ಸಾರಾಂಶ
ಕನ್ನಡಪ್ರಭ ವಾರ್ತೆ
ಹುಬ್ಬಳ್ಳಿ: ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ನಗರದಲ್ಲಿ "ನಾನೂ ಕರಸೇವಕ ನನ್ನನ್ನೂ ಬಂಧಿಸಿ " ಅಭಿಯಾನವನ್ನು ಶುಕ್ರವಾರ ಆರಂಭಿಸಲಾಗಿದೆ. ಅಭಿಯಾನದ ಹಿನ್ನೆಲೆಯಲ್ಲಿ ಶಹರ ಠಾಣೆಯ ಎದುರು ಧರಣಿ ನಡೆಸುತ್ತಿದ್ದ 30ಕ್ಕೂ ಹೆಚ್ಚು ಬಿಜೆಪಿ ಮುಖಂಡರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
31 ವರ್ಷದ ಹಿಂದಿನ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಶ್ರೀಕಾಂತ ಪೂಜಾರಿಯನ್ನು ಪೊಲೀಸರು ಇತ್ತೀಚಿಗೆ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ನಾನೂ ಕರಸೇವಕ ನನ್ನನ್ನೂ ಬಂಧಿಸಿ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ.
ಅದರಂತೆ ಹುಬ್ಬಳ್ಳಿಯಲ್ಲೂ ಮಾಜಿ ಶಾಸಕ ಅಶೋಕ ಕಾಟವೆ ನೇತೃತ್ವದಲ್ಲಿ ಅಭಿಯಾನ ಶುರುವಾಯಿತು. ಮಧ್ಯಾಹ್ನ 3.30ಕ್ಕೆ ಶಹರ ಠಾಣೆಗೆ ತೆರಳಿದ ಕರಸೇವಕರು, ಠಾಣೆಯ ಎದುರಿಗೆ ಧರಣಿ ಕುಳಿತರು. ಈ ವೇಳೆ ಕರಸೇವಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.
ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಧರಣಿ ಮುಂದುವರಿಯಿತು. ಬಳಿಕ ಪೊಲೀಸರು ಧರಣಿ ನಡೆಸುತ್ತಿದ್ದ 30ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕರೆದುಕೊಂಡು ಹೋದರು. ಬಳಿಕ ಎಲ್ಲರನ್ನು ಬಿಡುಗಡೆಗೊಳಿಸಲಾಗಿದೆ.
ಈ ವೇಳೆ ಮಾತನಾಡಿದ ಕಾಟವೆ, 31 ವರ್ಷದ ಹಿಂದಿನ ಪ್ರಕರಣವನ್ನು ಕೆದಕಿ ಈಗ ಬಂಧಿಸಲಾಗುತ್ತಿದೆ. ಕರಸೇವಕರನ್ನು ಹೆದರಿಸುವ ಉದ್ದೇಶ ಇದರಲ್ಲಿ ಅಡಗಿದೆ. ಆಗ ಹೋರಾಟ ಮಾಡಿದ ಕೆಲ ಕಾರ್ಯಕರ್ತರನ್ನು ಬಂಧಿಸಿದರೆ ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ಹಿಂದೂಗಳು ಹೋಗಲು ಹಿಂಜರಿಯುತ್ತಾರೆ ಎಂಬ ದುರುದ್ದೇಶ ಸರ್ಕಾರದ್ದು. ಈ ಹಿನ್ನೆಲೆಯಲ್ಲಿ ನಾವು ಆಗ ಕರಸೇವಕರಾಗಿ ಹೋರಾಟ ನಡೆಸಿದ್ದೇವೆ. ಆದಕಾರಣ ನಮ್ಮನ್ನು ಬಂಧಿಸಿ ಎಂದು ಧರಣಿ ನಡೆಸಿದ್ದೇವೆ ಎಂದರು.
ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಜಯತೀರ್ಥ ಕಟ್ಟಿ, ರಾಜು ಜರತಾರಘರ, ವೆಂಕಟೇಶ ಕಾಟವೆ ಸೇರಿದಂತೆ 30ಕ್ಕೂ ಹೆಚ್ಚು ಜನ ಪ್ರತಿಭಟನೆ ನಡೆಸಿದರು.