ದರ್ಶನ್ ಎಲ್ಲಿಗೆ ಪ್ರಚಾರಕ್ಕೆ ಹೋಗಬೇಕು ಎಂದು ನಾನು ಹೇಳುವುದಿಲ್ಲ: ಸುಮಲತಾ

| Published : Apr 20 2024, 01:02 AM IST / Updated: Apr 20 2024, 11:50 AM IST

ದರ್ಶನ್ ಎಲ್ಲಿಗೆ ಪ್ರಚಾರಕ್ಕೆ ಹೋಗಬೇಕು ಎಂದು ನಾನು ಹೇಳುವುದಿಲ್ಲ: ಸುಮಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಮೋದಿ ಅವರ ಬೆಂಬಲ ಸದಾ ಇದೆ. ಅದಕ್ಕೆ ಈ ಬಾರಿ ನಾನು ಬಿಜೆಪಿ ಸೇರಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

 ಉಡುಪಿ :  ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ 3500 ಕೋಟಿ ರು. ಅನುದಾನ ನೀಡಿದೆ. ನಾನು ಪಕ್ಷೇತರ ಆಗಿದ್ದರೂ ಇಷ್ಟು ಅನುದಾನ ನೀಡಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಮೋದಿ ಅವರ ಬೆಂಬಲ ಸದಾ ಇದೆ ಎಂದು ಇದೇ ಉದಾಹರಣೆ. ಅದಕ್ಕೆ ಈ ಬಾರಿ ನನಗೆ ಬಿಜೆಪಿ ಟಿಕೇಟ್ ನೀಡದಿದ್ದರೂ ನಾನು ಬಿಜೆಪಿ ಸೇರಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಕೆಲವರು ಮತ ವಿಭಜನೆ ಆಗುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಎದುರಾಳಿ ಅಭ್ಯರ್ಥಿ ಡಿ.ಕೆ.ಸುರೇಶ್ ಮೇಲೆ ವಾಗ್ದಾಳಿ ನಡೆಸಿದ ಅವರು, ಅಭಿವೃದ್ಧಿ ಮಾಡದಿದ್ದಾಗ, ಕೇವಲ ಸುಳ್ಳು ಸ್ವಾರ್ಥ ಹೆಚ್ಚಾದಾಗ ಮತ ವಿಭಜನೆ ಆಗುತ್ತದೆ. ದೇಶದ ಹಿತ, ನಿಸ್ವಾರ್ಥ ಸೇವೆ ಗೆಲ್ಲುತ್ತದೆ ಎಂದರು.

ದರ್ಶನ್ ಗೆ ನಾನು ಹೇಳುವುದಿಲ್ಲ: ನಾನು ಕಳೆದ ಬಾರಿ ಸ್ಪರ್ಧೆ ಮಾಡಿದಾಗಲೂ ದರ್ಶನ್ ಮತ್ತು ಯಶ್ ರನ್ನು ಪ್ರಚಾರಕ್ಕೆ ಕರೆದಿಲ್ಲ. ಅವರಾಗಿಯೇ ಬಂದಿದ್ದಾರೆ, ಈ ಬಾರಿಯೂ ನಾನು ಸ್ಪರ್ಧಿಸಿದ್ದರೆ ಅವರು ಪ್ರಚಾರಕ್ಕೆ ಬರುತಿದ್ದರು. ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಬೇಡಿ ಎಂದು ಆರೋಪಕ್ಕೆ ಲಾಜಿಕ್ ಕೂಡ ಇಲ್ಲ, ಸೆನ್ಸ್ ಕೂಡಾ ಇಲ್ಲ, ಬೇರೆ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗಬೇಡಿ ಎಂದು ಹೇಳುವುದಕ್ಕೆ ನಾನು ಯಾರು? ಪ್ರತಿದಿನ ಅವರಿಗೆ ಫೋನು ಮಾಡಿ ಎಲ್ಲಿಗೆ ಹೋಗ್ತಿದ್ದೀಯ ಯಾರ ಪರ ಪ್ರಚಾರ ಮಾಡ್ತಿದ್ದೀಯಾ ಅಂತ ಕೇಳುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಮಂಡ್ಯದಲ್ಲಿ ನನಗೆ, ಮದ್ದೂರಿನಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು, ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರು, ಪಾಂಡವಪುರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದರು. ತನಗೆ ಪಕ್ಷ ಮುಖ್ಯ ಅಲ್ಲ, ವ್ಯಕ್ತಿ ನನಗೆ ಇಷ್ಟವಾದರೆ ಹೋಗ್ತೀನಿ ಅಂತ ಹೇಳಿದ್ದರು ಎಂದು ಸುಮಲತಾ,ಹೇಳಿದರು.

ಬಿಜೆಪಿ ಹೇಳಿದಲ್ಲಿ ಹೋಗಿ ಪ್ರಚಾರ ಮಾಡುತ್ತಿದ್ದೇನೆ, ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರ ಇನ್ನೂ ಹೇಳಿಲ್ಲ, ಹೇಳಿದರೇ ಹೋಗುತ್ತೇನೆ, ಈ ವಿಚಾರದಲ್ಲಿ ಅನಗತ್ಯ ಚರ್ಚೆ ಬೇಡ, ನಾನು ಬಿಜೆಪಿ ಎನ್ ಡಿ ಎ ಪರ ಪ್ರಚಾರ ಮಾಡುತ್ತೇನೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುಮಲತಾ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಫೋಟೋ ಆರೋಪಕ್ಕೆ ಉತ್ತರಿಸಿದ ಅವರು, ನನ್ನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೂ ಇದ್ದಾರೆ. ಅವರನ್ನು ಕ್ಷೇತ್ರದ ಸಮಾರಂಭದಲ್ಲಿ ಭೇಟಿ ಆಗಿರುತ್ತೇವೆ, ಆಗ ಎಲ್ಲೋ ತೆಗೆದಿರುವ ಫೋಟೋಗಳನ್ನು ಇವಾಗ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದು ಸರ್ವೇಸಾಮಾನ್ಯ ಎಂದರು.

ಅಂಬರೀಶ್ ಗೆ ಕರಾವಳಿ ಇಷ್ಟ: ಉಡುಪಿಗೆ ಮೊದಲೆಲ್ಲಾ ಶೂಟಿಂಗ್ ಗೆ ಬರ್ತಾ ಇದ್ದೇವು. ಅಂಬರೀಶ್ ಅವರಿಗೆ ಕರಾವಳಿ ಅಂದ್ರೆ ತುಂಬಾ ಇಷ್ಟ, ಇಲ್ಲಿ ಬಹಳ ಜನ ಸ್ನೇಹಿತರು ಆಪ್ತರು ಇದ್ದಾರೆ, ಇಲ್ಲಿಗೆ ಬಂದರೆ ನಮ್ಮವರ ಜೊತೆ ಇದ್ದ ಹಾಗೆ ಆಗುತ್ತೆ, ಇವತ್ತು ಉಡುಪಿ ನಾಳೆ ಮೈಸೂರಿನಲ್ಲಿ ಪ್ರವಾಸ ಮಾಡುತ್ತಿದ್ದೇನೆ, ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಇರುತ್ತದೆ ಎಂದರು.