ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
‘1979 ರಿಂದ 1995ರವರೆಗೆ ನಾನೇ ಕಾಂಗ್ರೆಸ್ ಪಕ್ಷದ ಸಂಘಟನೆ ನಿರ್ವಹಿಸಿದ್ದೆ. ಆದರೆ, ಆಗ ನನ್ನ ಬದಲು ಆರ್.ಗುಂಡೂರಾವ್ ಮುಖ್ಯಮಂತ್ರಿ ಆದರು. ಆಮೇಲೆ, ಬಂಗಾರಪ್ಪ ಸಿಎಂ ಆದರು. ಅದಕ್ಕಿಂತ ಮೊದಲು ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದರು. ಆದರೆ, ಆಗ ನಾನು ಸಿಎಂ ಆಗಲಿಲ್ಲ ಎಂದು ಪಶ್ಚಾತ್ತಾಪ ಪಡಲಿಲ್ಲ’ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದರು.ತಾವು ರಚಿಸಿದ ವಿಶ್ವಸಂಸ್ಕೃತಿ ಮಹಾಯಾನ ಸಂಪುಟ-3 ಕೃತಿ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿದರು. 1999ರಲ್ಲಿ ತಮ್ಮ ಬದಲಿಗೆ ಎಸ್.ಎಂ.ಕೃಷ್ಣ ಸಿಎಂ ಆದರು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಮಗೆ ಅರ್ಹತೆ ಇದ್ದರೆ, ಸರದಿ ಬಂದರೆ ಸಿಎಂ ಆಗೇ ಆಗ್ತೀವಿ. ನಾನು 1980ರಲ್ಲೇ ಸಿಎಂ ಆಗಬೇಕಿತ್ತು, ಆಗಲಿಲ್ಲ. ಹತ್ತು ವರ್ಷ ಕಾದೆ. ಹಾಗಂತ ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಅಂತ ಹೇಳಲಿಕ್ಕೆ ಆಗೋದಿಲ್ಲ. ನಾವು ಎಷ್ಟು ವರ್ಷ ಸಿಎಂ ಆದೆವು ಅನ್ನೋದು ಮುಖ್ಯವಲ್ಲ, ಏನು ಕೆಲಸ ಮಾಡಿದೆವು ಎಂಬುದು ಮುಖ್ಯ ಎಂದು ಮೊಯ್ಲಿ ಹೇಳಿದರು.
ಸಿಎಂ ಹುದ್ದೆ ಶಾಶ್ವತವಲ್ಲ. ಅವರವರ ಅವಧಿಯಲ್ಲಿ ಏನು ಮಾಡಬೇಕು ಅದನ್ನು ಮಾಡ್ತಾರೆ. ಈಗಿನ ಸಿಎಂ ಆಗಲಿ, ಯಾವುದೇ ಸಿಎಂ ಆಗಲಿ ಅದರ ಬಗ್ಗೆ ಚಿಂತೆ ಮಾಡಬಾರದು. ಸಿಎಂ ಸ್ಥಾನದಲ್ಲಿ ಇದ್ದಷ್ಟು ದಿನ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.ರಾಜಕೀಯದಲ್ಲಿ ಅಧಿಕಾರಕ್ಕೆ ಹಂಬಲಿಸೋದು ಸಾಮಾನ್ಯ. ಕೆಲವರಿಗೆ ಸಿಗುತ್ತದೆ, ಕೆಲವರಿಗೆ ಸಿಗೋದಿಲ್ಲ. ಸಾಯೋವರೆಗೂ ಕೆಲವರಿಗೆ ಮುಖ್ಯಮಂತ್ರಿ ಆಗುವ ಯೋಗ ಸಿಗೋದಿಲ್ಲ. ಅಧಿಕಾರಕ್ಕಾಗಿ ಪೈಪೋಟಿ ಇದ್ದೇ ಇರುತ್ತದೆ. ಈಗ ಸಿದ್ದರಾಮಯ್ಯನವರು ನಾನೇ ಐದು ವರ್ಷ ಸಿಎಂ ಆಗಿ ಆಡಳಿತ ಮಾಡ್ತೀನಿ ಅಂತಾರೆ. ಸಹಜವಾಗಿ ಅವರಿಗೆ ಆ ಆಸೆ ಇದೆ. ಅದರ ಬಗ್ಗೆ ತಪ್ಪು ತಿಳಿದುಕೊಳ್ಳಲು ಬರಲ್ಲ. ಹಾಗೆಯೇ, ಡಿಸಿಎಂ ಆದವರು ಸಿಎಂ ಆಗಬೇಕು ಅಂತ ಆಸೆ ಪಡ್ತಾರೆ. ಆದರೆ, ಕೆಲವೊಂದು ಬಾರಿ ಡಿಸಿಎಂ ಆದವರು, ಡಿಸಿಎಂ ಆಗಿಯೇ ನಿವೃತ್ತಿಯಾಗಬಹುದು. ನನಗೆ ಸಿಗಲಿಲ್ಲ ಎಂದು ಪಶ್ಚಾತ್ತಾಪ ಪಡೋದು ಬೇಡ ಎಂದು ಕಿವಿಮಾತು ಹೇಳಿದರು.
ಇನ್ನು, ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸ್ಥಾನದ ಬಗ್ಗೆ ಒಲುವು ತೋರುತ್ತಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಒಲವು ತೋರಿಸುವುದು ಇದ್ದಿರಬಹುದು. ನನ್ನ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಬೇಕು ಅಂತ ಎಲ್ಲರಿಗೂ ಆಸೆ ಇರುತ್ತದೆ ಎಂದರು.+++
ಲಂಚ ಪಡೆಯೋದು ನಿಂತರೆ ಎಲ್ಲದಕ್ಕೂ ಹಣವಿದೆ:ಗ್ಯಾರಂಟಿಗಳಿಂದ ಅಭಿವೃದ್ಧಿ ಕೆಲಸಕ್ಕೆ ಹಣದ ಕೊರತೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಲಂಚ ಪಡೆಯೋದು ನಿಂತರೆ ಎಲ್ಲದಕ್ಕೂ ಹಣವಿದೆ. ಸಂಪನ್ಮೂಲ ಕ್ರೋಢೀಕರಣವಾದ ತೆರಿಗೆ, ವ್ಯಾಟ್, ಜಿಎಸ್‌ಟಿ ಇರಬಹುದು. ಅದನ್ನೆಲ್ಲಾ ಸರಿಯಾಗಿ ವಸೂಲಿ ಮಾಡಿದರೆ ಎಲ್ಲದಕ್ಕೂ ಹಣ ಸಿಗುತ್ತದೆ. ಸರ್ಕಾರದಲ್ಲಿ ಹಣವಿಲ್ಲ ಅಂತೇನಿಲ್ಲ, ನಾನು ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿರೋನು. ಸರಿಯಾಗಿ ಆಡಳಿತ ಮಾಡಿದರೆ ಎಲ್ಲದಕ್ಕೂ ಹಣ ಇದೆ. ಖರ್ಚು ಮಾಡುವವರಿಗೆ ಹಣವಿದೆ. ಖರ್ಚು ಮಾಡದವರಿಗೆ ಹಣವಿಲ್ಲ ಎಂದರು.