ಸಾರಾಂಶ
ರೈತರನ್ನು ಅಸಡ್ಡೆ ಭಾವನೆಯಿಂದ ನೋಡುವುದು ಸರಿಯಲ್ಲ
ಸಹಾಯಧನ ದೊರೆಯುವ ಯೋಜನೆಗೆ ಸಾಲ ನೀಡದಿದ್ದರೇ ಹೇಗೆ?ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳಬ್ಯಾಂಕಿನವರ ಅಸಹಕಾರವನ್ನು ನಾವು ಸುಮ್ಮನೇ ಬಿಡುವುದಿಲ್ಲ. ಇದನ್ನು ಸದನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದು ಸಂಸದ ರಾಜಶೇಖರ ಹಿಟ್ನಾಳ ಖಾರವಾಗಿ ಹೇಳಿದರು.
ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕಿನವರು ಅಸಹಕಾರ ನೀಡುತ್ತಿರುವುದರಿಂದಲೇ ಸರ್ಕಾರದ ಸಹಾಯಧನದ ಯೋಜನೆಗಳು ಜಾರಿಯಾಗುತ್ತಿಲ್ಲ, ರೈತರಿಗೆ ಸಹಾಯಧನ ದೊರೆಯುತ್ತಿಲ್ಲ ಎಂದು ಕಿಡಿಕಾರಿದರು.ಇದು ಕೇವಲ ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಯೋಜನೆಗಳು ಮಾತ್ರವಲ್ಲ, ಬಹುತೇಕ ಸರ್ಕಾರದ ಸಾಲವನ್ನೊಳಗೊಂಡ ಸಹಾಯಧನ ಯೋಜನೆಗಳ ಅನುಷ್ಠಾನಕ್ಕೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಬ್ಯಾಂಕಿನವರಿಗೆ ನಿರ್ದೇಶನವಾಗಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಮಧ್ಯೆ ಪ್ರವೇಶ ಮಾಡಿ ಹೇಳಿದರು. ಇದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಸಿದ ಸಂಸದರು, ಇದೆಲ್ಲವನ್ನು ಒಳಗೊಂಡು, ಬ್ಯಾಂಕಿನವರ ಅಸಹಕಾರವನ್ನು ನಾನು ಸಂಸತ್ತಿನಲ್ಲಿಯೇ ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದರು.ತೋಟಗಾರಿಕಾ ಇಲಾಖೆ ಮತ್ತು ಕೃಷಿ ಇಲಾಖೆಯ ಸಹಾಯಧನ ಯೋಜನೆಗಳು ಸಾಕಷ್ಟು ಇವೆ. ₹30 ಲಕ್ಷದವರೆಗೂ ಸಹಾಯಧನ ನೀಡಲಾಗುತ್ತದೆ. ಆದರೆ, ಬ್ಯಾಂಕಿನವರು ಮಾತ್ರ ಇದನ್ನು ಮಂಜೂರಾತಿ ಮಾಡುವುದಿಲ್ಲ. ಕಳೆದ ವರ್ಷ 200 ಗುರಿ ಹೊಂದಿದ್ದರು ಕೇವಲ 115 ಮಾತ್ರ ಜಾರಿಯಾಗಿವೆ. ಆದರೆ, ಈ ವರ್ಷವೂ 200 ಗುರಿ ಇದ್ದು, ಈಗಾಗಲೇ 350ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದೇವೆ. ಆದರೆ, ಇದುವರೆಗೂ ಬ್ಯಾಂಕಿನವರು ಮಂಜೂರಾತಿ ನೀಡುತ್ತಿಲ್ಲ ಎಂದು ಕೃಷಿ ಇಲಾಖೆಯ ಜೆಡಿ ರುದ್ರೇಶಪ್ಪ ಹೇಳಿದರು.
ಹೌದು, ಇದು ನನ್ನ ಗಮನಕ್ಕೆ ಇದೆ. ಬಿಸಿನೆಸ್ ಜನರನ್ನು ಕರೆಯಿಸಿ, ಚಹಾ ಕುಡಿಸಿ ಕಳುಹಿಸುವ ಬ್ಯಾಂಕಿನವರು ರೈತರಿಗೆ ಕನಿಷ್ಠ ಗೌರವ ನೀಡುವುದಿಲ್ಲ ಎಂದು ಸಂಸದರು ಲೀಡ್ ಬ್ಯಾಂಕ್ ಮ್ಯಾನೇಜರ್ ವೀರಯ್ಯ ಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.ಈ ಬಗ್ಗೆ ಪ್ರತಿ ತಿಂಗಳು ಸಭೆ ನಡೆಸಿ, ಅಷ್ಟೇ ಅಲ್ಲ, ಕೊಟ್ಟಿರುವ ಗುರಿಯನ್ನು ಪೂರ್ಣಗೊಳಿಸಿ, 200 ಜನರಿಗೆ ಕೊಡಬೇಕಾದ ಸೌಲಭ್ಯ ಇದೆ. 181 ಬ್ಯಾಂಕುಗಳು ಇದ್ದರೂ ಯಾಕೆ ಅನುಷ್ಠಾನ ಮಾಡುತ್ತಿಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ತರಾಟೆಗೆ ತೆಗೆದುಕೊಂಡರು.
ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯೇ ಅಧಿಕವಾಗಿದೆ. ಹೀಗಾಗಿ, ಸಮಸ್ಯೆಯಾಗುತ್ತಿದೆ ಹೇಳಿದರು. 79 ಹುದ್ದೆಗಳು ಇದ್ದರೂ ಸಹ ಕೇವಲ 28 ವೈದ್ಯರು ಮಾತ್ರ ಇದ್ದಾರೆ. ಇನ್ನು 51 ಹುದ್ದೆಗಳು ಖಾಲಿಯೇ ಇವೆ. ಹೀಗಾಗಿ, ಸಮಸ್ಯೆಯಾಗುತ್ತಿದೆ ಎಂದರು. ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಇದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ವೈದ್ಯರನ್ನು ಭರ್ತಿಯಾಗುವಂತಾಗಬೇಕು. ಈ ದಿಸೆಯಲ್ಲಿ ಸರ್ಕಾರಕ್ಕೆ ವರದಿ ಮಾಡಿ ಎಂದರು.ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಪಶುವೈದ್ಯರ ಸಮಸ್ಯೆ ವಿಪರೀತ ಇದೆ, ರಾಜ್ಯ ಸರ್ಕಾರ ನೇಮಕ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಇದ್ದರು.