ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ 13 ವಾರ್ಡಿನ ಸಮಗ್ರ ಅಭಿವೃದ್ಧಿಗೆ ಕ್ಯಾಬಿನೆಟ್ ಸಭೆಯಲ್ಲಿ ಹೆಚ್ಚಿನ ಅನುದಾನ ಸಿಗುವ ಭರವಸೆಯಿದ್ದು ಎಲ್ಲಾ ಸದಸ್ಯರ ಸಹಕಾರದಿಂದ ಮಾದರಿ ಪಟ್ಟಣವನ್ನಾಗಿ ಮಾಡಲು ಶ್ರಮಿಸುವುದಾಗಿ ಶಾಸಕ ಎಂಆರ್ ಮಂಜುನಾಥ್ ತಿಳಿಸಿದರು.ಹನೂರು ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಅಧ್ಯಕ್ಷ ಮುಮ್ತಾಜ್ ಬಾನು ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.ಪಟ್ಟಣದಲ್ಲಿನ ಪ್ರತಿಯೊಂದು ವಾರ್ಡಿನ ಪ್ರತಿ ಮನೆಗಳಿಗೆ ಕಾವೇರಿ ಕುಡಿಯುವ ನೀರು, ಯುಜಿಡಿ, ಬೀದಿ ದೀಪ, ಕಾಂಕ್ರೀಟ್ ರಸ್ತೆಗಳು ಸೇರಿದಂತೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಲು ಸಿಎಂಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದ್ದು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಹೆಚ್ಚಿನ ಅನುದಾನ ಸಿಗುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಮಾದರಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಸಿಬ್ಬಂದಿ ನೇಮಕ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಪಪಂ ವ್ಯಾಪ್ತಿಯ ರಸ್ತೆ ಬದಿ ವ್ಯಾಪಾರಿಗಳು, ಆಟೋ ನಿಲ್ದಾಣಕ್ಕೆ ಸ್ಥಳ ಗುರುತಿಸಲು ದಿನಾಂಕ ನಿಗದಿ ಮಾಡಿ ಅನುಕೂಲ ಕಲ್ಪಿಸಲಾಗುವುದು ಎಂದರು.ಪಪಂ ಸದಸ್ಯ ಸುದೇಶ್ ಮಾತನಾಡಿ, ಪಪಂ ವ್ಯಾಪ್ತಿಯ ಯಶಸ್ ಚಂದ್ರ ಲೇಔಟ್ ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟಿರುವ ನಿವೇಶನವನ್ನು ಸದಸ್ಯರ ಗಮನಕ್ಕೆ ತರದೆ ಯಾವುದೋ ಟ್ರಸ್ಟಿಗೆ ನೀಡಲು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು, ಕಳೆದ 2 ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ಶೇ.24.10,ಶೇ 7.25 ಮತ್ತು ಶೇ.5 ಕಾರ್ಯಕ್ರಮದಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ಒದಗಿಸಿಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅತಿ ಶೀಘ್ರದಲ್ಲಿಯೇ ಅನುದಾನ ಸಮರ್ಪಕವಾಗಿ ಬಳಕೆ ಆಗಬೇಕು ಎಂದರು.ಶಾಸಕ ಮಂಜುನಾಥ್ ಮಾತನಾಡಿ, ಅತಿ ತುರ್ತು ಸಭೆ ನಡೆಸಿ ಫಲಾನುಭವಿಗಳ ಆಯ್ಕೆ ಮಾಡಿ ಅನುದಾನ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಸದಸ್ಯ ಗಿರೀಶ್ ಮಾತನಾಡಿ, 12ನೇ ವಾರ್ಡಿನ ಕುಪ್ಪಬಾವಿ ಕಾಲೋನಿಯ ಮತ್ತು ಹದಿಮೂರನೇ ವಾರ್ಡಿನ ಕೆಇಬಿ ಎದುರುಗಡೆ ಇರುವ ರಸ್ತೆಗಳಿಗೆ ಚುನಾವಣೆ ಸಂದರ್ಭದಲ್ಲಿ ಮಣ್ಣು ಹಾಕಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಕಾಮಗಾರಿ ನಡೆಸಿ ಬಿಲ್ ಮಾಡಿಕೊಳ್ಳಲಿ ನಮ್ಮದೇನು ಅಭ್ಯಂತರವಿಲ್ಲ ಆದರೆ ಯಾರ ಗಮನಕ್ಕೂ ಬಾರದೆ ಮಣ್ಣು ಹಾಕಿರುವುದು ಸರಿಯಾದ ಕ್ರಮವಲ್ಲ ಎಂದರು.ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಪಟ್ಟಣದ ಪೆಟ್ರೋಲ್ ಬಂಕ್ ಮುಂಭಾಗದ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡರ ವೃತ್ತ ಎಂದು ನಾಮಕರಣ ಮಾಡಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆದರೆ ಇನ್ನೂ ಇದು ಅಂತಿಮ ಹಂತಕ್ಕೆ ಬಂದಿಲ್ಲ ಇದಲ್ಲದೆ ಒತ್ತುವರಿ ತೆರವು ಮಾಡಿಲ್ಲ ಎಂದರು. ಶಾಸಕ ಎಂಆರ್ ಮಂಜುನಾಥ್ ಮಾತನಾಡಿ ಈಗಾಗಲೇ ಸಂಬಂಧಪಟ್ಟ ಅಭಿಯಂತರರಿಗೆ ಮಾತನಾಡಿ ಒತ್ತುವರಿ ಮಾಡಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ವೃತ್ತವನ್ನು ಹೊಸದಾಗಿ ನಿರ್ಮಾಣ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.ಸದಸ್ಯ ಮಹೇಶ್ ಮಾತನಾಡಿ, ಶಾಸಕರು ಸಂಸದರು ವಿಧಾನ ಪರಿಷತ್ ಸದಸ್ಯರ ವೇತನವನ್ನು ಪರಿಷ್ಕರಣೆ ಮಾಡಿದ್ದಾರೆ. ಆದರೆ ಪಟ್ಟಣ ಪಂಚಾಯಿತಿ, ನಗರಸಭೆ , ಪುರಸಭೆ ಸದಸ್ಯರ ವೇತನ 800 ಮಾತ್ರ ಇದೆ. ಆದ್ದರಿಂದ ಸದಸ್ಯರ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.ಸಭೆಯಲ್ಲಿ ಅಧ್ಯಕ್ಷ ಮಮ್ತಾಜ್ ಬಾನು ಉಪಾಧ್ಯಕ್ಷ ಆನಂದ್ ಕುಮಾರ್, ಮುಖ್ಯಾಧಿಕಾರಿ ಎಂಪಿ ಮಹೇಶ್ ಕುಮಾರ್ ಸದಸ್ಯರಾದ ಸೋಮಶೇಖರ್ ಹರೀಶ್ ಗಿರೀಶ್, ಸುದೇಶ್ ಸಂಪತ್, ಪವಿತ್ರ, ಲತಾ ಮಣಿ, ಮಹೇಶ್ ನಾಯಕ, ರೂಪ, ನಾಮ ನಿರ್ದೇಶಿತ ಸದಸ್ಯರಾದ ಬಸವರಾಜು, ಮಹಾದೇಶ್ ನವೀನ್, ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರತಿ ಬಜೆಟ್‌ನಲ್ಲಿ ಪತ್ರಕರ್ತರಿಗೆ5 ಲಕ್ಷ ರು.ಅನುದಾನ ಮೀಸಲುನಾಮನಿರ್ದೇಶಿತ ಸದಸ್ಯ ಮಹಾದೇಶ್ ಮಾತನಾಡಿ, ಪ್ರತಿ ಬಜೆಟ್‌ನಲ್ಲಿಯೂ ಪತ್ರಕರ್ತರಿಗೆ 5 ಲಕ್ಷ ರು. ಅನುದಾನ ಮೀಸಲಿಡಲಾಗುತ್ತಿದೆ. ಕಳೆದ ವರ್ಷ ಪತ್ರಕರ್ತರೊಬ್ಬರಿಗೆ ಅನಾರೋಗ್ಯ ಸಂಬಂಧ ₹10 ಸಾವಿರ ಮಾತ್ರ ಬಳಕೆ ಮಾಡಿಕೊಳ್ಳಲಾಗಿದ್ದು ಉಳಿದ ಹಣದಲ್ಲಿ ಪತ್ರಕರ್ತರಿಗೆ ಲ್ಯಾಪ್ ಟಾಪ್ ವಿತರಣೆ ಮಾಡುವಂತೆ ಮನವಿ ಸಲ್ಲಿಸಿದರು. ಸಭೆಯಲ್ಲಿ ತಹಸಿಲ್ದಾರ್ ಕಚೇರಿ ಮುಂಭಾಗ ನಿರ್ಮಾಣ ಮಾಡಿರುವ ಶೌಚಾಲಯಕ್ಕೆ ಟೆಂಡರ್ ಕರೆಯಲು, ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ದುರಸ್ತಿ, ಅಂಗಡಿಗೆ ಮಳಿಗೆಗಳ ಬಾಡಿಗೆ ವಸೂಲಾತಿ, ಮುಖ್ಯ ರಸ್ತೆಯ ಪಾದಾಚಾರ್ಯ ಮಾರ್ಗ ಒತ್ತುವರಿ ತೆರವು ಸಂಬಂಧ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.