ಸಾರಾಂಶ
ಮುಂಡರಗಿ: ತಾವು ಅ. 6ರಂದು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ನಂತರ ಸಿಂಗಟಾಲೂರು ಸುಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಐಎಎಸ್, ಕೆಎಎಸ್ ತರಬೇತಿ ಶಿಬಿರ ನಡೆಸಲಾಗುವುದು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಹೇಳಿದರು.
ಅವರು ಭಾನುವಾರ ಮುಂಡರಗಿ ಪಟ್ಟಣದಲ್ಲಿ ಎಸ್.ವಿ. ಪಾಟೀಲನಿವಾಸದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ನಮ್ಮ ಸಮಾಜದ ಮಕ್ಕಳು ಸಹ ಐಎಎಸ್,ಕೆಎಎಸ್ ಆಗಬೇಕು ಎನ್ನುವ ಉದ್ದೇಶದಿಂದ ಈ ಶಿಬಿರ ಮಾಡಲು ನಿರ್ಧರಿಸಲಾಗಿದೆ. ತಾವು ಕಳೆದ ಅನೇಕ ವರ್ಷಗಳಿಂದ ರಾಜ್ಯದ 7 ಸಾವಿರ ಗ್ರಾಮಗಳನ್ನು ಸುತ್ತಿ ಸಮಾಜದ ಸಂಘಟನೆ ಮಾಡಿದ್ದರ ಫಲವಾಗಿ ಇಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ.ಅ.6 ರಂದು ನಮ್ಮ ಕಮೀಟಿಯ ಪದಗ್ರಹಣ ಜರುಗಲಿದ್ದು, ಅಂದು ಸಮಾರು 10 ಸಾವಿರ ಜನ ಸೇರಲಿದ್ದು, ಮುಂಡರಗಿ ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ನನ್ನ ಅವಧಿಯಲ್ಲಿ ಅನಿವಾರ್ಯ ಕಾರಣಗಳಿಂದ ಸಮಾಜದಿಂದ, ಸಂಘಟನೆಯಿಂದ ದೂರ ಉಳಿದವರನ್ನು ಒಂದುಗೂಡಿಸಿ ಸಂಘಟನೆ ಮಾಡುವೆ.₹3 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಿರುವ ಸಮಾಜದ ಕಲ್ಯಾಣ ಮಂಟಪದ ಕಾರ್ಯಕ್ಕೆ ತಾವು ಕೈ ಜೋಡಿಸಿ ಅದನ್ನು ಮುಕ್ತಾಯಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಪಂಚಮಸಾಲಿ ರಾಜ್ಯ ಯುವ ಸಂಘಟನೆ ಕಾರ್ಯದರ್ಶಿ ಕಿಚಡಿ ಕೊಟ್ರೇಶ ಮಾತನಾಡಿ, ಪಂಚಮಸಾಲಿ ಸಮಾಜದ ಸಂಘಟನೆಯಲ್ಲಿ ಎಲ್ಲರೂ ಒಂದಾಗಿ ಕಾರ್ಯ ನಿರ್ವಹಿಸೋಣ ಸಮಾಜದ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ ಹೊಂದಿರುವ ಸೋಮನಗೌಡ ಪಾಟೀಲ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮಗೆಲ್ಲ ಆನೆ ಬಲ ಬಂದಂತಾಗಿದೆ. ಅವರಿಗೆ ರಾಜ್ಯಾದ್ಯಂತ ಎಲ್ಲ ಪಕ್ಷಗಳ ನಾಯಕರ ಹಾಗೂ ಸಮಾಜದ ಗುರುಹಿರಿಯರ ಪರಿಚಯವಿದ್ದು, ಅವರಿಂದ ಸಂಘಟನೆ ಉನ್ನತವಾಗಿ ಬೆಳೆಯಲಿದೆ ಎಂದರು.ಪ್ರೊ.ಆರ್.ಎಲ್.ಪೊಲೀಸ್ ಪಾಟೀಲ, ರಜನೀಕಾಂತ ದೇಸಾಯಿ ಸೇರಿದಂತೆ ಅನೇಕರು ಮಾತನಾಡಿದರು. ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಏಳ್ಗೆಗಾಗಿ ತಾಲೂಕಿನಲ್ಲಿ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ರಾಜ್ಯ ಸಂಘಕ್ಕೆ ನಮ್ಮ ತಾಲೂಕಿನ ಬೆಂಬಲ ಸದಾ ಇರುತ್ತದೆ.ಅದರಂತೆ ರಾಜ್ಯ ಸಂಘಟನೆಯೂ ಸಹ ನಮ್ಮ ಸಂಘಟನೆಗೆ ಬೆಂಬಲವಾಗಿ ನಿಲ್ಲಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪರವಾಗಿ ನೂತನ ಅಧ್ಯಕ್ಷ ಸೋಮನಗೌಡ ಪಾಟೀಲ ಪ್ರ.ಕಾರ್ಯದರ್ಶಿ ಪರಮೇಶಿ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಕಬಡ್ಡಿ ಆಟಗಾರ ಸುದೀಪ ಹೊಂಬಳಗಟ್ಟಿ ಪರವಾಗಿ ನಾಗರಾಜ ಹೊಂಬಳಗಟ್ಟಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಈರಣ್ಣ ಕರಿಬಿಷ್ಠಿ, ಪ್ರಕಾಶ ಪಾಟೀಲ ಸೇರಿದಂತೆ ಸಮಾಜದ ಗುರುಹಿರಿಯರು, ಯುವಕರು ಉಪಸ್ಥಿತರಿದ್ದರು.