ಕಾಂಗ್ರೆಸ್ ಹೈಕಮಾಂಡ್ ನಾಯಕರು ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರಿಂದ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಿಂದ ನಾಮಪತ್ರ ಹಿಂಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಕೆಪಿಸಿಸಿ ಪದವೀಧರ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಹೇಳಿದರು.

ಹಾವೇರಿ: ಕಾಂಗ್ರೆಸ್ ಹೈಕಮಾಂಡ್ ನಾಯಕರು ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದರಿಂದ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಿಂದ ನಾಮಪತ್ರ ಹಿಂಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಕೆಪಿಸಿಸಿ ಪದವೀಧರ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಅಧಿಕಾರದಲ್ಲಿ ಇಲ್ಲದಿರುವಾಗ ಕೂಡ ಸಂಘಟನೆ ಮಾಡಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗಣನೀಯ ಮತಗಳನ್ನು ಪಡೆದಿದ್ದೆ. ಈ ಚುನಾವಣೆಯಲ್ಲಿ ನನಗೆ ಗೆಲ್ಲುವ ಎಲ್ಲ ಅವಕಾಶಗಳಿದ್ದವು. ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದೆ. ಮತದಾರರ ನೋಂದಣಿ ಮಾಡಿಸಿದ್ದೆ. ಆದರೆ, ಪಕ್ಷ ಟಿಕೆಟ್ ನೀಡದ್ದರಿಂದ ಬೇಸತ್ತು ಸ್ಪರ್ಧೆಗೆ ಇಳಿದಿದ್ದೆ. ರಾಜ್ಯಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರನ್ನು ನೋಂದಾಯಿಸಿದ್ದೇನೆ. ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ ಎಂದರು.

ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮನೆಗೆ ಭೇಟಿ ನೀಡಿ, ಉತ್ತಮ ಸ್ಥಾನಮಾನ ನೀಡುವ ಕುರಿತು ಮನವರಿಕೆ ಮಾಡಿದ್ದರು. ಬಳಿಕ ಡಿ.ಕೆ. ಶಿವಕುಮಾರ, ಬಿ.ಕೆ. ಹರಿಪ್ರಸಾದ, ಸತೀಶ ಜಾರಕಿಹೊಳಿ ಹಾಗೂ ರುದ್ರಪ್ಪ ಲಮಾಣಿ ಅವರು ಬೆಂಗಳೂರಿಗೆ ಕರೆಸಿ ಮಾತನಾಡಿ, ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಪಕ್ಷದೊಂದಿಗೇ ಇರುವಂತೆ ಸಂದೇಶ ನೀಡಿದ್ದಾರೆ. ಹೀಗಾಗಿ ನಾಮಪತ್ರ ಹಿಂಪಡೆದಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಮೇಲೆ ನಂಬಿಕೆ ಮತ್ತು ವಿಶ್ವಾಸವಿದ್ದು, ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮೋಹನ್ ಲಿಂಬಿಕಾಯಿ ಪರ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ತಮ್ಮ ನಿರ್ಧಾರದಿಂದ ಶಿಕ್ಷಕರ ಸಂಘಟನೆಗಳು, ಬೆಂಬಲಿಗರು ಹಾಗೂ ಹಿತೈಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಪಕ್ಷದ ನಿಲುವು ಮತ್ತು ಸರ್ಕಾರದ ಸಾಧನೆಗಳನ್ನು ವಿವರಿಸಿ ಮೋಹನ್ ಲಿಂಬಿಕಾಯಿ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತೇನೆ ಎಂದರು.

ಪದವೀಧರರ ಸಮಸ್ಯೆಗಳಿಗೆ ಸ್ಪಂದನೆ: ಕಾಂಗ್ರೆಸ್ ಸರ್ಕಾರ ಪದವೀಧರರು, ಉದ್ಯೋಗಿಗಳು ಹಾಗೂ ನಿರುದ್ಯೋಗಿಗಳಿಗೆ ವಿವಿಧ ರೀತಿಯಲ್ಲಿ ನೆರವಾಗಿದೆ. ಅತಿಥಿ ಉಪನ್ಯಾಸಕರ ವೇತನ ಶ್ರೇಣಿ ಹೆಚ್ಚಳ, ವೈದ್ಯಕೀಯ ಸೌಲಭ್ಯ ಹಾಗೂ ಮಹಿಳೆಯರಿಗೆ ಹೆರಿಗೆ ರಜೆ ನೀಡುವಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಅತಿಥಿ ಶಿಕ್ಷಕರ ಕಾಯಂ, ಅನುದಾನಿತ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ಸರಕಾರದ ಮೇಲೆ ಒತ್ತಡ ಹೇರಲಾಗುವುದು. ವೇತನ ಶ್ರೇಣಿ ಹೆಚ್ಚಳಕ್ಕೂ ಒತ್ತಾಯಿಸಲಾಗಿದ್ದು, ಪದವೀಧರರ ಹಿತಾಸಕ್ತಿಗೆ ಸರ್ಕಾರ ಸ್ಪಂದಿಸಿದೆ.

ಅಹಿಂದ ನಾಯಕರನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಹಿಂದ ಸಿದ್ಧಾಂತವೇ ನಮ್ಮ ಸಿದ್ಧಾಂತ. ಹೈಕಮಾಂಡ್ ನಾಯಕರು ಕರೆದು ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಪಕ್ಷದ ನಾಯಕರ ಮೇಲೆ ವಿಶ್ವಾಸವಿದ್ದು, ಯಾವ ಸ್ಥಾನಮಾನ ನೀಡುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಎಂ.ಎಂ. ಮೈದೂರ, ಶಹರ ಘಟಕದ ಅಧ್ಯಕ್ಷ ಗುಡ್ಡನಗೌಡ ಅಂದಾನಿಗೌಡ್ರ, ಶಂಕರ ಮೆಹರವಾಡೆ, ಬಾಬುಸಾಬ್ ಮೊಮಿನಗಾರ, ಮಹಾಲಿಂಗಯ್ಯ ಪಾಟೀಲ, ರಾಧಾ ಸವಣೂರು, ಶಿವರಾಜ ಮತ್ತಿಹಳ್ಳಿ ಉಪಸ್ಥಿತರಿದ್ದರು.