ಸಾರಾಂಶ
ಶಿರಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಗೂಡಿ ಬನವಾಸಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಶನಿವಾರ ತಾಲೂಕಿನ ಬನವಾಸಿಯ ಮಧುಕೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪಂಪವನ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ, ಮಧುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.ಮಧುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ₹೧.೭೪ ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಲು ಯೋಜನೆ ಹಾಕಲಾಗಿದೆ. ಕಂದಬೋತ್ಸವ ಸಂದರ್ಭದಲ್ಲಿ ನುಡಿದಂತೆ ಪಂಪವನ ಅಭಿವೃದ್ಧಿ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದು, ಈಗಾಗಲೇ ಪಂಪವನದ ಸುತ್ತ ತಂತಿ ಬೇಲಿ ಹಾಕಲು ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿ ಕಾರ್ಯಗಳು ತಾತ್ಕಾಲಿಕವಾಗದೇ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ತಂತಿ ಬೇಲಿಯ ಬದಲು ಕಂಪೌಂಡ್ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಈ ಬಾರಿಯ ಕದಂಬೋತ್ಸವ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತರಾದ ಡಾ.ಬಿ.ಎ. ವಿವೇಕ ರೈ ಸಲಹೆ ಸ್ವೀಕರಿಸಿ, ಆದಿಕವಿ ಪಂಪನ ವರ್ಣನೆಯಂತೆ ಪಂಪವನವನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಅರಣ್ಯ ಇಲಾಖೆಯ ಸಹಕಾರದಲ್ಲಿ ಬಗೆ ಬಗೆಯ ಮರಗಳನ್ನು ನೀಡಲಾಗುವುದು. ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿಯ ಯಾತ್ರಿ ನಿವಾಸವನ್ನು ದುರಸ್ತಿ ಮಾಡಿ, ಕಡಿಮೆ ದರದಲ್ಲಿ ಪ್ರವಾಸಿಗರಿಗೆ ಯಾತ್ರಿ ನಿವಾಸ ದೊರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.ಮಧುಕೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಗ್ರೇಡ್-೨ ತಹಶೀಲ್ದಾರ್ ರಮೇಶ ಹೆಗಡೆ ಮಾತನಾಡಿ, ಮಧುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ವಿವಿಧ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರಾಜಶೇಖರ ಒಡೆಯರ್, ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್.ನಾಯ್ಕ, ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾಸಿಂ ಖಾನ್, ಉಪಾಧ್ಯಕ್ಷ ಸಿದ್ದವೀರೇಶ ನರೇಗಲ್, ಸದಸ್ಯರಾದ ಗೀತಾ ಚನ್ನಯ್ಯ, ನಾಗರಾಜ ಉಪ್ಪಾರ, ಜೈರುದ್ದೀನ್ ಸಾಬ್ ಇದ್ದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ವಿ.ಎಸ್ ಪಾಟೀಲ್, ನಿರ್ಮಿತಿ ಕೇಂದ್ರದ ಸಹಾಯಕ ಅಭಿಯಂತರ ಕುಮಾರ್ ಶೆಟ್ಟಿ, ಗುತ್ತಿಗೆದಾರ ಗುಣಶೇಖರ ಪಿಳ್ಳೈ, ರಥಶಿಲ್ಪಿ ರಾಜಗೋಪಾಲ್ ಆಚಾರ್ಯ, ಮಾಜಿ ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಗ್ರಾಪಂ ಸದಸ್ಯರಾದ ಗಜಾನನ ಗೌಡ, ವಿನಯಗೌಡ, ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಶಿವಕುಮಾರ ದೇಸಾಯಿಗೌಡ, ಪ್ರಕಾಶ ಬಂಗ್ಲೆ, ವೀರಭದ್ರ ಗೌಡ, ದತ್ತು ಭಟ್, ಶಿವಾಜಿ ಕಾಳೇರಮನೆ, ಗಣಪತಿ ನಾಯ್ಕ, ಜಯಶಂಕರ ಮೇಸ್ತ್ರಿ, ಶಿವಾನಂದ ನಾಯ್ಕ, ಮಹಾಬಲ ಆರೇರ, ರಾಜೇಶ ಮೇಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಮಾರುತಿ ಉಪ್ಪಾರ ನಿರೂಪಿದರು. ಪ್ರಕಾಶ ಬಂಗ್ಲೆ ವಂದಿಸಿದರು.