ಬಿಎಸ್‌ವೈ ಅವರಂತೆ ನಡೆಯಲು ಪ್ರಯತ್ನಿಸುವೆ

| Published : Sep 03 2025, 01:00 AM IST

ಸಾರಾಂಶ

ಒಬ್ಬ ಜನಪ್ರತಿನಿಧಿ ಯಶಸ್ವಿ ಆಗಬೇಕು ಎಂದರೆ ರಸ್ತೆ, ಕಟ್ಟಡ ನಿರ್ಮಾಣ ಮಾಡಿದರೆ ಸಾಲದು, ಇಡೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಬೇಕು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆದಾಗ ಮಾತ್ರ ಒಬ್ಬ ಯಶಸ್ವಿ ಜನಪ್ರತಿನಿಧಿ ಎನ್ನಿಸಿಕೊಳ್ಳಲು ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ಶಿರಾಳಕೊಪ್ಪ: ಒಬ್ಬ ಜನಪ್ರತಿನಿಧಿ ಯಶಸ್ವಿ ಆಗಬೇಕು ಎಂದರೆ ರಸ್ತೆ, ಕಟ್ಟಡ ನಿರ್ಮಾಣ ಮಾಡಿದರೆ ಸಾಲದು, ಇಡೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಆಗಬೇಕು. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆದಾಗ ಮಾತ್ರ ಒಬ್ಬ ಯಶಸ್ವಿ ಜನಪ್ರತಿನಿಧಿ ಎನ್ನಿಸಿಕೊಳ್ಳಲು ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

ಶಿರಾಳಕೊಪ್ಪ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಸ್‌ಸಿ, ಎಸ್‌ಟಿ, ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಹಾಗೂ ಎನ್‌ಎಸ್‌ಎಸ್ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನನಗೆ ನಾನು ಶಾಸಕ ಎಂದು ಕರೆದು ಕೊಳ್ಳುವುದಕ್ಕಿಂತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮಗ ಎಂದು ಹೇಳಿಕೊಳ್ಳಲು ಹೆಚ್ಚಿಗೆ ಇಷ್ಟವಾಗುತ್ತದೆ. ಅವರಿಂದ ಶಿಸ್ತು ಮತ್ತು ಸಮಯಕ್ಕೆ ಕೊಡುವ ಮಹತ್ವವನ್ನು ನಾನು ಮೆಚ್ಚಿಕೊಂಡಿದ್ದೇನೆ. ಅದರಂತೆ ನಡೆಯಲು ಪ್ರತ್ನಿಸುತ್ತಿದ್ದೇನೆ ಎಂದ ಅವರು ವಿದ್ಯಾರ್ಥಿಗಳು ಸಹ ಸಮಯ ವ್ಯರ್ಥಮಾಡದೇ ಕಠಿಣ ಶ್ರಮದಿಂದ ಓದಿ ಮುಂದೆಬರಬೇಕು ಎಂದು ಸಲಹೆ ನೀಡಿದರು.

ನಮ್ಮ ಕ್ಷೇತ್ರದಲ್ಲಿ ಯಡಿಯೂರಪ್ಪನವರು ಹಾಗೂ ಸಂಸದ ರಾಘವೇಂದ್ರ ಅವರ ಸಹಕಾರದಿಂದ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿ ಆಗಿದ್ದು, ಈ ಕಾಲೇಜು ಸಹ ೫ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ವಾಗಿದೆ, ಈ ಕಾಲೇಜಿನಲ್ಲಿ ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗಿಂತ ಅಕ್ಕಪಕ್ಕದ ತಾಲೂಕಿನ ವಿದ್ಯಾರ್ಥಿನಿಯರು ಹೆಚ್ಚಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ಮುಂದಿದೆ ಎಂದು ಹೇಳಲು ಸಂತಸ ವಾಗುತ್ತದೆ ಎಂದರು.

ನಾನು ನಿಮ್ಮ ಕಾಲೇಜಿಗೆ ಏನೇ ಸಹಕಾರ ಕೇಳಿದರೂ ಮಾಡಲು ಸಿದ್ಧನಿದೇನೆ. ಆದರೆ ಈ ಸರ್ಕಾರದಲ್ಲಿ ಅನುದಾನ ಕೊರತೆ ಇಂದ ಕೆಲಸ ಕಾರ್ಯ ಮಾಡಲು ಅಡ್ಡಿ ಆಗುತ್ತಿದೆ. ಆದರೆ ನಾನು ಎನ್‌ಜಿಒ ದಂತಹ ಸಂಸ್ಥೆಗಳಿಂದ ಪ್ರಯತ್ನಿಸಿ ಸಹಾಯ ಮಾಡುತ್ತೇನೆ. ಹಾಗೆಯೇ ಉದ್ಯೋಗ ಮೇಳ ಮಾಡಲು ಆಳ್ವಾಸ್‌ ಕಾಲೇಜಿನನೊಂದಿಗೆ ಮಾತನಾಡಿದ್ದು, ಮುಂಬರುವ ದಿನದಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ರವಿ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಪರಿಚಯ ಮಾಡಿ ಸ್ವಾಗತಿಸಿದರು.

ವೇದಿಕೆ ಮೇಲೆ ಎಂ.ಎ.ಡಿ.ಬಿ.ಮಾಜಿ ಅಧ್ಯಕ್ಷ ಗುರುಮೂರ್ತಿ, ಅಗಡಿ ಅಶೋಕ, ಟಿಎಪಿಸಿಎಂ ಅಧ್ಯಕ್ಷ ಸುಧೀರ್, ಕಾಲೇಜಿನ ಕುಲಸಚಿವೆ ನಾಗರತ್ನ, ನಿವೇದಿತಾ, ತಡಗಣಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ, ಮಂಚಿ ಶಿವಣ್ಣ, ಚೆನ್ನವೀರಶೆಟ್ಟಿ ಸೇರಿದಂತೆ ಪಟ್ಟಣದ ಪ್ರಮುಖರು ಕಾಲೇಜು ಸಿಬ್ಬಂದಿ ಹಾಜರಿದ್ದರು.