ಸಾರಾಂಶ
ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರಿಗೆ ಗೌರವ ಸಮರ್ಪಣೆ, ಪುಸ್ತಕ ಬಿಡುಗಡೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಂಧಮಕ್ಕಳ ಪಾಠಶಾಲೆ ೧೯೯೦ ರಲ್ಲಿ ಆರಂಭಗೊಂಡಿದ್ದು, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶೃಂಗೇರಿ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ ತಿಳಿಸಿದರು.ಶಾಲೆಯಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರಿಗೆ ಗೌರವ ಸಮರ್ಪಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂಧಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ಉಚಿತ ಊಟ, ವಸತಿ, ಶಿಕ್ಷಣ, ವೈದ್ಯಕೀಯ ಸೇವೆ, ಸಮವಸ್ತ್ರ, ಶಿಕ್ಷಣ ಸಾಮಾಗ್ರಿಗಳನ್ನು ಉಚಿತವಾಗಿ ಪಡೆದು ಹಲವು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿ ದ್ದಾರೆ. ಶಾಲೆ ಅಧ್ಯಕ್ಷರು ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ತಾವು ಮತ್ತು ಶಾಸಕ ಎಚ್.ಡಿ ತಮ್ಮಯ್ಯ, ಮುಖ್ಯಮಂತ್ರಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಸಚಿವರನ್ನು ಭೇಟಿಮಾಡಿ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ತಾವು ಜಿಪಂ ಅಧ್ಯಕ್ಷರಾಗಿದ್ದಾಗ ಬರುತ್ತಿದ್ದ ಟಿಎ, ಡಿಎಯನ್ನು ಈ ಶಾಲೆಗೆ ನೀಡುತ್ತಿದ್ದೇನೆ. ಮುಂದೆ ವಯಕ್ತಿಕವಾಗಿ ₹೧ ಲಕ್ಷ ದೇಣಿಗೆ ನೀಡುವ ಜೊತೆಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ₹೧೦ ಲಕ್ಷ ನೀಡುವುದಾಗಿ ಭರವಸೆ ನೀಡಿದ ಅವರು, ಈ ರೀತಿ ದೇವರ ಕೆಲಸ ಮಾಡುತ್ತಿರುವ ಡಾ. ಜೆ.ಪಿ ಕೃಷ್ಣೇಗೌಡ ಮತ್ತು ಅವರ ತಂಡಕ್ಕೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಆಶಾಕಿರಣ ಅಂಧಮಕ್ಕಳ ಶಾಲೆ ಅಧ್ಯಕ್ಷರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಶಾಲೆಯನ್ನು ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿಸಿದ್ದ ಪರಿಣಾಮ ಸೌಲಭ್ಯಗಳಿಂದ ವಂಚಿತವಾಗಿದೆ. ಶಾಲಾ ಶಿಕ್ಷಣ ಇಲಾಖೆಗೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದರ ಜೊತೆಗೆ ಈ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯ ಕೊಡಿಸುವಲ್ಲಿ ಶ್ರಮಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.ಡಾ. ಜೆ.ಪಿ. ಕೃಷ್ಣೇಗೌಡ ಪುತ್ರಿ ವರ್ಷ ತಂದೆಯ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಹಿಂದೆ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ನಡೆದ ನೆನಪುಗಳನ್ನು ಸ್ಮರಿಸಿಕೊಂಡ ಅವರು, ರಾಜ್ಯದಲ್ಲಿ ₹೧.೭೦ ಲಕ್ಷ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ರಚನೆ ಮಾಡಿ ₹೨೦೦ ಕೋಟಿ ಅನುದಾನ ಮೀಸಲಿಟ್ಟು ಪ್ರತೀ ಸ್ತ್ರೀಶಕ್ತಿ ಸಂಘಕ್ಕೆ ₹೫ ಸಾವಿರ ಸುತ್ತುನಿಧಿ ಕೊಡುವ ಮೂಲಕ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿಸುವುದಾಗಿ ತಿಳಿಸಿದರು.ಅರ್ಚನೆ, ಅಭಿಷೇಕ ದೇವರಿಗೆ ಮಾಡುತ್ತೇವೆ. ಅದೇ ರೀತಿ ಅನಾಥ, ಅಂಗವಿಕಲ, ವೃದ್ಧರ ಸೇವೆ ಮಾಡುವುದು ಅದಕ್ಕಿಂತ ಹೆಚ್ಚು ಶ್ರೇಷ್ಟ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಅಧ್ಯಕ್ಷರು ಹಾಗೂ ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಇದೊಂದು ಅಭೂತಪೂರ್ವ ಸಮಾರಂಭ, ಈ ಶಾಲೆ ಶಿಕ್ಷಕರಿಗೆ ವಸತಿ ಇರಲಿಲ್ಲ, ಟ್ರಸ್ಟ್‌ನಿಂದ ಕಾವೇರಿ ವಸತಿ ಗೃಹವನ್ನು ಆದಿ ಚುಂಚನಗಿರಿ ಶೃಂಗೇರಿ ಶಾಖಾಮಠದ ಗುಣನಾಥ ಶ್ರೀಗಳು ಉದ್ಘಾಟಿಸಿದ್ದಾರೆಂದು ಹೇಳಿದರು.ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಡಾ. ಹರ್ಷ, ಮಹೇಶ್, ಶಶಿಪ್ರಸಾದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಜಾನಪದ ಸಂಘದ ಅಧ್ಯಕ್ಷ ಸುರೇಶ್, ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ, ಮುಖ್ಯ ಶಿಕ್ಷಕ ಲಕ್ಷ್ಮಣ್‌ಗೌಡ, ಆಶ್ರಯ ಫೌಂಡೇಷನ್ ಅಧ್ಯಕ್ಷ ವಿ.ಪಿ. ಸಾಗರ್ ಮತ್ತಿತರರು ಉಪಸ್ಥಿತರಿದ್ದರು.