ 4 ಎಕರೆ ಜಾಗ ಗುರುತಿಸಿದರೆ ಪ್ರತಿ ಪೌರನೌಕರನಿಗೆ 30 -40 ಅಳತೆಯ ನಿವೇಶನ ನೀಡುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರಬಿಡದಿ ಪುರಸಭೆ ವ್ಯಾಪ್ತಿಯಲ್ಲಿ 3 ರಿಂದ 4 ಎಕರೆ ಜಾಗ ಗುರುತಿಸಿದರೆ ಪೌರ ಕಾರ್ಮಿಕರಿಗೆ ನಿವೇಶನ ಕಲ್ಪಿಸಲು ಕ್ರಮ ವಹಿಸುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಭರವಸೆ ನೀಡಿದರು.ಬಿಡದಿಯ ಈಗಲ್ ಟನ್ ರೆಸಾರ್ಟ್‌ನ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಬಿಡದಿ ಪುರಸಭೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪೌರ ಕಾರ್ಮಿಕರ ನಿವೇಶನ ಬೇಡಿಕೆ ಈಡೇರಿಸಲಾಗದಿರುವುದು ನನಗೂ ಬೇಸರ ತರಿಸಿದೆ. ಪುರಸಭೆ ಸದಸ್ಯರು ಉಪ ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಪುರಸಭೆ ವ್ಯಾಪ್ತಿಯಲ್ಲಿಯೇ 3 ರಿಂದ 4 ಎಕರೆ ಜಾಗ ಗುರುತಿಸಿದರೆ ಪ್ರತಿ ಪೌರನೌಕರನಿಗೆ 30 -40 ಅಳತೆಯ ನಿವೇಶನ ನೀಡುವುದಾಗಿ ಹೇಳಿದರು.ಪೌರಕಾರ್ಮಿಕರು ಸಿಂಗಾಪುರ ಅಧ್ಯಯನ ಪ್ರವಾಸ ಕೈಗೊಳ್ಳುವ ಬೇಡಿಕೆಯೂ ಬಂದಿದೆ. ಕೇವಲ ಅಧ್ಯಯನ ಪ್ರವಾಸ ಕೈಗೊಂಡರೆ ಸಾಲದು. ಅದನ್ನು ಅನುಷ್ಠಾನಕ್ಕೆ ಬರಬೇಕು. ಪೌರ ನೌಕರರ ಅಧ್ಯಯನ ಪ್ರವಾಸ ಸಂಬಂಧ ಪುರಸಭೆಯಿಂದ ಪತ್ರ ಬರೆದಿಲ್ಲ ಸರ್ಕಾರದ ಮಟ್ಟದಲ್ಲಿ ಅನುಮತಿ ಕೊಡಿಸುತ್ತೇನೆ ಎಂದರು.ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ ಮಾತನಾಡಿ, ಪುರಸಭೆಯ 7 ರಿಂದ 14 ವಾರ್ಡಿನವರೆಗೆ 15 ಕೋಟಿ ರುಪಾಯಿಗಳ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದಕ್ಕೆ ಸಹಕಾರ ನೀಡಿದ ಶಾಸಕ ಬಾಲಕೃಷ್ಣ, ಮಾಜಿ ಅಧ್ಯಕ್ಷ ಹರಿಪ್ರಸಾದ್ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಭಾಗದಲ್ಲಿ ರಸ್ತೆ , ಚರಂಡಿ ನಿರ್ಮಾಣಗೊಂಡರೆ ಪೌರ ಕಾರ್ಮಿಕರ ಮೇಲಿನ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಹೇಳಿದರು.

ಪಟ್ಟಣದ ಅಭಿವೃದ್ಧಿಗಾಗಿ ಸದಸ್ಯರಷ್ಟೇ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ನೌಕರರು ಶ್ರಮ ವಹಿಸುತ್ತಿದ್ದಾರೆ. ಹೀಗಾಗಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರಿಗೆ ನಿವೇಶನ ಕಲ್ಪಿಸಲು ಹಾಗೂ ವಿದೇಶ ಪ್ರವಾಸಕ್ಕೆ ಅನುವು ಮಾಡಿಕೊಡಲು ಶಾಸಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಪುರಸಭೆ ಮಾಜಿ ಅಧ್ಯಕ್ಷ ಹರಿಪ್ರಸಾದ್ ಮಾತನಾಡಿ, ದಿನನಿತ್ಯ ಪಟ್ಟಣವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ಹಾಗೂ ಗೌರವ ಸಲ್ಲಿಸುವ ಹೊಣೆ ನಮ್ಮದಾಗಿದೆ. ನಾನು ಅಧ್ಯಕ್ಷನಾಗಿದ್ದ ಒಂದು ವರ್ಷಗಳ ಅವಧಿಯಲ್ಲಿ ನೀವುಗಳು ಕಪ್ಪು ಚುಕ್ಕೆ ಬರದಂತೆ ಪಟ್ಟಣವನ್ನು ಸ್ವಚ್ಛವಾಗಿಡುವ ಕೆಲಸ ಮಾಡಿದ್ದೀರಿ. ನಿಮ್ಮ ಸೇವೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ, ಪೌರಕಾರ್ಮಿಕರು ಬದ್ಧತೆ ಇಟ್ಟುಕೊಂಡು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಪಟ್ಟಣವನ್ನು ಸ್ವಚ್ಛವಾಗಿಟ್ಟು ಜನರ ಆರೋಗ್ಯ ಕಾಪಾಡುವ ನೀವುಗಳು ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆಯೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಮುಖ್ಯಾಧಿಕಾರಿ ಮೀನಾಕ್ಷಿ ಮಾತನಾಡಿ, ಮಳೆ, ಗಾಳಿ ಮತ್ತು ಚಳಿಯೆನ್ನದೆ ದಿನನಿತ್ಯ ನಸುಕಿನ ಜಾವ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ. ಅವರನ್ನು ಸಮಾಜ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ವಿಜೇತರಾದ ಪೌರ ಕಾರ್ಮಿಕರು, ಪುರಸಭೆ ಅಧಿಕಾರಿ, ಸಿಬ್ಬಂದಿ ಹಾಗೂ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಪೌರ ಕಾರ್ಮಿಕರು ಮತ್ತು ಅವರ ಕುಟುಂಬದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಕಲ್ಲುಗೋಪಳ್ಳಿ ಕುಮಾರ್, ದೇವರಾಜು, ಮಹಿಮಾ, ಬಿಂದ್ಯಾ, ಕೆ.ಶ್ರೀನಿವಾಸ್, ನವೀನ್ ಕುಮಾರ್, ಹೊಂಬಯ್ಯ, ಮನು, ಸರಸ್ವತಮ್ಮ, ಲೋಕೇಶ್, ರೇಣುಕಾ, ಜಗದೀಶ್, ಅಧಿಕಾರಿಗಳಾದ ರೂಪಾ, ಶಿಲ್ಪಾ, ಶ್ಯಾಮ್, ನಮಸ್ಕೖತ, ಪೌರಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಛಲಪತಿ, ಬಿಡದಿ ಶಾಖೆ ಅಧ್ಯಕ್ಷ ನಾಗರಾಜ್ , ಜಿಡಿಬಿಎ ಸದಸ್ಯ ಪುಟ್ಟಯ್ಯ ಮತ್ತಿತರರು ಉಪಸ್ಥಿತರಿದ್ದರು.

----8ಕೆಆರ್ ಎಂಎನ್ 1.ಜೆಪಿಜಿಬಿಡದಿಯ ಈಗಲ್ ಟನ್ ರೆಸಾರ್ಟ್ ನ ಸಭಾಂಗಣದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಶಾಸಕ ಬಾಲಕೃಷ್ಣ ಅವರನ್ನು ಪುರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಅಭಿನಂದಿಸಿದರು.------